RCB Vs CSK: ಆರ್‌ಸಿಬಿ-ಚೆನ್ನೈ ಪಂದ್ಯ: ಮೈದಾನದಲ್ಲಿ ರನ್ ಮಳೆ, ಹೊರಗೆ 'ದೋಸೆ, ಇಡ್ಲಿ, ಸಾಂಬಾರ್, ಚಟ್ನಿ' ವಿವಾದದ ಕಿಡಿ
RCB Vs CSK: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 5ರಂದು ನಡೆದ ಐಪಿಎಲ್ ಪದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಆದರೆ, ಈ ಪಂದ್ಯದ ವೇಳೆ ನಡೆದ ಘಟನೆಯೊಂದು ಭಾರೀ ವಿಚಾದಕ್ಕೆ ಕಾರಣವಾಗಿದೆ. ಇದೀಗ ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಬಿಸಿಸಿಐವರೆಗೂ ಈ ವಿಚಾರ ತಲುಪಿದೆ.
ಏಪ್ರಿಲ್ 5ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 250 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸುವ ಮೂಲಕ ಅಬ್ಬರಿಸಿತು. ಈ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೇವಲ 207 ರನ್ ಗಳಿಸಿ, 43 ರನ್‌ಗಳ ಅಂತರದಿಂದ ಸೋಲನುಭವಿಸಿತು. ಆದರೆ, ಸಿಎಸ್‌ಕೆ ಸೋಲಿಗಿಂತಲೂ ಹೆಚ್ಚಾಗಿ ಪಂದ್ಯದ ವೇಳೆ ನಡೆದ ಕೆಲವು ವಿದ್ಯಮಾನಗಳು ಈಗ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿವೆ.

ಕಿಡಿ ಹೊತ್ತಿಸಿದ 'ದೋಸೆ, ಇಡ್ಲಿ, ಸಾಂಬಾರ್, ಚಟ್ನಿ'
ಪಂದ್ಯದ ಸಮಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಔಟಾದ ವೇಳೆ ಕ್ರೀಡಾಂಗಣದ ಡಿಜೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿರುವ "ದೋಸೆ, ಇಡ್ಲಿ, ಸಾಂಬಾರ್, ಚಟ್ನಿ..." ಎಂಬ ಹಾಡನ್ನು ಪದೇ ಪದೇ ಪ್ಲೇ ಮಾಡಿದ್ದಾರೆ. ಈ ಹಾಡನ್ನು ಸಾಮಾನ್ಯವಾಗಿ ತಮಿಳು ಸಮುದಾಯವನ್ನು ಅಥವಾ ಪ್ರಾದೇಶಿಕ ಆಹಾರ ಪದ್ಧತಿಯನ್ನು ಅಣಕಿಸಲು ಬಳಸಲಾಗುವ ಮೀಮ್ ಮ್ಯೂಸಿಕ್ ಎಂದು ತಿಳಿದುಬಂದಿದೆ. ಇದು ಸಿಎಸ್‌ಕೆ ತಂಡದ ಆಟಗಾರರು ಮತ್ತು ಆಡಳಿತ ಮಂಡಳಿಯ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಬಿಸಿಸಿಐಗೆ ದೂರು ನೀಡಿದ ಸಿಎಸ್‌ಕೆ ಎಂಡಿ
ಇದರಿಂದ ಬೇಸರಗೊಂಡ ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಕಾಶಿ ವಿಶ್ವನಾಥನ್ ಅವರು ಈ ಕುರಿತು ಬಿಸಿಸಿಐಗೆ ಅಧಿಕೃತ ದೂರು ದಾಖಲಿಸಿದ್ದಾರೆ. ಮನರಂಜನೆಯ ಹೆಸರಿನಲ್ಲಿ ಒಂದು ತಂಡದ ಆಟಗಾರರು ಮತ್ತು ಅವರ ಸಂಸ್ಕೃತಿಯನ್ನು ವ್ಯಂಗ್ಯ ಮಾಡುವುದು ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿದೆ. ಆಟಗಾರರು ಪೆವಿಲಿಯನ್‌ಗೆ ಮರಳುವಾಗ ಡಿಜೆ ಮೈಕ್ ಬಳಸಿ ಅವಮಾನಕಾರಿ ಕಾಮೆಂಟ್‌ಗಳನ್ನು ಮಾಡಲಾಗಿದೆ. ತವರು ತಂಡಕ್ಕೆ ಬೆಂಬಲ ನೀಡುವುದು ತಪ್ಪಲ್ಲ, ಆದರೆ ಎದುರಾಳಿ ತಂಡವನ್ನು ಕೀಳಾಗಿ ಕಾಣುವುದು ಸರಿಯಲ್ಲ ಎಂದು ಸಿಎಸ್‌ಕೆ ಆಡಳಿತ ಮಂಡಳಿ ಆರೋಪ ಮಾಡಿದೆ.
