RCB vs LSG: ಹಿಂದೆ ಓಡಿ ಸೂಪರ್ ಕ್ಯಾಚ್ ಹಿಡಿದ ಆರ್‌ಸಿಬಿಯ ಅನುಜ್ ರಾವತ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವೆ ಪ್ರಸಕ್ತ ಐಪಿಎಲ್‌ನ 15ನೇ ಪಂದ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಲಖ್ನೋ ಸೂಪರ್ ಜೈಂಟ್ಸ್ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ಮೊದಲು ಬೌಲಿಂಗ್ ಮಾಡುವ ಆರ್‌ಸಿಬಿ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಬೌಲರ್‌ಗಳು ವಿಫಲರಾದರು.
ಆದರೆ ದೆಹಲಿ ತಂಡದ ಯುವ ಆಟಗಾರ ಆರ್‌ಸಿಬಿ ತಂಡದ ಜೋಶ್‌ನ್ನು ಹೆಚ್ಚಿಸಿದರು. ಆರ್‌ಸಿಬಿ ತಂಡದ ಪರ ಆಡುತ್ತಿರುವ ಯುವ ವಿಕೆಟ್ ಕೀಪರ್ ಅನುಜ್ ರಾವತ್ ಭರ್ಜರಿ ಕ್ಯಾಚ್ ಪಡೆದು ಎಲ್ಲರ ಚಿತ್ತ ಕದ್ದರು. ಈ ದೃಶ್ಯವನ್ನು ಕಂಡ ಫ್ಯಾನ್ಸ್ ಫುಲ್ ಮಾರ್ಕ್ಸ್ ನೀಡಿದರು. ಸೂಪರ್ ಮ್ಯಾನ್ ರೀತಿಯ ಕ್ಯಾಚ್ ಕಂಡು ಫ್ಯಾನ್ಸ್ ಸೂಪರ್ ಕ್ಯಾಚ್ ಎಂದು ಚಪ್ಪಾಳೆ ತಟ್ಟಿದರು.

ಹಿಮ್ಮುಖವಾಗಿ ಓಡಿ ಹಿಡಿದ ಕ್ಯಾಚ್
ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟಿಂಗ್ ಮಾಡುವಾಗ 9ನೇ ಓವರ್‌ನ್ನು ಆರ್‌ಸಿಬಿ ತಂಡದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಬೌಲ್ ಮಾಡಲು ಬಂದರು. ಸಿರಾಜ್ ಅವರ 9ನೇ ಓವರ್‌ನ ಐದನೇ ಎಸೆತದಲ್ಲಿ ಕರ್ನಾಟಕದ ದೇವದತ್ ಪಡಿಕ್ಕಲ್ ಬ್ಯಾಟಿಂಗ್ ಮಾಡುತ್ತಿದ್ದರು. ಈ ಓವರ್‌ನ ಐದನೇ ಎಸೆತದಲ್ಲಿ ಸಿರಾಜ್ ಗುಡ್ ಲೆಂತ್ ಡಿಲೆವರಿ ಮಾಡಿದರು. ಈ ಚೆಂಡನ್ನು ಗುರುತಿಸಿದ ದೇವದತ್ ಬಿಗ್ ಶಾಟ್‌ಗೆ ಮುಂದಾದರು. ಆದರೆ ಬ್ಯಾಟ್‌ಗೆ ಚೆಂಡು ಸರಿಯಾದ ಟೈಮ್‌ನಲ್ಲಿ ಬಡಿಯಲಿಲ್ಲ. ಪರಿಣಾಮ ಚೆಂಡು ಹೋಗ ಬೇಕಾದ ದಿಕ್ಕಿನಲ್ಲಿ ಹೋಗದೆ ಮೇಲೆ ಚಿಮ್ಮಿತು.
ಗಾಳಿಯಲ್ಲಿ ತೇಲಿ ಬಂದ ಚೆಂಡನ್ನು ವಿಕೆಟ್ ಕೀಪರ್ ಅನುಜ್ ರಾವತ್ ಹಿಮ್ಮುಖವಾಗಿ ಓಡಲಾರಂಭಿಸಿದರು. ಅನುಜ್ ರಾವತ್ ಚೆಂಡಿನ ಮೇಲೆ ಕಣ್ಣನ್ನು ಸ್ಥಿರವಾಗಿಟ್ಟಿದ್ದರು. ಪರಿಣಾಮ ಭರ್ಜರಿ ಡೈವ್ ಮಾಡಿ ಸೂಪರ್ ಕ್ಯಾಚ್ ಪಡೆದರು. ಅನುಜ್ ಹಿಡಿದ ಸೊಗಸಾದ ಕ್ಯಾಚ್‌ಗೆ ಪಡಿಕ್ಕಲ್ ಇನ್ನಿಂಗ್ಸ್ ಕೊನೆಗೊಂಡಿತು. ತವರು ಅಂಗಳದಲ್ಲಿ ಪಡಿಕ್ಕಲ್ ಕೇವಲ 6 ರನ್ ಬಾರಿಸಿ ಪೆವಿಲಿಯನ್ ಹಾದಿ ಹಿಡಿದರು.
ಲಕ್ನೋ ಸೂಪರ್ ಜೈಂಟ್ಸ್ ಪರ ದಕ್ಷಿಣ ಆಫ್ರಿಕಾದ ಸ್ಫೋಟಕ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಆರ್‌ಸಿಬಿ ವಿರುದ್ಧ ಬಿರುಸಿನ ಬ್ಯಾಟಿಂಗ್ ಮಾಡಿದರು. ಮೊದಲ ಓವರ್ ನಿಂದಲೇ ದೊಡ್ಡ ಹೊಡೆತಗಳನ್ನು ಬಾರಿಸಿದ, ಡಿ ಕಾಕ್ ಕೂಡ ಬಿರುಸಿನ ಅರ್ಧಶತಕ ಬಾರಿಸಿದರು. ಡಿಕಾಕ್ ತಮ್ಮ ಬ್ಯಾಟಿಂಗ್ ಅನುಭವವನ್ನು ಧಾರೆ ಎರೆದು ಬ್ಯಾಟ್ ಮಾಡಿ 56 ಎಸೆತಗಳಲ್ಲಿ 144.64 ಸರಾಸರಿಯಲ್ಲಿ 81 ರನ್ ಸಿಡಿಸಿದರು. ಇವರ ಮನಮೋಹಕ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ, 5 ಸಿಕ್ಸರ್ ಸೇರಿವೆ.
ಮಿಡ್ಲ್ ಆರ್ಡರ್‌ನಲ್ಲಿ ನಿಕೋಲಸ್ ಪೂರನ್ 21 ಎಸೆತಗಳಲ್ಲಿ 1 ಬೌಂಡರಿ, 5 ಸಿಕ್ಸರ್ ಸಹಾಯದಿಂದ 40 ರನ್ ಬಾರಿಸಿ ತಂಡಕ್ಕೆ ನೆರವಾದರು. ಇವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಎಲ್‌ಎಸ್‌ಜಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 181 ರನ್ ಸೇರಿಸಿತು. ಆರ್‌ಸಿಬಿ ಪರ ಆಲ್‌ರೌಂಡರ್ ಗ್ಲೇನ್ ಮ್ಯಾಕ್ಸ್‌ವೆಲ್ 2, ಮೊಹಮ್ಮದ್ ಸಿರಾಜ್, ಯಶ್ ದಯಾಳ್, ರೆಸ್ ಟೊಪ್ಲಿ ತಲಾ ಒಂದು ವಿಕೆಟ್ ಪಡೆದರು.












Click it and Unblock the Notifications