Champions Trophy: ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದ ನ್ಯೂಜಿಲೆಂಡ್ ಫೈನಲ್‌ಗೆ
ಲಾಹೋರ್ ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ 50 ರನ್‌ಗಳ ಗೆಲುವು ಸಾಧಿಸಿದೆ. ಈ ಗೆಲುವಿನ ಮೂಲಕ ಚಾಂಪಿಯನ್ಸ್ ಟ್ರೋಫಿ ಫೈನಲ್ ತಲುಪಿದ್ದು ಮಾರ್ಚ್ 9ರಂದು ದುಬೈನಲ್ಲಿ ಭಾರತ ನ್ಯೂಜಿಲೆಂಡ್ ಪ್ರಶಸ್ತಿಗಾಗಿ ಸೆಣೆಸಲಿವೆ.
ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ವಿಲ್ ಯಂಗ್ 21 ರನ್ ಗಳಿಸಿ ಔಟಾದರು. ಬಳಿಕ ಜೊತೆಯಾದ ರಚಿನ್ ರವೀಂದ್ರ 101 ಎಸೆತಗಳಲ್ಲಿ 108 ರನ್ ಗಳಿಸಿದರು, ಕೇನ್ ವಿಲಿಯಮ್ಸನ್ 94 ಎಸೆತಗಳಲ್ಲಿ 102 ರನ್ ಗಳಿಸಿದರು. ಈ ಜೋಡಿ ಎರಡನೇ ವಿಕೆಟ್‌ಗೆ 170 ರನ್ ಕಲೆಹಾಕಿತು.

ಬಳಿಕ ಬಂದ ಡೇರಿಲ್ ಮಿಚೆಲ್ 49 ರನ್ ಗಳಿಸಿದರೆ, ಗ್ಲೆನ್ ಫಿಲಿಪ್ಸ್ 27 ಎಸೆತಗಳಲ್ಲಿ 49 ರನ್ ಗಳಿಸಿ ಮಿಂಚಿದರು. ಅಂತಿಮವಾಗಿ ನ್ಯೂಜಿಲೆಂಡ್ 50 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 362 ರನ್ ಕಲೆಹಾಕಿತು.
ಮಿಲ್ಲರ್ ಹೋರಾಟ ವ್ಯರ್ಥ
ಈ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 312 ರನ್ ಗಳಿಸುವ ಮೂಲಕ 50 ರನ್‌ಗಳಿಂದ ಸೋಲು ಕಂಡಿತು. ಟೆಂಬಾ ಬವುಮಾ 56 ರನ್ ಗಳಿಸಿದರೆ, ರಾಸೀ ವಾನ್ ಡೆರ್ ಡುಸೆನ್ 69 ರನ್ ಗಳಿಸಿದರು. ಡೇವಿಡ್ ಮಿಲ್ಲರ್ 67 ಎಸೆತಗಳಲ್ಲಿ 10 ಬೌಂಡರಿ 4 ಸಿಕ್ಸರ್ ಸಹಿತ ಅಜೇಯ 100 ರನ್ ಗಳಿಸಿದರೂ ತಂಡದ ಸೋಲು ತಪ್ಪಿಸಲು ಆಗಲಿಲ್ಲ. ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಮೂರು ವಿಕೆಟ್ ಪಡೆದು ದಕ್ಷಿಣ ಆಫ್ರಿಕಾವನ್ನು ಕಟ್ಟಿಹಾಕಿದರು.
ಭಾರತ- ನ್ಯೂಜಿಲೆಂಡ್ ಫೈನಲ್
ಸೆಮಿಫೈನಲ್‌ನಲ್ಲಿ ಗೆಲುವು ಸಾಧಿಸಿದ ನ್ಯೂಜಿಲೆಂಡ್ ಇದೀಗ ಫೈನಲ್‌ನಲ್ಲಿ ಭಾರತ ತಂಡವನ್ನು ಎದುರಿಸಲಿದೆ. ಮಾರ್ಚ್ 9ರಂದು ಭಾನುವಾರ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಲೀಗ್ ಹಂತದಲ್ಲಿ ಭಾರತ ಈಗಾಗಲೇ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದೆ. ಆದರೆ ನ್ಯೂಜಿಲೆಂಡ್ ಎಂತಹ ಬಲಿಷ್ಠ ತಂಡ ಎನ್ನುವುದು ಈಗಾಗಲೇ ಗೊತ್ತಾಗಿದೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗದಲ್ಲಿ ಬಲಿಷ್ಠವಾಗಿದ್ದು ಭಾರತಕ್ಕೆ ಸವಾಲಾಕಲು ಸಜ್ಜಾಗಿದೆ.
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಸತತ ಮೂರನೇ ಬಾರಿ ಫೈನಲ್ ತಲುಪಿರುವ ಭಾರತ ತಂಡ ಈ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. 2013ರಲ್ಲಿ ಭಾರತ ಚಾಂಪಿಯನ್ ಆಗಿದ್ದರೆ, 2017ರ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೋಲು ಕಂಡಿತ್ತು, ಇದೀಗ ಮೂರನೇ ಬಾರಿ ಫೈನಲ್ ತಲುಪಿದ್ದು ಮತ್ತೊಂದು ಐಸಿಸಿ ಪ್ರಶಸ್ತಿ ಗೆಲುವಿನ ವಿಶ್ವಾಸದಲ್ಲಿದೆ.












Click it and Unblock the Notifications