ಈ ವಿವಾದಕ್ಕೆ 2025ರ ಐಪಿಎಲ್ ಘಟನೆಯ ಹಿನ್ನೆಲೆಯೂ ಇದೆ. ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಆಟಗಾರ ಜಿತೇಶ್ ಶರ್ಮಾ ಇದೇ ಹಾಡನ್ನು ಹಾಡಿದ್ದ ವಿಡಿಯೋ ವೈರಲ್ ಆಗಿತ್ತು. ಅದಕ್ಕೆ ಪ್ರತಿಯಾಗಿ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲೂ ಇದೇ ರೀತಿಯ ಪ್ರತಿಕ್ರಿಯೆ ನೀಡಲು ಪ್ರಯತ್ನಿಸಲಾಗಿತ್ತು. ಆದರೆ ಅಂದು ಸಿಎಸ್‌ಕೆ ಮ್ಯಾನೇಜ್ಮೆಂಟ್ ಅದನ್ನು ತಡೆದಿತ್ತು. ಈಗ ಬೆಂಗಳೂರಿನಲ್ಲಿ ಇಂತಹದ್ದೇ ಘಟನೆ ಮರುಕಳಿಸಿರುವುದು ಸಂಘರ್ಷಕ್ಕೆ ತುಪ್ಪ ಸುರಿದಂತಾಗಿದೆ.
ಕ್ರೀಡಾಭಿಮಾನಿಗಳಿಂದ ಎಚ್ಚರಿಕೆ ಸಂದೇಶ
ಸಿಎಸ್‌ಕೆ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ಇನ್ಮುಂದೆ ಕ್ರೀಡಾಂಗಣಗಳಲ್ಲಿ ಪ್ರಾದೇಶಿಕ ಅಥವಾ ವರ್ಣಭೇದದ ಅಣಕ ನಡೆಯದಂತೆ ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಲು ನಿರ್ಧರಿಸಿದೆ. ಅಭಿಮಾನಿಗಳ ವಲಯದಲ್ಲೂ ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. "ಇದು ಕೇವಲ ತಮಾಷೆಯಷ್ಟೇ, ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ" ಎಂದು ಕೆಲವರು ಅಭಿಪ್ರಾಯಪಟ್ಟರೆ, "ಯಾವುದೇ ಸಮುದಾಯ ಅಥವಾ ಭಾಷೆಯನ್ನು ಗುರಿಯಾಗಿಸಿ ಅವಮಾನಿಸುವುದು ಕ್ರೀಡೆಯ ಭಾಗವಾಗಬಾರದು" ಎಂದು ಕ್ರೀಡಾ ಪ್ರೇಮಿಗಳು ಎಚ್ಚರಿಸಿದ್ದಾರೆ.
ಐಪಿಎಲ್‌ನಂತಹ ಜಾಗತಿಕ ವೇದಿಕೆಯಲ್ಲಿ ಕ್ರೀಡೆಯು ಜನರನ್ನು ಒಗ್ಗೂಡಿಸಬೇಕೇ ಹೊರತು, ಪ್ರಾದೇಶಿಕ ಭೇದಭಾವಕ್ಕೆ ಅವಕಾಶ ನೀಡಬಾರದು ಎಂಬುದು ಬಹುತೇಕರ ಆಶಯವಾಗಿದೆ. ಒಂದು ವೇಳೆ ಇದನ್ನು ಮೀರಿ ಯಾರಾದರೂ ಯಾವುದೇ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಅಂತಲೂ ಆಗ್ರಹಿಸಿದ್ದಾರೆ.












Click it and Unblock the Notifications