PBKS vs MI: ಮುಂಬೈ ಇಂಡಿಯನ್ಸ್‌ಗೆ ಸೋಲಿನ ಆಘಾತ; ಪಂಜಾಬ್ ಕಿಂಗ್ಸ್ ಟೇಬಲ್ ಟಾಪರ್
ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಈ ಮೂಲಕ ಕ್ವಾಲಿಫೈಯರ್ ಪಂದ್ಯ ಆಡುವ ಅವಕಾಶವನ್ನು ಖಚಿತಪಡಿಸಿಕೊಂಡಿದೆ. ಮುಂಬೈ ಇಂಡಿಯನ್ಸ್ ನಾಲ್ಕನೇ ಸ್ಥಾನದಲ್ಲೇ ಉಳಿಯಲಿದ್ದು ಎಲಿಮಿನೇಟರ್ ಪಂದ್ಯ ಆಡಲಿದ್ದಾರೆ.
ನಾಲ್ಕು ತಂಡಗಳು ಪ್ಲೇಆಫ್ ಸ್ಥಾನ ಖಚಿತಪಡಿಸಿಕೊಂಡಿದ್ದರೂ ಮೊದಲ ಎರಡು ಸ್ಥಾನ ಯಾರಿಗೆ ಎನ್ನುವುದು ಕೊನೆಯ ಎರಡು ಪಂದ್ಯ ಮುಗಿಯುವವರೆಗೆ ಖಚಿತವಾಗುವುದಿಲ್ಲ. ಲೀಗ್ ಹಂತದಲ್ಲಿ ಇನ್ನು ಒಂದೇ ಒಂದು ಪಂದ್ಯ ಉಳಿದಿದೆ. ಈಗ ಪಂಜಾಬ್ ಕಿಂಗ್ ಮೊದಲ ಸ್ಥಾನದಲ್ಲಿದ್ದು, ಮಂಗಳವಾರ ಎರಡು ಮತ್ತು ಮೂರನೇ ಸ್ಥಾನ ಯಾರಿಗೆ ಎನ್ನುವುದು ತಿಳಿಯಲಿದೆ.

ಮುಂಬೈಗೆ ಸೂರ್ಯಕುಮಾರ್ ಆಸರೆ
ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 184 ರನ್ ಕಲೆಹಾಕಿತು. ಮತ್ತೊಮ್ಮೆ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್‌ಗೆ ಆಸರೆಯಾದರು. ರೋಹಿತ್ ಶರ್ಮಾ 24 ರನ್, ರಿಯಾನ್ ರಿಕಲ್ಟನ್ 27 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ 57 ರನ್ ಗಳಿಸಿದರು.
ಹಾರ್ದಿಕ್ ಪಾಂಡ್ಯ 26 ರನ್ ಗಳಿಸಿದರೆ, ನಮನ್ ಧಿರ್ 20 ರನ್ ಗಳಿಸಿದರು. ಪಂಜಾಬ್ ಕಿಂಗ್ಸ್ ಪರ ಅರ್ಷದೀಪ್ ಸಿಂಗ್, ವಿಜಯ್ ಕುಮಾರ್ ವೈಶಾಖ್ ಮತ್ತು ಮಾರ್ಕೊ ಯಾನ್ಸನ್ ತಲಾ 2 ವಿಕೆಟ್ ಪಡೆದರೆ, ಹರ್ಪ್ರೀತ್ ಬ್ರಾರ್ 1 ವಿಕೆಟ್ ಪಡೆದುಕೊಂಡರು.
ಪ್ರಿಯಾಂಶ್, ಇಂಗ್ಲಿಸ್ ಅಬ್ಬರ
185 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಸಾಧಾರಣ ಆರಂಭ ಕಂಡಿತು. ಪ್ರಭ್‌ಸಿಮ್ರನ್ ಸಿಂಗ್ ಕೇವಲ 13 ರನ್ ಗಳಿಸಿ ಔಟಾದರು. ಪ್ರಿಯಾಂಶ್ ಆರ್ಯ ಮತ್ತು ಜೋಶ್ ಇಂಗ್ಲಿಸ್ ಮುಂಬೈ ಇಂಡಿಯನ್ಸ್‌ನ ಬಲಿಷ್ಠ ಬೌಲಿಂಗ್ ಪಡೆಯನ್ನು ಇನ್ನಿಲ್ಲದಂತೆ ಕಾಡಿದರು. ಎರಡನೇ ವಿಕೆಟ್‌ಗೆ ಈ ಜೋಡಿ 109 ರನ್ ಕಲೆಹಾಕುವ ಮೂಲಕ ಪಂಜಾಬ್ ಗೆಲುವನ್ನು ಸುಲಭವಾಗಿಸಿದರು.
ಪ್ರಿಯಾಂಶ್ ಆರ್ಯ 35 ಎಸೆತಗಳಲ್ಲಿ 62 ರನ್ ಗಳಿಸಿದರೆ, ಜೋಶ್ ಇಂಗ್ಲಿಸ್ 42 ಎಸೆತಗಳಲ್ಲಿ 9 ಬೌಂಡರಿ 3 ಸಿಕ್ಸರ್ ಸಹಿತ 73 ರನ್ ಗಳಿಸಿದರು. ನಾಯಕ ಶ್ರೇಯಸ್ ಅಯ್ಯರ್ 16 ಎಸೆತಗಳಲ್ಲಿ ಅಜೇಯ 26 ರನ್ ಗಳಿಸುವ ಮೂಲಕ ಪಂಜಾಬ್ ಕಿಂಗ್ಸ್‌ಗೆ ಗೆಲುವು ತಂದುಕೊಟ್ಟರು.
ಈ ಗೆಲುವಿನ ಮೂಲಕ ಮೇ 29ರಂದು ಕ್ವಾಲಿಫೈಯರ್ 1 ಪಂದ್ಯವನ್ನು ಆಡಲು ಪಂಜಾಬ್ ಕಿಂಗ್ಸ್ ಸಜ್ಜಾಗಿದೆ. ಎದುರಾಳಿ ಯಾರು ಎನ್ನುವುದು ಮಂಗಳವಾರ ನಿರ್ಧಾರವಾಗಲಿದೆ. ಆರ್ ಸಿಬಿ ಏನಾದರೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದರೆ ಆರ್ ಸಿಬಿ ಕ್ವಾಲಿಫೈಯರ್ 1 ಪಂದ್ಯ ಆಡಲು ಅರ್ಹತೆ ಪಡೆಯಲಿದೆ, ಸೋತರೆ ಗುಜರಾತ್ ಟೈಟಾನ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ.












Click it and Unblock the Notifications