RCB vs PBKS: ಕೊನೆಗೂ ಕನ್ನಡಿಗನಿಗೆ ಸಿಕ್ಕಿತು ಅವಕಾಶ; ಆದರೆ...!
ಕನ್ನಡಿಗ ಕ್ರಿಕೆಟ್ ಅಭಿಮಾನಿಗಳ ಬಹುದಿನದ ಕನಸೊಂದು ಈಡೇರಿದೆ. ಕನ್ನಡಿಗ ಮನೋಜ್ ಭಾಂಡಗೆ ಕೊನೆಗೂ ಐಪಿಎಲ್‌ನ ಮೊದಲ ಪಂದ್ಯ ಆಡಿದ್ದಾರೆ. ಕಳೆದ ಮೂರು ವರ್ಷದಿಂದ ಆರ್ ಸಿಬಿ ತಂಡದಲ್ಲಿದ್ದರೂ ಅವರಿಗೆ ಈ ವರ್ಷ ಮೊದಲ ಪಂದ್ಯ ಆಡುವ ಅವಕಾಶ ಸಿಕ್ಕಿದೆ. ಅದೂ ಕೂಡ ಸಂಕಷ್ಟದ ಸಮಯದಲ್ಲಿ ಬಂದು ನಿರಾಸೆ ಮೂಡಿಸಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ ಸಿಬಿ ಮತ್ತು ಪಂಜಾಬ್ ಕಿಂಗ್ಸ ನಡುವಿನ ಪಂದ್ಯದಲ್ಲಿ ಮನೋಜ್ ಭಾಂಡಗೆ ಆರ್ ಸಿಬಿ ಪರವಾಗಿ ಪದಾರ್ಪಣೆ ಮಾಡಿದರು. ಮೊದಲ ಪಂದ್ಯ ಆಡಿದರೂ ಅವರಿಗೆ ತಂಡಕ್ಕೆ ಬ್ಯಾಟಿಂಗ್‌ನಿಂದ ಹೆಚ್ಚಿನ ಕೊಡುಗೆ ನೀಡಲು ಆಗಲಿಲ್ಲ. 4 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿದ ಅವರು ವಿಕೆಟ್ ಒಪ್ಪಿಸಿದರು.

2023ರಲ್ಲಿ ಮೂಲ ಬೆಲೆ 30 ಲಕ್ಷ ರೂಪಾಯಿಗೆ ಆರ್ ಸಿಬಿ ಸೇರಿದ್ದರು. ಎರಡು ವರ್ಷ ತಂಡದಲ್ಲಿದ್ದರೂ ಅವರಿಗೆ ಆಡಲು ಅವಕಾಶ ಸಿಕ್ಕಿರಲಿಲ್ಲ. 2025ರ ಮೆಗಾ ಹರಾಜಿನಲ್ಲಿ ಮತ್ತೊಮ್ಮೆ ಆರ್ ಸಿಬಿ ಕನ್ನಡಿಗನನ್ನು ಮೂಲಬೆಲೆಗೆ ಖರೀದಿ ಮಾಡಿತು. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡಕ್ಕಾಗಿ ಆಡಿರುವ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಮಹಾರಾಜ ಟ್ರೋಫಿ ಪಂದ್ಯಾವಳಿಯಲ್ಲಿ ಕೂಡ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.
ಮೊದಲ ಪಂದ್ಯದಲ್ಲೇ ನಿರಾಸೆ
ಮಳೆಯಿಂದ ವಿಳಂಬವಾದ ಕಾರಣ ಪಂದ್ಯವನ್ನು 14 ಓವರ್ ಗಳಿಗೆ ಸೀಮಿತಗೊಳಿಸಲಾಯಿತು. ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿರಾಶದಾಯಕ ಬ್ಯಾಟಿಂಗ್ ಪ್ರದರ್ಶನ ನೀಡಿತು. 7.4 ಓವರ್ ಗಳಲ್ಲೇ 42 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿತು. ಈ ಸಂದರ್ಭದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುವ ಅವಕಾಶ ಪಡೆದರು. 4 ಎಸೆತಗಳನ್ನು ಎದುರಿಸಿದ ಅವರು ಕೇವಲ 1 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.
ಟಿಮ್ ಡೇವಿಡ್ ಆಪತ್ಭಾಂದವ
63 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿದ್ದ ಆರ್ ಸಿಬಿ ಸಂಕಷ್ಟಕ್ಕೆ ಸಿಲುಕಿತು. ಒಂದು ಕಡೆಯಲ್ಲಿ ವಿಕೆಟ್ ಬಿದ್ದರೂ ಮತ್ತೊಂದು ಕಡೆ ಗಟ್ಟಿಯಾಗಿ ನಿಂತ ಟಿಮ್ ಡೇವಿಡ್ ಆರ್ ಸಿಬಿ ತಂಡಕ್ಕೆ ನೆರವಾದರು. 26 ಎಸೆತಗಳಲ್ಲಿ 5 ಬೌಂಡರಿ 3 ಸಿಕ್ಸರ್ ಸಹಿತ ಅಜೇಯ 50 ರನ್ ಗಳಿಸಿದರು. ಐಪಿಎಲ್ ಇತಿಹಾಸದಲ್ಲಿ ಇದು ಅವರ ಮೊದಲ ಅರ್ಧಶತಕವಾಗಿದೆ. ಅದೂ ಆರ್ ಸಿಬಿ ಸಂಕಷ್ಟದಲ್ಲಿದ್ದಾಗ ಬಂದಿದ್ದು ಅಭಿಮಾನಿಗಳು ನಿಟ್ಟುಸಿರು ಬಿಡುವಂತೆ ಮಾಡಿತು. ಆರ್ ಸಿಬಿ 14 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 95 ರನ್ ಕಲೆಹಾಕಿತು.












Click it and Unblock the Notifications