Sunil Chhetri: 19 ವರ್ಷಗಳ ಸುದೀರ್ಘ ಫುಟ್‌ಬಾಲ್ ಪ್ರಯಾಣ ಅಂತ್ಯ; ಸುನಿಲ್ ಚೆಟ್ರಿಗೆ ಕಣ್ಣೀರಿನ ವಿದಾಯ
ಭಾರತದ ಖ್ಯಾತ ಫುಟ್ಬಾಲ್ ತಾರೆ, ದಿಗ್ಗಜ ಆಟಗಾರ ಸುನಿಲ್ ಚೆಟ್ರಿ ತಮ್ಮ 19 ವರ್ಷಗಳ ಫುಟ್‌ಬಾಲ್ ಪ್ರಯಾಣವನ್ನು ಅಂತ್ಯಗೊಳಸಿದ್ದಾರೆ. ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಕುವೈತ್ ವಿರುದ್ಧ ಆಡಿದ ಅವರು, ಅಪಾರ ಜನಸ್ತೋಮದ ಬೆಂಬಲದೊಂದಿಗೆ ಬೀಳ್ಕೊಡುಗೆ ಪಡೆದುಕೊಂಡರು.
ಕೋಲ್ಕತಾದ ಸಾಲ್ಟ್‌ಲೇಕ್ ಮೈದಾನದಲ್ಲಿ 2026ರ ಫಿಫಾ ಫುಟ್ಬಾಲ್ ವಿಶ್ವಕಪ್‌ನ 2ನೇ ಸುತ್ತಿನ ಕುವೈತ್ ವಿರುದ್ಧ ಅರ್ಹತಾ ಪಂದ್ಯದಲ್ಲಿ ಗೋಲಿಲ್ಲದೆ ಡ್ರಾನಲ್ಲಿ ಅಂತ್ಯಗೊಂಡಿತು. ಗೆಲುವಿನ ಮೂಲಕ ಸುನಿಲ್ ಚೆಟ್ರಿ ಅವರಿಗೆ ಬೀಳ್ಕೊಡುಗೆ ನೀಡುವ ಭಾರತ ಫುಟ್ಬಾಲ್ ತಂಡದ ಆಸೆ ನೆರವೇರಲಿಲ್ಲ. ಆದರೂ ಸೋಲಿನ ಕಹಿ ಇಲ್ಲದೆ ಅವರು ನಿರ್ಗಮಿಸಿದರು.

ಆಟದ ನಂತರ, ಕೈ ಮುಗಿದು, ಕಣ್ಣುಗಳಲ್ಲಿ ಕಣ್ಣೀರು ಸುರಿಸುತ್ತಾ ನಿರ್ಗಮಿಸುವ ನಾಯಕ ವಿದಾಯ ಹೇಳಲು ಇಡೀ ಮೈದಾನವನ್ನು ಸುತ್ತಿ, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು. ಇಡೀ ಸ್ಟೇಡಿಯಂ ಅವರ ನಾಮಸ್ಮರಣೆಯಲ್ಲಿ ಮಿಂದೆದ್ದಿತು.
ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು
ಉಕ್ಕಿ ಹರಿಯುತ್ತಿದ್ದ ಭಾವನೆಗಳು ಮತ್ತು ಕಣ್ಣೀರಿನಿಂದ ಮುಖವನ್ನು ಮರೆಸಿಕೊಂಡಿದ್ದ ಚೆಟ್ರಿಗೆ ಅಮರಿಂದರ್ ಸಿಂಗ್ ಅಪ್ಪುಗೆ ನೀಡಿದರು. ಬಳಿಕ ತಂಡದ ಆಟಗಾರರಿಂದ ಗಾರ್ಡ್ ಆಫ್ ಹಾನರ್ ಗೌರವ ಪಡೆದರು.
59 ಸಾವಿರ ಅಭಿಮಾನಿಗಳು ಭಾರತ ಫುಟ್‌ಬಾಲ್ ದಂತಕತೆಯ ಕೊನೆಯ ಪಂದ್ಯವನ್ನು ನೋಡಲು ಹಾಜರಿದ್ದರು. ಭಾರತ ಫುಟ್‌ಬಾಲ್ ಅಭಿಮಾನಿಗಳ ಆರಾಧ್ಯ ದೈವ ಸುನಿಲ್ ಚೆಟ್ರಿ ಅವರಿಗೆ ಅಭಿಮಾನಿಗಳು ಭಾವುಕ ಬೀಳ್ಕೊಡುಗೆ ನಿಡಿದರು.
ಅಂತಾರಾಷ್ಟ್ರೀಯ ಫುಟ್ಬಾಲ್ ಜೀವನದಲ್ಲಿ ಸುನಿಲ್ ಚೆಟ್ರಿ 94 ಗೋಲು ಗಳಿಸಿದ್ದಾರೆ. 4 ಬಾರಿ ಹ್ಯಾಟ್ರಿಕ್ ಗಳಿಸಿದ ಸಾಧನೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕೂಡ ಸುನಿಲ್ ಚೆಟ್ರಿ ಅವರಿಗೆ ಅಭಿಮಾನಿಗಳು ಭಾವನಾತ್ಮಕ ವಿದಾಯ ತಿಳಿಸಿದ್ದಾರೆ. ಭಾರತದಲ್ಲಿ ಫುಟ್‌ಬಾಲ್ ಜನಪ್ರಿಯಗೊಳಿಸುವಲ್ಲಿ ಸುನಿಲ್ ಚೆಟ್ರಿ ಅವರ ಪಾತ್ರ ದೊಡ್ಡದು. ದೇಶಾದ್ಯಂತ ಅವರು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.












Click it and Unblock the Notifications