RCB vs PBKS: ಆರ್‌ಸಿಬಿ-ಪಂಜಾಬ್ ಕಿಂಗ್ಸ್ ಐಪಿಎಲ್ ಫೈನಲ್ ಪಂದ್ಯ ರದ್ದು ಸಾಧ್ಯತೆ
RCB Vs PBKS Final: ಐಪಿಎಲ್ 2025 ಮುಕ್ತಾಯದ ಹಂತದಲ್ಲಿದ್ದು, ಫೈನಲ್ ಪಂದ್ಯ ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಜೂನ್ 3ರಂದು ನಡೆಯಲಿದೆ. ಆದರೆ, ಈ ನಡುವೆಯೇ ಫೈನಲ್ ಮ್ಯಾಚ್‌ಗೆ ಆಘಾತವೊಂದು ಎದುರಾಗಿದೆ. ಅದೇನು ಅಂತೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಭಾರತ-ಪಾಕಿಸ್ತಾನ ನಡುವೆ ಯುದ್ಧ ಬಿಕ್ಕಟ್ಟು ಹಿನ್ನೆಲೆ ಆಟಗಾರರು, ಅಭಿಮಾನಿಗಳ ಹಿತದೃಷ್ಟಿಯಿಂದ ಪ್ರಾಂಚೈಸಿಗಳ ಮನವಿ ಮೇರೆಗೆ ಬಿಸಿಸಿಐ ಐಪಿಎಲ್ 2025 ಟೂರ್ನಿಯನ್ನು ಅರ್ಧಕ್ಕೆ ರದ್ದುಪಡಿಸಿ ಒಂದು ವಾರದ ಮಟ್ಟಿಗೆ ಮುಂದೂಡಿಕೆ ಮಾಡಿತ್ತು. ಬಳಿಕ ಎರಡು ದೇಶದಗಳ ನಡುವೆ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆ ಉಳಿದ ಪಂದ್ಯಗಳಿಗೆ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಲಾಯಿತು. ಅದರಂತೆಯೇ ಮೇ 17ರಿಂದ ಟೂರ್ನಿ ಮತ್ತೆ ಆರಂಭವಾಗಿದ್ದು, ಇದೀಗ ಮುಗಿಯುವ ಹಂತಕ್ಕೆ ಬಂದು ತಲುಪಿದೆ.

ಎರಡು ದೇಶದಗಳ ನಡುವೆ ಯುದ್ಧ ಬಿಕ್ಕಟ್ಟು ಹಿನ್ನೆಲೆ ವಿದೇಶಿ ಆಟಗಾರರ ಜವಾಬ್ದಾರಿ ಭಾರತದ ಮೇಲಿತ್ತು. ಆದ್ದರಿಂದ ವಿದೇಶಿ ಆಟಗಾರರನ್ನು ಅವರವರ ದೇಶಕ್ಕೆ ಕಳುಹಿಸಲಾಗಿತ್ತು. ಪರಿಸ್ಥಿತಿ ಸುಧಾರಿಸಿದ ಬಳಿಕ ಹೊಸ ವೇಳಾಪಟ್ಟಿ ಪ್ರಕಟಿಸಿ ಟೂರ್ನಿಯನ್ನು ಆರಂಭಿಸಲಾಗಿದ್ದು, ಆಗ ಮತ್ತೆ ವಿದೇಶಿ ಆಟಗಾರರನ್ನು ವಾಪಾಸ್ ಕರೆಸಿಕೊಳ್ಳಲಾಯಿತು. ಇದೀಗ ಈ ಸೀಸನ್ ಮುಕ್ತಾಯದ ಹಂತಕ್ಕೆ ಬಂದು ತಲುಪಿದ್ದು, ಜೂನ್ 3ಕ್ಕೆ ಅಹಮದಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಈಗಾಗಲೇ ಇಂದು (ಜೂನ್ 1) ಕ್ವಾಲಿಫೈಯರ್-2 ಪಂದ್ಯ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ನಡುವೆ ನಡೆದಿದ್ದು, ಈ ವೇಳೆ ಮಳೆ ಆರಂಭವಾಗಿತ್ತು. ಈ ಹಿನ್ನೆಲೆ ಪಂದ್ಯವನ್ನು ತಡವಾಗಿ ಆರಂಭ ಮಾಡಲಾಯಿತು. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಭರ್ಜರಿ ಗೆಲುವು ಸಾಧಿಸಿದ್ದು, ಆರ್‌ಸಿಬಿ ಜೊತೆ ಜೂನ್ 3ರಂದು ಫೈನಲ್ ಪಂದ್ಯ ಆಡಲಿದೆ. ಆದರೆ, ಈ ಪಂದ್ಯಕ್ಕೂ ಮಳೆರಾಯ ಅಡ್ಡಿ ಆಗುವ ಆತಂಕ ಎದುರಾಗಿದೆ.
