RCB: ವಿರಾಟ್ ಕೊಹ್ಲಿ ಅಲ್ಲ ಈತನೇ ಈತನೇ ಆರ್‌ಸಿಬಿ ನಾಯಕ!
ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಮೆಗಾ ಹರಾಜಿನಲ್ಲಿ ಆರ್ ಸಿಬಿ ಬಲಿಷ್ಠ ತಂಡವನ್ನು ಕಟ್ಟುವಲ್ಲಿ ಯಶಸ್ವಿಯಾಗಿದೆ. ವಿರಾಟ್ ಕೊಹ್ಲಿ, ರಜತ್ ಪಟಿದಾರ್ ಮತ್ತು ಯಶ್ ದಯಾಳ್‌ರನ್ನು ಮಾತ್ರ ಉಳಿಸಿಕೊಂಡಿದ್ದ ಆರ್ ಸಿಬಿ ಉಳಿದ ಎಲ್ಲಾ ಆಟಗಾರರನ್ನು ಬಿಡುಗಡೆ ಮಾಡಿತ್ತು. ಐಪಿಎಲ್ ಮೆಗಾ ಹರಾಜಿನಲ್ಲಿ ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಭುವನೇಶ್ವರ್ ಕುಮಾರ್, ಟಿಮ್ ಡೇವಿಡ್, ಜೋಶ್ ಹೇಜಲ್‌ವುಡ್‌ರಂತಹ ಪ್ರಮುಖ ಆಟಗಾರರನ್ನು ಖರೀದಿ ಮಾಡುವ ಮೂಲಕ ತಂಡಕ್ಕೆ ಆನೆಬಲ ಬಂದಿದೆ.
ಆರ್ ಸಿಬಿ ಈ ಬಾರಿ ಮೆಗಾ ಹರಾಜಿನಲ್ಲಿ ಕನ್ನಡಿಗ ಕೆಎಲ್ ರಾಹುಲ್‌ರನ್ನು ಖರೀದಿ ಮಾಡುತ್ತದೆ, ಅವರೇ ತಂಡದ ನಾಯಕರಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಆರ್ ಸಿಬಿ ಲೆಕ್ಕಾಚಾರವೇ ಬೇರೆ ಇತ್ತು, ಒಂದಿಬ್ಬರು ಸ್ಟಾರ್ ಆಟಗಾರರ ಮೇಲೆ ಕೋಟಿ ಕೋಟಿ ಸುರಿಯುವ ಬದಲು ಎಲ್ಲಾ ವಿಭಾಗದಲ್ಲೂ ತಂಡವನ್ನು ಬಲಗೊಳಿಸುವ ಆಟಗಾರರನ್ನು ಖರೀದಿ ಮಾಡಿದೆ.

ಫಿಲ್ ಸಾಲ್ಟ್, ಜಿತೇಶ್ ಶರ್ಮಾ ವಿಕೆಟ್ ಕೀಪರ್ ಬ್ಯಾಟರ್ ಗಳಾಗಿದ್ದು ರಜತ್ ಪಟಿದಾರ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಜೊತೆಗೆ ತಂಡದ ಬ್ಯಾಟಿಂಗ್‌ಗೆ ಬಲ ತುಂಬಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್, ಟಿಮ್ ಡೇವಿಡ್ ಮತ್ತು ಕೃನಾಲ್ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ.
ಜೋಶ್ ಹೇಜಲ್‌ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್, ರಸಿಕ್ ದಾರ್ ಬೌಲಿಂಗ್ ಅಸ್ತ್ರವಾಗಿದ್ದು, ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ಲಿಯಾಮ್ ಲಿವಿಂಗ್‌ಸ್ಟೋನ್ ಕೂಡ ಬೌಲಿಂಗ್ ವಿಭಾಗಕ್ಕೆ ಬಲತುಂಬುವ ಸಾಮರ್ಥ್ಯ ಹೊಂದಿದ್ದಾರೆ.
