Team India: ಭಾರತ ತಂಡಕ್ಕೆ ಶುಭಮನ್ ಗಿಲ್ ನಾಯಕ; ಐಪಿಎಲ್‌ನಲ್ಲಿ ಮಿಂಚಿದ್ದವರಿಗೆ ಸಿಕ್ತು ಅವಕಾಶ
ಸದ್ಯ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಭಾರತ ತಂಡ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ವಿಶ್ವಕಪ್ ನಡೆಯುತ್ತಿರುವಾಗಲೇ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಿದ್ದು, ಹೊಸ ನಾಯಕನನ್ನು ಘೋಷಣೆ ಮಾಡಲಾಗಿದೆ.
ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಶುಭಮನ್ ಗಿಲ್ ಭಾರತ ತಂಡದ ನಾಯಕತ್ವ ವಹಿಸಿಕೊಂಡಿದ್ದು, ಐಪಿಎಲ್‌ನಲ್ಲಿ ಗಮನ ಸೆಳೆದ ನಾಲ್ವರು ಆಟಗಾರರಿಗೆ ಭಾರತ ತಂಡದಲ್ಲಿ ಅವಕಾಶ ಸಿಕ್ಕಿದೆ.

ಅಭಿಷೇಕ್ ಶರ್ಮಾ, ರಿಯಾನ್ ಪರಾಗ್, ನಿತೀಶ್ ರೆಡ್ಡಿ ಮತ್ತು ತುಷಾರ್ ದೇಶಪಾಂಡೆ ಐಪಿಎಲ್ 2024 ರ ಋತುವಿನಲ್ಲಿ ತಮ್ಮ ಅದ್ಭುತ ಪ್ರದರ್ಶನ ನೀಡಿದ್ದು, ಈಗ ಭಾರತ ತಂಡಕ್ಕೆ ಆಡಲು ಸಜ್ಜಾಗಿದ್ದಾರೆ.
ಯುವ ಆಟಗಾರರಿಗೆ ಅವಕಾಶ
ವಿಶ್ವಕಪ್‌ನಲ್ಲಿ ಆಡುತ್ತಿರುವ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಯುವ ಆಟಗಾರರಿಗೆ ಅವಕಾಶ ಸಿಕ್ಕಿದೆ. ರಿಂಕು ಸಿಂಗ್, ಧ್ರುವ್ ಜುರೆಲ್ ಮತ್ತು ರವಿ ಬಿಷ್ಣೋಯ್ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಧ್ರುವ್ ಜುರೆಲ್ ಅಥವಾ ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಜವಾಬ್ದಾರಿ ನಿಭಾಯಿಸಲಿದ್ದಾರೆ.
ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ರಿಂಕು ಸಿಂಗ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್ ಮತ್ತು ನಾಯಕ ಶುಭಮನ್ ಗಿಲ್ ಯುವ ಪಡೆಯೇ ಜಿಂಬಾಬ್ವೆಗೆ ಪ್ರಯಾಣಿಸಲಿದೆ.
ಸೂರ್ಯಕುಮಾರ್ ಯಾದವ್ ಅಥವಾ ಹಾರ್ದಿಕ್ ಪಾಂಡ್ಯ ಜಿಂಬಾಬ್ವೆ ವಿರುದ್ಧದ ಸರಣಿಗೆ ನಾಯಕರಾಗಲಿದ್ದಾರೆ ಎನ್ನಲಾಗಿತ್ತು, ಆದರೆ ಐಪಿಎಲ್ ಬಳಿಕ ವಿಶ್ವಕಪ್‌ನಲ್ಲಿ ಆಡುತ್ತಿರುವ ಇಬ್ಬರು ವಿಶ್ರಾಂತಿ ಕೇಳಿದ ಕಾರಣ ಅವರಿಗೆ ವಿಶ್ರಾಂತಿ ಕೊಟ್ಟಿದ್ದು, ಗಿಲ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.
ವರುಣ್ ಚಕ್ರವರ್ತಿ ಅಸಮಾಧಾನ?
ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಕೆಕೆಆರ್ ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿ, ಭಾರತ ತಂಡಕ್ಕೆ ಆಯ್ಕೆಯಾಗದೇ ಇರುವುದು ಅಚ್ಚರಿಗೆ ಕಾರಣವಾಗಿದೆ. ವರುಣ್ ಚಕ್ರವರ್ತಿ ಕೂಡ ಅಸಮಾಧಾನಗೊಂಡಿದ್ದು, ನನಗೂ ಒಳ್ಳೆ ಪಿಆರ್ ಇರಬೇಕಿತ್ತು ಎಂದು ಇನ್‌ಸ್ಟಾಗ್ರಾಂ ಸ್ಟೋರಿ ಹಾಕಿದ್ದಾರೆ.
ಜಿಂಬಾಬ್ವೆ ವಿರುದ್ಧದ ಸರಣಿಗೆ ಭಾರತ ತಂಡ
ಶುಬ್ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ನಿತೀಶ್ ರೆಡ್ಡಿ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ.












Click it and Unblock the Notifications