ಹವಾಮಾನ ಇಲಾಖೆ ಪ್ರಕಾರ, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ ಇನ್ನು ಒಂದು ವಾರ ಅಂದರೆ ಜೂನ್ 7ರವರೆಗೂ ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ನವದೆಹಲಿ ಸೇರಿದಂತೆ ಹಲವೆಡೆ ರಣಮಳೆ ಸುರಿಯುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಮತ್ತೊಂದೆಡೆ ಮುಂಗಾರು ಮಳೆ ಇದೀಗ ದೇಶಾದ್ಯಂತ ವ್ಯಾಪಿಸಲು ಆರಂಭಿಸಿದೆ.
ಪಂದ್ಯ ರದ್ದಾದ್ರೆ ಏನು ಮಾಡ್ತಾರೆ?: ಒಂದು ವೇಳೆ ಜೂನ್ 3ರಂದು ಗುಜರಾತ್‌ನ ಅಹಮದಬಾದ್‌ನಾದ್ಯಂತ ಭಾರೀ ಮಳೆ ಮುಂದುವರೆದರೆ ಫೈನಲ್ ಪಂದ್ಯವನ್ನು ರದ್ದುಪಡಿಸಿ ಮಾರನೇ ದಿನ ಆಡಿಸಲಾಗುತ್ತದೆ. ಸಾಧಾರಣ ಮಳೆ ಬಂದು ನಿಂತರೆ ತಡವಾಗಿ ಪಂದ್ಯ ಆರಂಭ ಮಾಡಲಾಗುತ್ತದೆ. ಜೂನ್ 3ರಂದು ಮಳೆ ಬಾರದೇ ಪಂದ್ಯ ನಡೆದು ಆರ್‌ಸಿಬಿ ಗೆದ್ದರೆ ಅಷ್ಟೇ ಸಾಕು ಎಂದು ಅಭಿಮಾನಿಗಳು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ.
ಇದುವರೆಗೂ ಆಡಿದ 17 ಸೀನಸ್‌ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂದೇ ಒಂದು ಟ್ರೋಫಿ ಗೆದ್ದಿಲ್ಲ. ಆದರೆ ಈ ಸೀಸನ್ 18ನೇ ಆವೃತ್ತಿಯಲ್ಲಿ ಟ್ರೋಫಿ ಗೆಲ್ಲುವ ಎಲ್ಲಾ ಲಕ್ಷಣ ಎದ್ದು ಕಾಣುತ್ತಿದೆ. ಅಷ್ಟರ ಮಟ್ಟಿಗೆ ಆರಂಭದಿಂದಲೂ ಬ್ಯಾಟಿಂಗ್, ಬೌಲಿಂಗ್ ವಿಭಾಗದಲ್ಲಿ ಉತ್ತಮವಾಗಿ ಪ್ರದರ್ಶನ ತೋರುವ ಮೂಲಕ ಬಲಿಷ್ಠ ತಂಡಗಳನ್ನೇ ಬಗ್ಗುಬಡಿದಿದೆ. ಇನ್ನೂ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಫೈನಲ್‌ನಲ್ಲಿ ಯಾವುದೇ ಟೆನ್ಷನ್ ಇಲ್ಲದೆ ಗೆದ್ದು ಟ್ರೋಫಿ ತನ್ನದಾಗಿಸಿಕೊಳ್ಳಲಿದೆ. ಅಲ್ಲದೆ, ಈ ಸಲ ಕಪ್ ನಮ್ದೆ ಎಂಬ ಘೋಷವಾಕ್ಯವನ್ನು ನಿಜ ಮಾಡಲಿದೆ ಎನ್ನುವುದು ಅಭಿಮಾನಿಗಳ ಭರವಸೆಯಾಗಿದೆ.












Click it and Unblock the Notifications