RCB: ಅಭಿಮಾನಿಗಳಿಗೆ ಕನ್ನಡದಲ್ಲೇ ಹೊಸ ಸಂದೇಶ ಕೊಟ್ಟ ಆರ್‌ಸಿಬಿ ನಾಯಕ ರಜತ್ ಪಟಿದಾರ್!
RCB: ಆರ್‌ಸಿಬಿಯ ನೂತನ ನಾಯಕ ರಜತ್ ಪಟಿದಾರ್ ಅವರು ಆರ್‌ಸಿಬಿ ಅಭಿಮಾನಿಗಳಿಗೆ ಕನ್ನಡದಲ್ಲೇ ದೊಡ್ಡ ಸಂದೇಶವೊಂದನ್ನು ಕೊಟ್ಟಿದ್ದಾರೆ. ಆರ್‌ಸಿಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಸಿದ್ಧತೆ ಹಾಗೂ ತಂಡದ ಬಗ್ಗೆ ಇದೇ ಮೊದಲ ಬಾರಿ ಅವರು ಇನ್ಸ್‌ಟಾಗ್ರಾಮ್‌ನಲ್ಲಿ ಕನ್ನಡದಲ್ಲಿಯೇ ಪೋಸ್ಟ್ ಮಾಡಿದ್ದಾರೆ. ಇದು ಕನ್ನಡಿಗರ ಮನಸ್ಸು ಗೆದ್ದಿದೆ. ಆರ್‌ಸಿಬಿಗೆ ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ಹೊಸ ನಾಯಕ ಆಯ್ಕೆಯಾಗಿದ್ದಾರೆ. ಅವರ ಮೇಲೆ ಅಪಾರ ನಿರೀಕ್ಷೆ ಇದೆ. ವಿರಾಟ್ ಕೊಹ್ಲಿ ಸಹ ಹೊಸ ನಾಯಕನಿಗೆ ಸಾಥ್ ನೀಡಿದ್ದು. ನಮಗೆ ಕೊಟ್ಟ ಬೆಂಬಲವನ್ನೇ ಇವರಿಗೂ ಕೊಡಿ ಅಂತ ಹೇಳಿದ್ದಾರೆ. ಇದೀಗ ರಜತ್ ಪೋಸ್ಟ್ ಕನ್ನಡಿಗರಲ್ಲಿ ಹುಮ್ಮಸ್ಸು ಮೂಡಿಸಿದೆ.
2025ರ ಐಪಿಎಲ್ ಟೂರ್ನಿ ಆರಂಭವಾಗುವುದಕ್ಕೆ ಇನ್ನು ಎರಡು ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಬಾರಿ ಆರ್‌ಸಿಬಿ ತಂಡದಲ್ಲಿ ಹಲವು ಬದಲಾವಣೆಗಳು ಆಗಿವೆ. ಆರ್‌ಸಿಬಿ ತಂಡದಲ್ಲಿ ಆಟಗಾರರನ್ನು ಆಯ್ಕೆ ಮಾಡುವ ವಿಚಾರದಲ್ಲಿ ಫ್ರಾಂಚೈಸಿ ಮಾಡಿದ ಕೆಲವು ಎಡವಟ್ಟುಗಳು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಕನ್ನಡಿಗರನ್ನು ಆಯ್ಕೆ ಮಾಡಿರಲಿಲ್ಲ ಎನ್ನುವ ವಿಚಾರವೂ ಸಹ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ರಜತ್ ಅವರು ಮೊದಲ ಪಂದ್ಯಕ್ಕೂ ಮುನ್ನವೇ ಕನ್ನಡಿಗರಿಂದ ಭೇಷ್‌ಗಿರಿ ಗಿಟ್ಟಿಸಿಕೊಂಡಿದ್ದಾರೆ.

