SMAT 2024 Final: ರಜತ್ ಪಟಿದಾರ್ ಹೋರಾಟ ವ್ಯರ್ಥ; ಮುಂಬೈಗೆ ಭರ್ಜರಿ ಗೆಲುವು
ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2024ರ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ರಜತ್ ಪಟಿದಾರ್ ಹೋರಾಟ ವ್ಯರ್ಥವಾಗಿದ್ದು ಮುಂಬೈ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಟಾಸ್ ಗೆದ್ದ ಮುಂಬೈ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಮಧ್ಯಪ್ರದೇಶ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 174 ರನ್ ಕಲೆಹಾಕಿತು.
ಮಧ್ಯಪ್ರದೇಶ ನಾಯಕ ರಜತ್ ಪಟಿದಾರ್ ಏಕಾಂಗಿ ಹೋರಾಟ ನಡೆಸಿದರು. 40 ಎಸೆತಗಳಲ್ಲಿ 6 ಬೌಂಡರಿ ಮತ್ತು 6 ಸಿಕ್ಸರ್ ಸಹಿತ ಅಜೇಯ 81 ರನ್ ಗಳಿಸಿ ಸವಾಲಿನ ಮೊತ್ತ ಕಲೆಹಾಕಲು ನೆರವಾದರು. ವೆಂಕಟೇಶ್ ಅಯ್ಯರ್ 9 ಎಸೆತಗಳಲ್ಲಿ 17 ರನ್ ಗಳಿಸಿ ಔಟಾದರು. ರಾಹುಲ್ ಬಾತಮ್ 19 ರನ್, ಸುಬ್ರಾಂಶ್ ಸೇನಾಪತಿ 23 ರನ್ ಗಳಿಸಿದರು. ಶಾರ್ದೂಲ್ ಠಾಕೂರ್ ಮತ್ತು ರೋಯ್‌ಸ್ಟನ್ ದಿಯಾಸ್ ತಲಾ 2 ವಿಕೆಟ್ ಪಡೆದರು. ಅಂಕೋಲೇಕರ್, ಶಿವಂ ದುಬೆ ಮತ್ತು ಸೂರ್ಯಾಂಶ್ ಶೆಡ್ಗೆ ತಲಾ 1 ವಿಕೆಟ್ ಪಡೆದುಕೊಂಡರು.

ಸೂರ್ಯ, ಸೂರ್ಯಾಂಶ್ ಭರ್ಜರಿ ಬ್ಯಾಟಿಂಗ್
175 ರನ್‌ಗಳ ಸವಾಲಿನ ಗುರಿಯನ್ನು ಬೆನ್ನತ್ತಿದ ಮುಂಬೈ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಪೃಥ್ವಿ ಶಾ 10 ರನ್ ಗಳಿಸಿ ಔಟಾದರು. ಅಜಿಂಕ್ಯ ರಹಾನೆ 30 ಎಸೆತಗಳಲ್ಲಿ 37 ರನ್ ಗಳಿಸಿದರು. ನಾಯಕ ಶ್ರೇಯಸ್ ಅಯ್ಯರ್ 9 ಎಸೆತಗಳಲ್ಲಿ 16 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ 35 ಎಸೆತಗಳಲ್ಲಿ 48 ರನ್ ಗಳಿಸಿದರು. ಶಿವಮ್ ದುಬೆ 6 ಎಸೆತಗಳಲ್ಲಿ 9 ರನ್ ಗಳಿಸಿದರು. ಅಥರ್ವ ಅಂಕೋಲೇಕರ್ 6 ಎಸೆತಗಳಲ್ಲಿ ಅಜೇಯ 16 ರನ್ ಗಳಿಸಿದರೆ, ಸೂರ್ಯಾಂಶ್ ಶೆಡ್ಗೆ 15 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಿತ ಅಜೇಯ 36 ರನ್ ಗಳಿಸುವ ಮೂಲಕ ಮುಂಬೈಗೆ ಸುಲಭ ಗೆಲುವು ತದುಕೊಟ್ಟರು.
ಭರ್ಜರಿ ಆಲ್‌ರೌಂಡರ್ ಪ್ರದರ್ಶನ ನೀಡಿದ ಸೂರ್ಯಾಂಶ್ ಶೆಡ್ಗೆ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು. ಇಡೀ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅಜಿಂಕ್ಯ ರಹಾನೆ ಪಂದ್ಯಾವಳಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.
ನಾಯಕನಾಗಿ ಪಟಿದಾರ್ ಯಶಸ್ಸು
ಆರ್ ಸಿಬಿ ತಂಡದ ಭರವಸೆಯ ಬ್ಯಾಟರ್ ಆಗಿರುವ ರಜತ್ ಪಟಿದಾರ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಮಧ್ಯಪ್ರದೇಶದ ನಾಯಕನಾಗಿ ಯಶಸ್ವಿಯಾಗಿದ್ದಾರೆ. ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಜೊತೆಗೆ ನಾಯಕತ್ವ ಜವಾಬ್ದಾರಿಯನ್ನು ನಿಭಾಯಿಸಿದ ಅವರು ತಮ್ಮ ತಂಡವನ್ನು ಫೈನಲ್‌ವರೆಗೆ ಮುನ್ನಡೆಸಿದರು.












Click it and Unblock the Notifications