MI vs KKR: ಹಾಲಿ ಚಾಂಪಿಯನ್ ಕೆಕೆಆರ್ ತಂಡಕ್ಕೆ ಆಘಾತ ಕೊಟ್ಟ ಅಶ್ವನಿ ಕುಮಾರ್ ಯಾರು?
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಮುಂಬೈ ಇಂಡಿಯನ್ಸ್‌ನ ಯುವ ವೇಗಿ ಅಶ್ವನಿ ಕುಮಾರ್ ಆಘಾತ ನೀಡಿದ್ದಾರೆ. ಪ್ರಮುಖ 4 ವಿಕೆಟ್ ಪಡೆಯುವ ಮೂಲಕ ಕೆಕೆಆರ್ ತಂಡವನ್ನು ಕೇವಲ 116 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆಡಿದ ಮೊದಲ ಪಂದ್ಯದಲ್ಲೇ ಅಶ್ವನಿ ಕುಮಾರ್ ಅತ್ಯುತ್ತಮ ಪ್ರದರ್ಶನ ನೀಡಿದ್ದು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಮೊದಲ ಎರಡು ಪಂದ್ಯಗಳಲ್ಲಿ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡುವಲ್ಲೇ ಎಡವಿದ್ದ ಮುಂಬೈ ಇಂಡಿಯನ್ಸ್ ಮೂರನೇ ಪಂದ್ಯದಲ್ಲಿ ತಪ್ಪುಗಳನ್ನು ತಿದ್ದಿಕೊಂಡಿತು. ಗುಜರಾತ್ ಟೈಟಾನ್ಸ್ ವಿರುದ್ಧ ಅಷ್ಟೇನೂ ಉತ್ತಮ ಪ್ರದರ್ಶನ ನೀಡದ ಸತ್ಯನಾರಾಯಣ ರಾಜು ಅವರನ್ನು ಕೈಬಿಟ್ಟು ಅಶ್ವನಿ ಕುಮಾರ್ ಅವರಿಗೆ ಅವಕಾಶ ನೀಡಲಾಯಿತು.

ತಮ್ಮ ಬೌಲಿಂಗ್ ಆರಂಭಿಸುವ ಮುನ್ನವೇ ಕ್ವಿಂಟನ್ ಡಿಕಾಕ್ ಅವರ ಕ್ಯಾಚ್ ಹಿಡಿದರು. ಬಳಿಕ ತಮ್ಮ ಮೊದಲ ಓವರ್ ನ ಮೊದಲ ಎಸೆತದಲ್ಲೇ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಅಜಿಂಕ್ಯ ರಹಾನೆಯನ್ನು ಔಟ್ ಮಾಡುವ ಮೂಲಕ ತಂಡ ತಮ್ಮ ಮೇಲಿಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡರು.
ಅಜಿಂಕ್ಯ ರಹಾನೆ ಬೌಂಡರಿ ಹೊಡೆಯುವ ಪ್ರಯತ್ನದಲ್ಲಿ ತಿಲಕ್ ವರ್ಮಾಗೆ ಕ್ಯಾಚ್ ಕೊಟ್ಟರು. ಕ್ಯಾಚ್ ಹಿಡಿಯುವ ಸಂದರ್ಭದಲ್ಲಿ ತಿಲಕ್ ವರ್ಮಾ ಆರಂಭದಲ್ಲಿ ಎಡವಿದರೂ ಬಳಿಕ ಚೆಂಡನ್ನು ಹಿಡಿದುಕೊಳ್ಳುವಲ್ಲಿ ಯಶಸ್ವಿಯಾದರು.
ಯಾರು ಈ ಅಶ್ವನಿ ಕುಮಾರ್
ಅಶ್ವನಿ ಕುಮಾರ್ ಪಂಜಾಬ್‌ನ ಮೊಹಾಲಿಯಲ್ಲಿ ಜನಿಸಿದವರು. ಪಂಜಾಬ್‌ನ ಟಿ20 ಪಂದ್ಯಾವಳುಯಲ್ಲಿ ಶೇರ್-ಎ-ಪಂಜಾಬ್ ತಂಡಕ್ಕಾಗಿ ಆಡುತ್ತಾರೆ. ಇನ್ನಿಂಗ್ಸ್‌ನ ಕೊನೆಯಲ್ಲಿ ಬೌಲಿಂಗ್ ಮಾಡುವಲ್ಲಿ ಅವರು ಹೆಸರು ಮಾಡಿದ್ದಾರೆ. ಎರಡು ಪ್ರಥಮದರ್ಜೆ ಪಂದ್ಯಗಳನ್ನು ಆಡಿದ್ದು, 4 ಲಿಸ್ಟ್ ಎ ಮತ್ತು 4 ಟಿ20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಇಷ್ಟು ಕಡಿಮೆ ಪಂದ್ಯಗಳನ್ನು ಆಡಿದ್ದರೂ, ಅವರಲ್ಲಿನ ಪ್ರತಿಭೆಯನ್ನು ಗುರುತಿಸಿರುವ ಮುಂಬೈ ಇಂಡಿಯನ್ಸ್ ಸ್ಕೌಟ್ಸ್ ತಂಡಕ್ಕೆ ಅಭಿನಂದನೆ ಸಲ್ಲಿಸಬೇಕು.
2025 ರ ಐಪಿಎಲ್ ಮೆಗಾ ಹರಾಜಿನಲ್ಲಿ ಅವರನ್ನು ಮುಂಬೈ ಇಂಡಿಯನ್ಸ್ 30 ಲಕ್ಷ ರೂ.ಗೆ ಖರೀದಿಸಿತು. 2024 ರಲ್ಲಿ, ಅವರು ಪಂಜಾಬ್ ಕಿಂಗ್ಸ್ ತಂಡದ ಭಾಗವಾಗಿದ್ದರು ಫ್ರಾಂಚೈಸಿಗಾಗಿ ಒಂದೇ ಒಂದು ಪಂದ್ಯದಲ್ಲಿಯೂ ಆಡಲು ಅವಕಾಶ ಸಿಕ್ಕಿರಲಿಲ್ಲ.
2022 ರಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪಂಜಾಬ್ ಪರ ಪಾದಾರ್ಪಣೆ ಮಾಡಿದರು ಮತ್ತು ನಾಲ್ಕು ಪಂದ್ಯಗಳನ್ನು ಆಡಿದರು. ಪಂದ್ಯಾವಳಿಯಲ್ಲಿ 8.5 ರ ಎಕಾನಮಿಯಲ್ಲಿ ಮೂರು ವಿಕೆಟ್ ಪಡೆದುಕೊಂಡರು.
ಪಂದ್ಯಕ್ಕೆ ಬರುವುದಾದರೆ, ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿದ್ದರಿಂದ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ಬದಲಿ ಆಟಗಾರರ ಸ್ಥಾನಕ್ಕೆ ಇಳಿಸಲಾಯಿತು.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 16.2 ಓವರ್ ಗಳಲ್ಲಿ 116 ರನ್ ಗಳಿಸುಷ್ಟವರಲ್ಲಿ ಆಲೌಟ್ ಆಯಿತು. ಆಂಗ್‌ಕ್ರಿಶ್ ರಘುವಂಶಿ 26 ರನ್ ಗಳಿಸಿದರೆ, ರಮಣದೀಪ್ ಸಿಂಗ್ 22 ರನ್ ಗಳಿಸಿದರು. ಇವರಿಬ್ಬರನ್ನು ಬಿಟ್ಟರೆ ಉಳಿದ ಆಟಗಾರರು 20 ರನ್ ಕೂಡ ಗಳಿಸಲಿಲ್ಲ.












Click it and Unblock the Notifications