Rajat Patidar: ಟೀಂ ಇಂಡಿಯಾ ನಾಯಕತ್ವದ ರೇಸ್‌ಗೆ ರಜತ್ ಪಾಟಿದಾರ್ ಎಂಟ್ರಿ
ಐಪಿಎಲ್ 2025ರ ಆವೃತ್ತಿಯಲ್ಲಿ ಆರ್ ಸಿಬಿ ತಂಡದ ನಾಯಕತ್ವ ವಹಿಸಿಕೊಂಡ ರಜತ್ ಪಟಿದಾರ್ ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಆರ್ ಸಿಬಿ ಈವರೆಗೆ ಆಡಿರುವ 8 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಕೊಹ್ಲಿ, ಹೇಜಲ್‌ವುಡ್, ಭುವನೇಶ್ವರ್ ಕುಮಾರ್ ಅವರಂತಹ ಹಿರಿಯ ಆಟಗಾರರನ್ನು ಸಂಭಾಳಿಸಿಕೊಂಡು ಹೋಗುತ್ತಿದ್ದು ಮಾಜಿ ಆಟಗಾರರ ಮೆಚ್ಚುಗೆ ಪಡೆದುಕೊಂಡಿದ್ದಾರೆ.
ರಜತ್ ಪಟಿದಾರ್ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದರೂ ಬ್ಯಾಟಿಂಗ್‌ನಲ್ಲೂ ಜವಾಬ್ದಾರಿಯುತ ಆಟವಾಡುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಅರ್ಧಶತಕ ಸಿಡಿಸುವ ಮೂಲಕ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ರಾಬಿನ್ ಉತ್ತಪ್ಪ ಹೇಳಿದ್ದೇನು?
ರಜತ್ ಪಾಟಿದಾರ್ ಐಪಿಎಲ್ 2025 ರಲ್ಲಿ ತವರಿನಲ್ಲಿ ಉತ್ತಮ ಪ್ರದರ್ಶನ ನೀಡದಿರಬಹುದು ಆದರೆ ಅವರ ನಾಯಕತ್ವವು ಭಾರತದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅವರಿಗೆ ಇಷ್ಟವಾಗಿದೆ. ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿಬಿ ಪಂಜಾಬ್ ಕಿಂಗ್ಸ್ ವಿರುದ್ಧ 5 ವಿಕೆಟ್‌ಗಳಿಂದ ಸೋತಿತು. ದೇವದತ್ ಪಡಿಕಲ್ ಅವರನ್ನು ತಂಡದಿಂದ ಹೊರಗಿಡುವ ನಿರ್ಧಾರಕ್ಕೆ ಬೌಲರ್‌ಗಳಿಗೆ ಅನುಕೂಲಕರವಾದ ಪರಿಸ್ಥಿತಿಗಳು ಕಾರಣವೆಂದು ಪಟಿದಾರ್ ಹೇಳಿದರು. ಪಿಚ್ ಹೊರತಾಗಿಯೂ, ತಂಡವು ಉತ್ತಮವಾಗಿ ಬ್ಯಾಟಿಂಗ್ ಮಾಡಿ ಗೆಲುವಿನ ಮೊತ್ತ ಕಲೆಹಾಕಬೇಕು ಎಂದರು.
ನಾವು ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಿತ್ತು, ಪಾಲುದಾರಿಕೆಯಲ್ಲಿ ದೊಡ್ಡ ಮೊತ್ತ ಕಲೆಹಾಕುವುದು ಮುಖ್ಯವಾಗುತ್ತದೆ. ಬೇಗ ಬೇಗನೆ ವಿಕೆಟ್ ಕಳೆದುಕೊಂಡೆವು ಇದು ನಮಗೆ ಪಾಠ, ಪರಿಸ್ಥಿತಿಯಿಂದಾಗಿ ದೇವದತ್ ಪಡಿಕ್ಕಲ್ ಅವರನ್ನು ಕೈಬಿಡಬೇಕಾಯಿತು. ವಿಕೆಟ್ ಏನೂ ತುಂಬಾ ಕಷ್ಟದ್ದಾಗಿರಲಿಲ್ಲ, ಮಳೆಯ ಕಾರಣದಿಂದ ಪಿಚ್ ಕವರ್ ಅಡಿಯಲ್ಲಿದ್ದ ಕಾರಣ ಪಂಜಾಬ್ ಬೌಲರ್‌ಗಳಿಗೆ ಸಹಾಯ ಮಾಡಿತು. ವಿಕೆಟ್ ಹೇಗೆ ಇದ್ದರೂ ನಾವು ಚೆನ್ನಾಗಿ ಬ್ಯಾಟಿಂಗ್ ಮಾಡಿ ಗೆಲುವಿನ ಮೊತ್ತವನ್ನು ಗಳಿಸಬೇಕು. ನಮ್ಮ ಬೌಲಿಂಗ್ ಸಾಕಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪಂದ್ಯದ ಬಳಿಕ ರಜತ್ ಪಾಟಿದಾರ್ ಹೇಳಿದ್ದರು.
ಈ ಬಗ್ಗೆ ಮಾತನಾಡಿದ ರಾಬಿನ್ ಉತ್ತಪ್ಪ, "ರಜತ್ ಪಾಟಿದಾರ್ ಆರ್‌ಸಿಬಿಯ ಬ್ಯಾಟಿಂಗ್ ಬಗ್ಗೆ ಹೊಣೆಯನ್ನು ವಹಿಸಿಕೊಂಡ ರೀತಿ ನನಗೆ ತುಂಬಾ ಇಷ್ಟವಾಯಿತು. ನಾಯಕನಾಗಿ ಉತ್ತಮ ವ್ಯಕ್ತಿತ್ವವನ್ನು ತೋರಿಸುತ್ತಾರೆ. ಅವರು ತವರಿನಲ್ಲಿ ಹೇಗೆ ಗೆಲ್ಲುತ್ತಾರೆ ಎನ್ನುವ ಬಗ್ಗೆ ಕೆಲಸ ಮಾಡಬೇಕು ಮತ್ತು ಅವರು ಹಾಗೆ ಮಾಡಿದರೆ ಭಾರತೀಯ ಕ್ರಿಕೆಟ್‌ನಲ್ಲಿ ನಾಯಕತ್ವದ ರೇಸ್‌ನಲ್ಲಿ ಮುಂಚೂಣಿಯಲ್ಲಿರುತ್ತಾರೆ" ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.
ತವರಿನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಕಂಡಿದ್ದ ಆರ್ ಸಿಬಿ ಭಾನುವಾರ ಅವರ ತವರಿನ ಅಂಗಳದಲ್ಲೇ ಗೆಲುವು ಸಾಧಿಸುವ ಮೂಲಕ ಸೇಡು ತೀರಿಸಿಕೊಂಡಿದೆ. ಆಡಿರುವ 8 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಗೆಲುವ ಸಾಧಿಸಿದ್ದು 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.












Click it and Unblock the Notifications