ಬಲಿಷ್ಠ ತಂಡವನ್ನೇನೋ ಕಟ್ಟಾಯಿತು ಆದರೆ ತಂಡದ ನಾಯಕ ಯಾರಾಗುತ್ತಾರೆ ಎನ್ನುವ ಪ್ರಶ್ನೆ ಶುರುವಾಗಿದೆ. ಕೆಲವರು ವಿರಾಟ್ ಕೊಹ್ಲಿ ಅವರೇ ತಂಡದ ನಾಯಕನಾಗುತ್ತಾರೆ ಎನ್ನುವ ಆತ್ಮವಿಶ್ವಾಸ ಹೊಂದಿದ್ದಾರೆ. ವಿರಾಟ್ ಕೊಹ್ಲಿಗೆ ಆರ್ ಸಿಬಿ ನಾಯಕತ್ವ ಹೊಸದೇನಲ್ಲ ಅವರು ಈ ಮೊದಲು ತಂಡವನ್ನು ಮುನ್ನಡೆಸಿದ್ದಾರೆ. ಮೊದಲ ಆವೃತ್ತಿಯಿಂದಲೂ ಆರ್ ಸಿಬಿ ತಂಡದಲ್ಲೇ ಇದ್ದಾರೆ.
ಈತನಿಗೆ ನಾಯಕತ್ವ
ಆದರೆ ವಿರಾಟ್ ಕೊಹ್ಲಿ ನಾಯಕನ ಜವಾಬ್ದಾರಿ ವಹಿಸಿಕೊಳ್ಳುವುದು ಅನುಮಾನವಾಗಿದೆ. ಒಂದು ವೇಳೆ ಕೊಹ್ಲಿ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳದೇ ಇದ್ದರೆ ಇನ್ಯಾರಿಗೆ ನಾಯಕತ್ವ ಎನ್ನುವ ಪ್ರಶ್ನೆ ಮೂಡಲಿದೆ. ವಿರಾಟ್ ಒಪ್ಪದೇ ಇದ್ದರೆ ತಂಡದ ಪ್ರಮುಖ ಬ್ಯಾಟರ್ ರಜತ್ ಪಟಿದಾರ್ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ರಜತ್ ಪಟಿದಾರ್ ಆರ್ ಸಿಬಿ ತಂಡದ ಪ್ರಮುಖ ಬ್ಯಾಟರ್ ಆಗಿದ್ದಾರೆ. 2022ರ ಮೆಗಾ ಹರಾಜಿನಲ್ಲಿ 20 ಲಕ್ಷ ರೂಪಾಯಿಗೆ ಆರ್ ಸಿಬಿ ತಂಡ ಸೇರಿದ ಅವರು ಈಗ 11 ಕೋಟಿ ರೂಪಾಯಿಗೆ ರೀಟೇನ್ ಆಗಿದ್ದಾರೆ. ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿರುವ ರಜತ್ ಪಟಿದಾರ್ ಅವರಿಗೆ ಆರ್ ಸಿಬಿ ನಾಯಕತ್ವ ಸಿಗಬಹುದು ಎನ್ನಲಾಗಿದೆ.
ರಜತ್ ಪಟಿದಾರ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಮಧ್ಯಪ್ರದೇಶ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ ಅವರ ನಾಯಕತ್ವದಲ್ಲಿ ಮಧ್ಯಪ್ರದೇಶ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ. ಪಟಿದಾರ್ ತಾನು ಉತ್ತಮ ನಾಯಕ ಎನ್ನುವುದನ್ನು ಈಗಾಗಲೇ ಸಾಬೀತು ಮಾಡಿದ್ದು, ಅನುಭವ ಕೂಡ ಪಡೆದುಕೊಂಡಿದ್ದಾರೆ.
ಇದನ್ನೆಲ್ಲಾ ಪರಿಗಣಿಸಿ ರಜತ್ ಪಟಿದಾರ್ ಅವರಿಗೆ ನಾಯಕತ್ವ ಸಿಗುವ ಸಾಧ್ಯತೆ ಇದೆ. ಪಟಿದಾರ್ ನಾಯಕನಾದರೂ ವಿರಾಟ್ ಕೊಹ್ಲಿ ಅವರ ಮಾರ್ಗದರ್ಶನ ಬೇಕೇ ಬೇಕು ಎಂದು ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಕೂಡ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications