Ind vs NZ: ಫೈನಲ್ ಪಂದ್ಯದಲ್ಲಿ ಕೆಟ್ಟ ದಾಖಲೆ ಬರೆದ ನಾಯಕ ರೋಹಿತ್ ಶರ್ಮಾ
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಭಾರತದ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ನಾಯಕ ರೋಹಿತ್ ಶರ್ಮಾ ಇದೀಗ ಟಾಸ್ ವಿಚಾರದಲ್ಲೂ ಕೆಟ್ಟ ದಾಖಲೆ ಮಾಡಿದ್ದಾರೆ. 1999 ರಲ್ಲಿ ಬ್ರಿಯಾನ್ ಲಾರಾ ಮಾಡಿದ್ದ ಕೆಟ್ಟ ದಾಖಲೆಯನ್ನು ಕೂಡ ಇದೀಗ ರೋಹಿತ್ ಶರ್ಮಾ ಮುರಿದಿದ್ದು ಹೊಸ ದಾಖಲೆ ಮಾಡಿದ್ದಾರೆ.
ರೋಹಿತ್ ಶರ್ಮಾ ಸತತವಾಗಿ 12 ಏಕದಿನ ಪಂದ್ಯಗಳಲ್ಲಿ ಟಾಸ್ ಸೋತಿದ್ದು ಕೆಟ್ಟ ದಾಖಲೆ ಮಾಡಿದರು. 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಟಾಸ್ ಸೋತ ಭಾರತ ಅಲ್ಲಿಂದ ಈವರೆಗೂ ನಡೆದ ಏಕದಿನ ಪಂದ್ಯಗಳಲ್ಲಿ ಟಾಸ್ ಗೆದ್ದೇ ಇಲ್ಲ. ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲೂ ಕೂಡ ಸತತವಾಗಿ 5 ಪಂದ್ಯಗಳಲ್ಲಿ ಭಾರತ ಟಾಸ್ ಸೋತಿದೆ. ಟಾಸ್ ಸೋತರೂ ಪಂದ್ಯಗಳನ್ನು ಗೆಲ್ಲುತ್ತಿರುವುದು ಅಭಿಮಾನಿಗಳಿಗೆ ನೆಮ್ಮದಿ ತರಿಸಿದೆ.

ಬ್ರಿಯಾನ್ ಲಾರಾ ದಾಖಲೆ ಸರಿಗಟ್ಟಿದ ರೋಹಿತ್
ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಬ್ರಿಯಾನ್ ಲಾರಾ ಮಾಡಿದ್ದ ದಾಖಲೆಯನ್ನು ಇದೀಗ ರೋಹಿತ್ ಶರ್ಮಾ ಮುರಿದಿದ್ದಾರೆ. ಬ್ರಿಯಾನ್ ಲಾರಾ ಅಕ್ಟೋಬರ್ 1998 ರಿಂದ ಮೇ 1999ರ ವರೆಗೆ ಸತತವಾಗಿ 12 ಏಕದಿನ ಪಂದ್ಯಗಳಲ್ಲಿ ಟಾಸ್ ಸೋತಿದ್ದರು. ಈಗ ರೋಹಿತ್ ಶರ್ಮಾ ಕೂಡ ನವೆಂಬರ್ 2023 ರಿಂದ ಮಾರ್ಚ್ 2025ರ ವರೆಗೆ ಸತತವಾಗಿ 12 ಪಂದ್ಯಗಳಲ್ಲಿ ಟಾಸ್ ಸೋತಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಟಾಸ್ ಸೋತರೆ ಲಾರಾ ದಾಖಲೆಯನ್ನು ಕೂಡ ಮುರಿದು ಹೊಸ ದಾಖಲೆ ಮಾಡಲಿದ್ದಾರೆ.
ಭಾರತ ತಂಡದ ಕೆಟ್ಟ ದಾಖಲೆ
ರೋಹಿತ್ ಶರ್ಮಾ 12 ಪಂದ್ಯಗಳಲ್ಲಿ ಟಾಸ್ ಸೋತರೂ, ಭಾರತ ತಂಡ ಸತತವಾಗಿ 15 ಪಂದ್ಯಗಳಲ್ಲಿ ಟಾಸ್ ಸೋತಿದೆ. ಮೂರು ಪಂದ್ಯಗಳಲ್ಲಿ ರೋಹಿತ್ ಶರ್ಮಾ ವಿಶ್ರಾಂತಿ ಪಡೆದ ಕಾರಣ ಬೇರೆ ಆಟಗಾರರು ನಾಯಕತ್ವ ವಹಿಸಿಕೊಂಡಿದ್ದರು. ನವೆಂಬರ್ 2023ರಿಂದ ಈವರೆಗೆ ಭಾರತ ಏಕದಿನ ಪಂದ್ಯದಲ್ಲಿ ಒಮ್ಮೆಯೂ ಟಾಸ್ ಗೆದ್ದಿಲ್ಲ.
ನೆದರ್ಲ್ಯಾಂಡ್ಸ್ 2011ರ ಮಾರ್ಚ್‌ನಿಂದ ಆಗಸ್ಟ್ 2013 ರವರೆಗೆ ಸತತವಾಗಿ 11 ಏಕದಿನ ಪಂದ್ಯಗಳಲ್ಲಿ ಟಾಸ್ ಸೋತಿದ್ದ ದಾಖಲೆಯನ್ನು ಭಾರತ ಮುರಿದು ಹೊಸ ದಾಖಲೆ ಬರೆದಿದೆ. ಇಂಗ್ಲೆಂಡ್ ಜನವರಿ 2023ರಿಂದ ಸೆಪ್ಟೆಂಬರ್ 2023ರವರೆಗೆ 9 ಏಕದಿನ ಪಂದ್ಯಗಳಲ್ಲಿ ಸತತವಾಗಿ ಟಾಸ್ ಸೋತು ಮೂರನೇ ಸ್ಥಾನದಲ್ಲಿದೆ.
ಟಾಸ್ ಸೋಲುತ್ತಿದ್ದರೂ ನಾಯಕ ರೋಹಿತ್ ಶರ್ಮಾ ಅದರ ಬಗ್ಗೆ ಹೆಚ್ಚು ಚಿಂತೆ ಮಾಡುತ್ತಿಲ್ಲ. ಟಾಸ್ ಗೆಲ್ಲುವುದು ನಮ್ಮ ನಿಯಂತ್ರಣದಲ್ಲಿಲ್ಲ, ಆದರೆ ಉತ್ತಮ ಪ್ರದರ್ಶನ ನೀಡುವ ಮೂಲಕ ಪಂದ್ಯ ಗೆಲ್ಲುವುದಷ್ಟೇ ನಮ್ಮ ಗುರಿ, ನಾವು ಎಲ್ಲದಕ್ಕೂ ತಯಾರಾಗಿದ್ದೇವೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.












Click it and Unblock the Notifications