SRH vs PBKS: ಅಭಿಷೇಕ್ ಶರ್ಮಾ ಅಬ್ಬರಕ್ಕೆ ಶರಣಾದ ಪಂಜಾಬ್ ಕಿಂಗ್ಸ್
ಐಪಿಎಲ್ 2025ರ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತೆ ಗೆಲುವಿನ ಹಾದಿಗೆ ಮರಳಿದೆ. ಮೊದಲ ಪಂದ್ಯದಲ್ಲೇ 286 ರನ್ ಗಳಿಸಿ ಅಬ್ಬರದ ಆರಂಭ ಮಾಡಿದ್ದ ಸನ್‌ರೈಸರ್ಸ್ ಬಳಿಕ ಸತತವಾಗಿ 4 ಪಂದ್ಯಗಳಲ್ಲಿ ಸೋಲು ಕಂಡಿತ್ತು, ಅದರಲ್ಲೂ ಬ್ಯಾಟಿಂಗ್ ಸಂಪೂರ್ಣವಾಗಿ ವಿಫಲವಾಗಿತ್ತು, ಆದರೆ ಶನಿವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಎಸ್‌ಆರ್ ಎಚ್ ಬ್ಯಾಟರ್ ಗಳು ಅಬ್ಬರಿಸಿದ್ದು ಮತ್ತೆ ಗೆಲುವಿನ ನಗೆ ಬೀರಿದರು.
ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ 246 ರನ್‌ಗಳ ಗುರಿಯನ್ನು ಇನ್ನೂ 9 ಎಸೆತಗಳು ಬಾಕಿ ಇರುವಂತೆಯೇ ಬೆನ್ನಟ್ಟುವ ಮೂಲಕ ಭರ್ಜರಿ ಗೆಲುವು ಸಾಧಿಸಿದೆ. ಅಭಿಷೇಕ್ ಶರ್ಮಾ ದಾಖಲೆಯ ಶತಕ ಸಿಡಿಸುವ ಮೂಲಕ ಮಿಂಚಿದರು.

ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕನ ನಿರ್ಧಾರ ಸರಿ ಇದೆ ಎನ್ನುವ ರೀತಿ ಪಂಜಾಬ್ ಕಿಂಗ್ಸ್ ಆರಂಭಿಕ ಜೋಡಿ ಅಬ್ಬರಿಸಿದರು. 4 ಓವರ್ ಗಳಲ್ಲೇ 66 ರನ್ ಕಲೆಹಾಕಿದರು. 13 ಎಸೆತಗಳಲ್ಲಿ 36 ರನ್ ಗಳಿಸಿದ್ದ ಪ್ರಿಯಾಂಶ್ ಆರ್ಯ ಔಟಾಗುವ ಮೂಲಕ ಪಂಜಾಬ್ ಮೊದಲ ವಿಕೆಟ್ ಕಳೆದುಕೊಂಡಿತು.
ಆದರೂ ನಾಯಕ ಶ್ರೇಯಸ್ ಅಯ್ಯರ್ ಮತ್ತು ಪ್ರಭ್‌ಸಿಮ್ರನ್ ಸಿಂಗ್ ರನ್ ಓಟವನ್ನು ಮುಂದುವರೆಸಿದರು. ಪ್ರಭ್‌ಸಿಮ್ರನ್ ಸಿಂಗ್ 23 ಎಸೆತಗಳಲ್ಲಿ 7 ಬೌಂಡರಿ 1 ಸಿಕ್ಸರ್ ಸಹಿತ 42 ರನ್ ಗಳಿಸಿ ಔಟಾದರು. ನಾಯಕನ ಆಟವಾಡಿದ ಶ್ರೇಯಸ್ ಅಯ್ಯರ್ 36 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ಸಹಿತ 82 ರನ್ ಗಳಿಸಿದರು. ಶಶಾಂಕ್ ಸಿಂಗ್ ಮತ್ತು ಮ್ಯಾಕ್ಸ್‌ವೆಲ್ ರನ್ ಗಳಿಸದೆ ನಿರಾಸೆ ಮೂಡಿಸಿದರು. ಮಾರ್ಕಸ್ ಸ್ಟೊಯಿನಿಸ್ ಕೊನೆಯ 4 ಎಸೆತಗಳಲ್ಲಿ 4 ಸಿಕ್ಸರ್ ಬಾರಿಸುವ ಮೂಲಕ ಪಂಜಾಬ್ ಕಿಂಗ್ಸ್ 245 ರನ್‌ಗಳ ಬೃಹತ್ ಮೊತ್ತ ಕಲೆಹಾಕಲು ಮಹತ್ವದ ಕೊಡುಗೆ ನೀಡಿದರು.
ಅಭಿಷೇಕ್ ಶರ್ಮಾ ಅಬ್ಬರ
ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಬಾದ್ ಕೂಡ ಸ್ಪೋಟಕ ಆರಂಭ ಪಡೆಯಿತು. ಅಭಿಷೇಕ್ ಶರ್ಮಾ ಮೊದಲ ಎಸೆತದಿಂದಲೇ ಬೌಂಡರಿ ಬಾರಿಸುವ ಮೂಲಕ ಅಬ್ಬರಿಸಿದರು. 28 ರನ್ ಗಳಿಸಿದ್ದಾಗಲೇ ಯಶ್ ಠಾಕೂರ್ ಅವರ ಬೌಲಿಂಗ್‌ನಲ್ಲಿ ಶಶಾಂಕ್ ಸಿಂಗ್ ಅವರಿಗೆ ಕ್ಯಾಚ್ ನೀಡಿ ಅಭಿಷೇಕ್ ಶರ್ಮಾ ಔಟಾದರೂ ಅದು ನೋ ಬಾಲ್ ಆಗಿದ್ದರಿಂದ ಜೀವದಾನ ಸಿಕ್ಕಿತು. 7.1 ನೇ ಓವರ್ ನಲ್ಲಿ ಯುಜ್ವೇಂದ್ರ ಚಹಾಲ್ ಬೌಲಿಂಗ್‌ನಲ್ಲಿ ಕೂಡ ಕ್ಯಾಚ್ ಕೊಟ್ಟರೂ ಅದನ್ನು ಹಿಡಿಯುವಲ್ಲಿ ಚಹಾಲ್ ವಿಫಲವಾದರು. ಎರಡು ಬಾರಿ ಜೀವದಾನ ಪಡೆದ ಅಭಿಷೇಕ್ ಶರ್ಮಾ ಬಳಿಕ ಅಬ್ಬರಿಸಿದರು.
40 ಎಸೆತಗಳಲ್ಲಿ ಶತಕ ಬಾರಿಸಿದರು. 55 ಎಸೆತಗಳಲ್ಲಿ 14 ಬೌಂಡರಿ 10 ಸಿಕ್ಸರ್ ಸಹಿತ 151 ರನ್ ಗಳಿಸುವ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ವೈಯಕ್ತಿತ ರನ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದರು. ಟ್ರಾವಿಸ್ ಹೆಡ್ 37 ಎಸೆತಗಳಲ್ಲಿ 66 ರನ್ ಗಳಿಸಿದರೆ, ಕ್ಲಾಸೆನ್ ಅಜೇಯ 21 ರನ್ ಗಳಿಸಿ ಗೆಲುವಿನ ದಡ ಸೇರಿಸಿದರು.












Click it and Unblock the Notifications