ಇಮ್ರಾನ್ ಖಾನ್‌ಗೆ ಸೂಕ್ತ ಚಿಕಿತ್ಸೆ ನೀಡಿ: ಪಾಕಿಸ್ತಾನಕ್ಕೆ ಸುನೀಲ್ ಗವಾಸ್ಕರ್, ಕಪಿಲ್ ದೇವ್ ಮನವಿ
Imran Khan: ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಕ್ರಿಕೆಟ್ ದಂತಕಥೆ ಇಮ್ರಾನ್ ಖಾನ್ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಹಲವು ದೇಶದಗಳ ಕ್ರಿಕೆಟ್ ದಿಗ್ಗಜರು ಪಾಕಿಸ್ತಾನ ಸರ್ಕಾರಕ್ಕೆ ಮಹತ್ವದ ಮನವಿ ಮಾಡಿದ್ದಾರೆ. ಈ ಕುರಿತ
ಭಾರತದ ದಿಗ್ಗಜ ಕ್ರಿಕೆಟಿಗರಾದ ಸುನಿಲ್ ಗಾವಸ್ಕರ್, ಕಪಿಲ್ ದೇವ್ ಸೇರಿದಂತೆ ವಿಶ್ವದ ವಿವಿಧ ದೇಶಗಳ 21 ಮಾಜಿ ಕ್ರಿಕೆಟಿಗರು ಜಂಟಿ ಪತ್ರವೊಂದಕ್ಕೆ ಸಹಿ ಹಾಕಿದ್ದು, ಇಮ್ರಾನ್ ಖಾನ್‌ಗೆ ತಕ್ಷಣವೇ ಸೂಕ್ತ ವೈದ್ಯಕೀಯ ಆರೈಕೆ ಹಾಗೂ ಮಾನವೀಯ ನೆರವು ನೀಡುವಂತೆ ಪಾಕಿಸ್ತಾನ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದು ಇದೀಗ ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಪ್ರಸ್ತುತ ಜೈಲಿನಲ್ಲಿರುವ 73 ವರ್ಷದ ಇಮ್ರಾನ್ ಖಾನ್ ಅವರ ಆರೋಗ್ಯದ ಕುರಿತು ಬರುತ್ತಿರುವ ವರದಿಗಳು ಕಳವಳಕಾರಿಯಾಗಿವೆ ಎಂದು ಮಾಜಿ ನಾಯಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 1992ರಲ್ಲಿ ಪಾಕಿಸ್ತಾನಕ್ಕೆ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಮತ್ತು ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಇಮ್ರಾನ್ ಅವರಿಗೆ ಮೂಲಭೂತ ಹಕ್ಕುಗಳು ಹಾಗೂ ತುರ್ತು ವೈದ್ಯಕೀಯ ಸೌಲಭ್ಯಗಳನ್ನು ತಕ್ಷಣವೇ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ತಪಾಸಣೆಗೆ ತಕ್ಷಣ ಅನುಮತಿ ನೀಡುವಂತೆ ಮನವಿ
ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದರೂ, ಒಬ್ಬ ಕ್ರೀಡಾಪಟುವಾಗಿ ಮತ್ತು ದೇಶಕ್ಕೆ ಅಪ್ರತಿಮ ಸೇವೆ ಸಲ್ಲಿಸಿದ ವ್ಯಕ್ತಿಯಾಗಿ ಅವರಿಗೆ ಸೂಕ್ತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಪಡೆಯುವ ಮಾನವೀಯ ಹಕ್ಕಿದೆ ಎಂಬುದನ್ನು ಪತ್ರದಲ್ಲಿ ಎತ್ತಿಹಿಡಿಯಲಾಗಿದೆ. ಇಮ್ರಾನ್ ಅವರ ಕುಟುಂಬದ ವೈದ್ಯರು ಹಾಗೂ ಸ್ವತಂತ್ರ ವೈದ್ಯಕೀಯ ತಂಡಕ್ಕೆ ಅವರನ್ನು ತಪಾಸಣೆ ಮಾಡಲು ತಕ್ಷಣವೇ ಅನುಮತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಹಲವು ದೇಶಗಳ ಕ್ರಿಕೆಟ್ ದಿಗ್ಗಜರ ಸಾಥ್
ಭಾರತದ ಮಾಜಿ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್ ಮತ್ತು ಕಪಿಲ್ ದೇವ್ ಅವರ ಹೊರತಾಗಿಯೂ ಈ ಜಂಟಿ ಪತ್ರಕ್ಕೆ ವಿಶ್ವದ ಪ್ರಖ್ಯಾತ ಮಾಜಿ ಕ್ರಿಕೆಟ್ ನಾಯಕರು ಸಾಥ್ ನೀಡಿದ್ದಾರೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ನಾಯಕರು ಈ ಪತ್ರಕ್ಕೆ ಸಹಿ ಮಾಡುವ ಮೂಲಕ ಇಮ್ರಾನ್ ಖಾನ್ ಪರವಾಗಿ ಧ್ವನಿ ಎತ್ತಿದ್ದಾರೆ.
ಕ್ರೀಡಾ ಸ್ಫೂರ್ತಿ ಮೆರೆದ ಮಾಜಿ ಕ್ರಿಕೆಟಿಗರು
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಹಲವು ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಜೈಲಿನಲ್ಲಿ ಅವರಿಗೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ ಮತ್ತು ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿದೆ ಎಂದು ಅವರ ಪಕ್ಷವಾದ 'ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್' (PTI) ಹಾಗೂ ಬೆಂಬಲಿಗರು ಆರೋಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದ ಕ್ರಿಕೆಟ್ ಸಮುದಾಯವು ರಾಜಕೀಯವನ್ನು ಬದಿಗೊತ್ತಿ, ಕ್ರೀಡಾ ಸಹೋದರತ್ವದ ನೆಲೆಯಲ್ಲಿ ಪಾಕಿಸ್ತಾನ ಸರ್ಕಾರಕ್ಕೆ ಈ ಮನವಿ ಸಲ್ಲಿಸುವ ಮೂಲಕ ಮಾನವೀಯತೆ ಮೆರೆದಿದೆ.


Click it and Unblock the Notifications
