Sheetal Devi: ಗುರಿ ತಪ್ಪದ ಶೀತಲ್; ಮೆಚ್ಚುಗೆಯ ಮಹಾಪೂರ
17 ವರ್ಷದ ಆ ಹುಡುಗಿಗೆ ಎರಡೂ ಕೈಗಳಿಲ್ಲ, ಆದರೂ ಆಕೆ ಇಟ್ಟ ಗುರಿಯನ್ನು ತಪ್ಪಲಿಲ್ಲ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಶೀತಲ್ ದೇವಿ ನೀಡಿದ ಪ್ರದರ್ಶನಕ್ಕೆ ವಿಶ್ವದಾದ್ಯಂತೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕೈಗಳು ಇಲ್ಲದೇ ಇದ್ದರೂ, ಜಗತ್ತನ್ನೇ ಗೆಲ್ಲುವ ವಿಶ್ವಾಸ ಆಕೆಯ ಕಣ್ಣುಗಳಲ್ಲಿತ್ತು, ಆಕೆ ಇಟ್ಟ ಗುರಿಯನ್ನು ನೋಡಿದರೆ ನೀವು ಒಂದು ಕ್ಷಣ ಅಚ್ಚರಿಗೊಳ್ಳುವುದು ಖಂಡಿತ.
ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಬಿಲ್ಲುಗಾರ್ತಿ ಶೀತಲ್ ದೇವಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದರು. ಕೂದಲೆಳೆ ಅಂತರದಲ್ಲಿ ಆಕೆ ಪದಕ ಗೆಲ್ಲದೇ ಇದ್ದರೂ, ಕೋಟ್ಯಂತರ ಜನರ ಮನಸ್ಸು ಗೆದ್ದಿದ್ದಾರೆ. ಬಿಲ್ಲು ಎತ್ತಲು ಬಲಗಾಲು, ದಾರವನ್ನು ಎಳೆಯಲು ಬಲ ಭುಜ, ಬಾಣ ಬಿಡಲು ದವಡೆಯ ಬಲವನ್ನು ಬಳಸಿದ ಶೀತಲ್ ಅದೆಷ್ಟು ಕರಾರುವಕ್ಕಾಗಿ ಗುರಿ ಇಡುತ್ತಾರೆ ಎಂದು ಅನೇಕರು ಅಚ್ಚರಿಗೊಂಡಿದ್ದಾರೆ.

ಪ್ಯಾರಾಲಿಂಪಿಕ್ಸ್‌ನಲ್ಲಿ ಶೀತಲ್ ಶ್ರೇಯಾಂಕದ ಸುತ್ತಿನಲ್ಲಿ ಎರಡನೇ ಸ್ಥಾನವನ್ನು ಗಳಿಸಿದರು, ಕೇವಲ ಒಂದು ಅಂಕದಿಂದ ವಿಶ್ವ ಪ್ಯಾರಾ ಆರ್ಚರಿ ದಾಖಲೆಯನ್ನು ಬರೆಯುವದನ್ನು ತಪ್ಪಿಸಿಕೊಂಡರು. ಉತ್ತಮ ಆರಂಭ ಪಡೆದರೂ, ಅವರು ಪದಕ ಗೆಲ್ಲದೆ ನಿರಾಸೆ ಅನುಭವಿಸಿದರು. ಆದರೂ ಆಕೆಯ ಪ್ರದರ್ಶನಕ್ಕೆ ನೆರೆದಿದ್ದ ಕ್ರೀಡಾಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದರು.
This is beyond possible!
— Erik Solheim (@ErikSolheim) September 2, 2024
Sheetal Devi is poetry in motion.
Just 17 years old.
Born without arms.
A true hero.
