IPL Playoff: ಕೆಕೆಆರ್ ಆರ್‌ಆರ್ ಪಂದ್ಯ ರದ್ದು; ಆರ್‌ಸಿಬಿ ತಂಡಕ್ಕೆ ರಾಜಸ್ಥಾನ ರಾಯಲ್ಸ್ ಎದುರಾಳಿ
ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿದೆ. ಕೊನೆಯ ಪಂದ್ಯದವರೆಗೂ ಯಾವ ತಂಡದ ಸ್ಥಾನ ಏನು ಎನ್ನುವುದು ತಿಳಿಯಲು ಆಗಿರಲಿಲ್ಲ. ಕೆಕೆಆರ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯ ಮಳೆಯಿಂದ ರದ್ದಾಗಿದ್ದು, ಅಗ್ರ ನಾಲ್ಕು ತಂಡಗಳ ಸ್ಥಾನ ಖಚಿತವಾಗಿದೆ.
ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕೆಕೆಆರ್ ಇದ್ದರೆ ಮಧ್ಯಾಹ್ನ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮಣಿಸಿದ ಸನ್‌ರೈಸರ್ಸ್ ಹೈದರಾಬಾದ್ ಎರಡನೇ ಸ್ಥಾನಕ್ಕೇರಿದೆ.

ರಾಜಸ್ಥಾನ ರಾಯಲ್ಸ್ 17 ಅಂಕಗಳನ್ನು ಹೊಂದಿದ್ದರೂ, ಸನ್‌ರೈಸರ್ಸ್ ಹೈದರಾಬಾದ್‌ಗಿಂತ ಕಡಿಮೆ ರನ್‌ರೇಟ್ ಹೊಂದಿರುವ ಕಾರಣ ಮೂರನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಶನಿವಾರ ಸಿಎಸ್‌ಕೆ ವಿರುದ್ಧ ರೋಚಕ ಗೆಲುವು ಸಾಧಿಸಿದ ಆರ್‌ಸಿಬಿ ನಾಲ್ಕನೇ ಸ್ಥಾನದಲ್ಲಿದೆ.
ಮುಂದಿನ ಪಂದ್ಯಗಳು ಯಾವಾಗ?
ಐಪಿಎಲ್ 2024ರ ಪ್ಲೇಆಫ್‌ನ ಮೊದಲ ಎರಡು ಪಂದ್ಯಗಳು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಮೇ 21ರಂದು ಮಂಗಳವಾರ ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.
ಮೇ 22ರಂದು ಬುಧವಾರ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಗೆದ್ದ ಎಸ್‌ಆರ್‌ಎಚ್ ಎರಡನೇ ಸ್ಥಾನಕ್ಕೆ
ಭಾನುವಾರ ಮಧ್ಯಾಹ್ನ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ 4 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 214 ರನ್ ಗಳಿಸಿತು. ಬಳಿಕ ಈ ಮೊತ್ತವನ್ನು ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ 19.1 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 215 ರನ್ ಗಳಿಸುವ ಮೂಲಕ 4 ವಿಕೆಟ್‌ಗಳ ಗೆಲುವು ಸಾಧಿಸಿತು.
ಈ ಗೆಲುವಿನ ಬಳಿಕ 17 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು. ರಾಜಸ್ಥಾನ ರಾಯಲ್ಸ್ ಕೆಕೆಆರ್ ವಿರುದ್ಧ ಗೆದ್ದಿದ್ದರೆ ಎರಡನೇ ಸ್ಥಾನಕ್ಕೆ ಬರುವ ಅವಕಾಶ ಇತ್ತು, ಆದರೆ ಪಂದ್ಯ ಮಳೆಯಿಂದ ರದ್ದಾದ ಕಾರಣ, ಎರಡೂ ತಂಡಗಳಿಗೂ ಒಂದೊಂದು ಅಂಕ ಸಿಕ್ಕಿತು, ಈ ಮೂಲಕ ರಾಜಸ್ಥಾನ ರಾಯಲ್ಸ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲೇ ಉಳಿದುಕೊಂಡರೆ, ಕೆಕೆಆರ್ 20 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೇರಿತು.












Click it and Unblock the Notifications