Ind vs Ire T20 : ಐರ್ಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡಕ್ಕೆ ಹೊಸ ಕೋಚ್
ಭಾರತ ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯ ಕೊನೆಯ ಪಂದ್ಯ ಇಂದು (ಆಗಸ್ಟ್ 13) ನಡೆಯಲಿದೆ. ಎರಡೂ ತಂಡಗಳು ಸರಣಿಯಲ್ಲಿ ತಲಾ 2 ಪಂದ್ಯಗಳನ್ನು ಗೆದ್ದಿದ್ದು, ಇಂದು ಗೆಲ್ಲುವ ತಂಡ ಸರಣಿ ಜಯಿಸಲಿದೆ. ಮೊದಲ ಎರಡು ಪಂದ್ಯಗಳಲ್ಲಿ ಸೋತ ಬಳಿಕ ತಿರುಗಿಬಿದ್ದ ಟೀಂ ಇಂಡಿಯಾ ನಂತರದ ಎರಡೂ ಪಂದ್ಯಗಳನ್ನು ಗೆದ್ದು, ಸರಣಿ ಗೆಲ್ಲುವ ತವಕದಲ್ಲಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ನಂತರ ಭಾರತ ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ. ಹಾರ್ದಿಕ್ ಪಾಂಡ್ಯ ಈ ಸರಣಿಯಿಂದ ವಿಶ್ರಾಂತಿ ಪಡೆಯಲಿದ್ದು, ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಗಾಯದಿಂದ ಗುಣಮುಖರಾಗಿ ಮರಳಿದ ಬಳಿಕ ಮೊದಲ ಬಾರಿಗೆ ಕಣಕ್ಕಿಳಿಯಲು ಮುಂದಾಗಿದ್ದಾರೆ.

ಈ ನಡುವೆ ಭಾರತ ತಂಡ ಏಷ್ಯಾಕಪ್ 2023 ಪಂದ್ಯಾವಳಿಗೆ ಸಿದ್ಧತೆ ಮಾಡಿಕೊಳ್ಳುವ ಕಾರಣ, ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವೆಸ್ಟ್ ಇಂಡೀಸ್ ಸರಣಿ ಬಳಿಕ ಭಾರತಕ್ಕೆ ಮರಳಲಿದ್ದು, ಐರ್ಲೆಂಡ್ ವಿರುದ್ಧದ ಸರಣಿಗೆ ಹೊಸ ಕೋಚ್ ಸಾರಥ್ಯ ವಹಿಸಿಕೊಳ್ಳಲಿದ್ದಾರೆ.
ಪ್ರಸ್ತುತ ಭಾರತ ಎ ತಂಡದ ಮುಖ್ಯ ಕೋಚ್ ಹಾಗೂ ಎನ್‌ಸಿಎಯಲ್ಲಿ ಬ್ಯಾಟಿಂಗ್ ಕೋಚ್ ಆಗಿರುವ ಸಿತಾಂಶು ಕೊಟಕ್ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ಕೋಚ್ ಆಗಿ ಕೆಲಸ ಮಾಡಲಿದ್ದಾರೆ. ಮಂಗಳವಾರ ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಡಬ್ಲಿನ್‌ಗೆ ತೆರಳಲಿದ್ದಾರೆ. ಸಾಯಿರಾಜ್ ಬಹುತುಲೆ ಸರಣಿಗೆ ಬೌಲಿಂಗ್ ಕೋಚ್ ಆಗಿದ್ದಾರೆ.
ದ್ರಾವಿಡ್ ಮತ್ತು ಅವರ ಸಹಾಯಕ ಸಿಬ್ಬಂದಿ ಏಷ್ಯಾಕಪ್‌ಗೆ ತಯಾರಿ ಆರಂಭಿಸುವ ಮೊದಲು ಒಂದು ವಾರ ವಿಶ್ರಾಂತಿ ಪಡೆಯಲಿದ್ದಾರೆ. ಅವರ ಬದಲಾಗಿ ವಿವಿಎಸ್ ಲಕ್ಷ್ಮಣ್ ತಂಡದ ಕೋಚ್ ಆಗಬೇಕಿತ್ತು, ಆದರೆ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಉದಯೋನ್ಮುಖ ಶಿಬಿರವನ್ನು ನೋಡಿಕೊಳ್ಳುವುದರಿಂದ, ಅವರು ಸರಣಿಯಿಂದ ದೂರ ಉಳಿಯಲಿದ್ದಾರೆ.
ಸಿತಾಂಶು ಕೋಟಕ್ ಯಾರು?
ಸಿತಾಂಶು ಕೊಟಕ್ ದೇಶೀಯ ಕ್ರಿಕೆಟ್‌ನಲ್ಲಿ ಹೆಸರಾಂತ ತರಬೇತುದಾರ ಮತ್ತು ಆಟಗಾರರಾಗಿದ್ದಾರೆ. ಸೌರಾಷ್ಟ್ರ ತಂಡಕ್ಕಾಗಿ ಆಡಿರುವ ಅವರು, ಫಸ್ಟ್ ಕ್ಲಾಸ್‌ನಲ್ಲಿ 8000 ರನ್‌ಗಳು ಮತ್ತು ಲಿಸ್ಟ್ ಎ ಕ್ರಿಕೆಟ್‌ನಲ್ಲಿ 3000 ರನ್ ಗಳಿಸಿ ಪ್ರಖ್ಯಾತರಾಗಿದ್ದಾರೆ.
ರಾಹುಲ್ ದ್ರಾವಿಡ್ 2019 ರಲ್ಲಿ ಎನ್‌ಸಿಎ ಮುಖ್ಯಸ್ಥರಾದ ನಂತರ, ಕೊಟಕ್ ಭಾರತ ಎ ಕೋಚ್ ಆಗಿ ಅಧಿಕಾರ ವಹಿಸಿಕೊಂಡರು. ಅವರು ಈ ಹಿಂದೆ ನ್ಯೂಜಿಲೆಂಡ್ ಮತ್ತು ಐರ್ಲೆಂಡ್ ಪ್ರವಾಸಗಳಲ್ಲಿ ಟೀಮ್ ಇಂಡಿಯಾ ಜೊತೆಗಿದ್ದರು.
ರಾಹುಲ್ ದ್ರಾವಿಡ್ ಮತ್ತು ಸಿಬ್ಬಂದಿಗೆ ವಿಶ್ರಾಂತಿ
ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮತ್ತು ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಅವರು ಭಾರತ ವೆಸ್ಟ್ ಇಂಡೀಸ್ ಟಿ20 ಸರಣಿಯ ನಂತರ ಫ್ಲೋರಿಡಾದಿಂದ ಭಾರತಕ್ಕೆ ಮರಳಲಿದ್ದಾರೆ.
ಆಗಸ್ಟ್ 23 ರಂದು ಎನ್‌ಸಿಯ ನಲ್ಲಿ ಏಷ್ಯಾ ಕಪ್ 2023 ಶಿಬಿರಕ್ಕೆ ಸೇರುವ ಮೊದಲು ಅವರು ಒಂದು ವಾರದ ವಿಶ್ರಾಂತಿ ಪಡೆಯಲಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಇತರರು ಶಿಬಿರದಲ್ಲಿ ಪಾಲ್ಗೊಳ್ಳುತ್ತಾರೆ.
ಐರ್ಲೆಂಡ್ ಸರಣಿಗೆ ಭಾರತ ತಂಡ
ಜಸ್ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್ , ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್.












Click it and Unblock the Notifications