Congrats India 🇮🇳pic.twitter.com/fnthR456uN
1 ಅಂಕದಿಂದ ಸೋಲು
ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಓಪನ್ 1/8 ಎಲಿಮಿನೇಷನ್ ಪಂದ್ಯದಲ್ಲಿ, ಶೀತಲ್ ದೇವಿ ಚಿಲಿಯ ಮರಿಯಾನಾ ಜುನಿಗಾ ವಿರುದ್ಧ ಸ್ಪರ್ಧೆ ಮಾಡಿದರು. ಇಬ್ಬರ ನಡುವೆ ರೋಚಕ ಹಣಾಹಣಿ ಏರ್ಪಟ್ಟಿತ್ತು. ಕೊನೆಯಲ್ಲಿ ಜುನಿಗಾ 138-137 ಅಂತರದಲ್ಲಿ ರೋಚಕ ಗೆಲುವು ಸಾಧಿಸಿದರು. 17 ವರ್ಷದ ಶೀತಲ್ ದೇವಿ ಈ ಬಾರಿ ಸೋಲು ಕಂಡರೂ, ಭವಿಷ್ಯದಲ್ಲಿ ಭಾರತಕ್ಕೆ ಹಲವು ಪದಕ ತಂದುಕೊಡುವ ಭರವಸೆ ಮೂಡಿಸಿದ್ದಾರೆ.
ಮಹಿಂದ್ರಾ ಕಾರು ಉಡುಗೊರೆ
ಶೀತಲ್ ದೇವಿ ಅವರ ಅಮೋಘ ಪ್ರದರ್ಶನವನ್ನು ನೋಡಿದ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು 2023ರಲ್ಲೇ ತಮ್ಮ ಮಹಿಂದ್ರಾ ಕಾರನ್ನು ಪಡೆಯುವಂತೆ ಮನವಿ ಮಾಡಿದ್ದರು. ಆದರೆ ಆಗಿನ್ನು ಶೀತಲ್ ದೇವಿಗೆ 16 ವರ್ಷ ಆಗಿದ್ದರಿಂದ ತಮಗೆ 18 ವರ್ಷ ತುಂಬಿದ ಬಳಿಕ ಕಾರು ಪಡೆಯುವುದಾಗಿ ಶೀತಲ್ ಹೇಳಿದ್ದರು. 2025ರಲ್ಲಿ ಶೀತಲ್ 18 ವರ್ಷಕ್ಕೆ ಕಾಲಿಡಲಿದ್ದು ಮಹಿಂದ್ರಾ ಕಾರನ್ನು ಉಡುಗೊರೆಯಾಗಿ ಪಡೆಯಲಿದ್ದಾರೆ.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ಶೀತಲ್ ದೇವಿ ಅವರನ್ನು ಮಹೀಂದ್ರಾ ಅವರು ಶ್ಲಾಘಿಸಿದರು ಮತ್ತು ಅವರು ಕೊಟ್ಟ ಭರವಸೆಯಂತೆ ಕಾರನ್ನು ಉಡುಗೊರೆಯಾಗಿ ನೀಡಲು ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
ಶೀತಲ್ ದೇವಿ ಆರ್ಚರಿ ಸ್ಪರ್ಧೆಯ ವಿಡಿಯೋವನ್ನು ಮಹಿಂದ್ರಾ ಅವರು ಹಂಚಿಕೊಂಡಿದ್ದು, "ಅಸಾಧಾರಣ ಧೈರ್ಯ, ಬದ್ದತೆ ಮತ್ತು ಎಂದಿಗೂ ಬಿಟ್ಟುಕೊಡದ ಅವರ ಮನೋಭಾವ ಮುಖ್ಯ, ಅದು ಪದಕಗಳ ಜೊತೆ ಸಂಬಂಧ ಹೊಂದಿಲ್ಲ, ಶೀತಲ್‌ದೇವಿ ನೀವು ದೇಶ ಮತ್ತು ಇಡೀ ಜಗತ್ತಿಗೆ ಸ್ಫೂರ್ತಿಯ ದಾರಿ ದೀಪ" ಎಂದು ಹೊಗಳಿದ್ದಾರೆ.












Click it and Unblock the Notifications