ಐಪಿಎಲ್ 18 ಟೂರ್ನಿಯ ಮೊದಲ ಪಂದ್ಯವು ಮಾರ್ಚ್ 22ಕ್ಕೆ (ಶನಿವಾರ) ನಡೆಯಲಿದೆ. ಆರ್‌ಸಿಬಿ ಪುರುಷರ ತಂಡದ ಕಪ್ ಗೆಲ್ಲುವ ಕನಸು ಬರೋಬ್ಬರಿ 17 ವರ್ಷಗಳಿಂದ ಈಡೇರಿಲ್ಲ. ಈ ಬಾರಿಯೂ ಕಪ್ ಗೆಲ್ಲುವ ಹೊಸ ಕನಸನ್ನು ಆರ್‌ಸಿಬಿ ಅಭಿಮಾನಿಗಳು ಕಾಣುತ್ತಿದ್ದಾರೆ. ಕನ್ನಡದಲ್ಲೇ ಪೋಸ್ಟ್ ಮಾಡಿರುವ ರಜತ್ ಇದೀಗ ದೊಡ್ಡ ಸಂದೇಶವನ್ನೇ ಕೊಟ್ಟಿದ್ದಾರೆ.
ಕನ್ನಡದಲ್ಲೇ ರಜತ್ ಪಟಿದಾರ್ ಪೋಸ್ಟ್!
ಈ ಬಾರಿಯು ಪ್ರತಿ ವರ್ಷದಂತೆ ಆರ್‌ಸಿಬಿ ಅನ್‌ಬಾಕ್ಸಿಂಗ್ ಕಾರ್ಯಕ್ರಮವು ಅದ್ಧೂರಿಯಾಗಿ ನೆರವೇರಿದೆ. ಕಾರ್ಯಕ್ರಮ ಹಾಗೂ ಆರ್‌ಸಿಬಿಯ ಬಗ್ಗೆ ರಜತ್ ಅವರು instagram ನಲ್ಲಿ ಪೋಸ್ಟ್ ಮಾಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಕಾಶಮಾನ ದೀಪಗಳು ಹಾಗೂ ವಿಶ್ವದ ಅತ್ಯಂತ ಉತ್ಸಾಹಭರಿತ ಅಭಿಮಾನಿಗಳ ಮುಂದೆ ನಿಲ್ಲುವುದು ಹೊಸ ಅನುಭವವನ್ನು ನೀಡಿತು. ನಾನು ಯಾವಾಗಲೂ ಆರ್‌ಸಿಬಿ ಅಭಿಮಾನಿಯಾಗಿದ್ದೇನೆ ಮತ್ತು ನಿಮ್ಮ ಪ್ರೀತಿಯ ಅಪ್ಪ್ಪುಗೆ ಭಾವವು ನಾನು ಊಹಿಸಲು ಸಾಧ್ಯವಾಗದಷ್ಟು ಮೀರಿತ್ತು ಎಂದು ಹೇಳಿದ್ದಾರೆ.
ಇದು ಬರೀ ತಂಡವಲ್ಲ. ಇದೊಂದು ಅದ್ಭುತ ಭಾವನೆ. ನಾವೆಲ್ಲ ಒಂದು ಕುಟುಂಬ. ಒಳಗೆ ಆಳವಾಗಿ ಉರಿಯುವ ಬೆಂಕಿ.. ನಾವು ನಮ್ಮೆಲ್ಲಾ ಪ್ರಯತ್ನವನ್ನು ನೀಡಲಿದ್ದೇವೆ. ಏನೇ ಬರಲಿ, ಒಟ್ಟಿಗೆ ಮುನ್ನುಗ್ಗೋಣ.. ಆರ್‌ಸಿಬಿ ಕುಟುಂಬ. 🔥❤️ #PlayBold ಎಂದಿದ್ದಾರೆ. ಇದರೊಂದಿಗೆ "ನಮ್ಮ ತಂಡ, ನಮ್ಮ ಕನಸು, ನಮ್ಮ ಹೆಮ್ಮೆ" ಎಂದು ಕನ್ನಡದಲ್ಲಿಯೇ ಪೋಸ್ಟ್ ಮಾಡಿ ಕನ್ನಡಿಗರು ಹಾಗೂ ಆರ್‌ಸಿಬಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ.
ಈ ಪೋಸ್ಟ್‌ಗೆ ಕನ್ನಡಿರು ಫಿದಾ ಆಗಿದ್ದಾರೆ. ಆರ್‌ಸಿಬಿ ಖಾತೆಯಿಂದ Oh Captain! Our Captain! 🫡 ಎಂದು ಕಮೆಂಟ್ ಮಾಡಲಾಗಿದೆ. ಇದೀಗ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.












Click it and Unblock the Notifications