Hardik Pandya: ಸತತ ಸೋಲಿನ ಬಳಿಕ ದೇವರ ಮೊರೆ ಹೋದ ಹಾರ್ದಿಕ್ ಪಾಂಡ್ಯ
ಐಪಿಎಲ್ 2024ರ ಆವೃತ್ತಿಯಲ್ಲಿ ಆಡಿರುವ ಮೂರು ಪಂದ್ಯಗಳನ್ನು ಸೋತಿರುವ ಮುಂಬೈ ಇಂಡಿಯನ್ಸ್ ಅಂಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ನಾಯಕ ಹಾರ್ದಿಕ್ ಪಾಂಡ್ಯ ವಿರುದ್ಧ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. ಇದೆಲ್ಲದರ ನಡುವೆ ಪಾಂಡ್ಯ ಸದ್ಯ ದೇವರ ಮೊರೆ ಹೋಗಿದ್ದಾರೆ.
ಗುಜರಾತ್‌ನಲ್ಲಿರುವ ಸೋಮನಾಥ ದೇವಸ್ಥಾನಕ್ಕೆ ಭೇಟಿ ಕೊಟ್ಟ ಹಾರ್ದಿಕ್ ಪಾಂಡ್ಯ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಏಪ್ರಿಲ್ 1ರಂದು ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸೋತ ಬಳಿಕ ಮುಂಬೈ ಇಂಡಿಯನ್ಸ್ ಆಟಗಾರರಿಗೆ ಸುದೀರ್ಘ ಸಮಯ ಸಿಕ್ಕಿದ್ದು, ರಿಲ್ಯಾಕ್ಸ್ ಆಗುತ್ತಿದ್ದಾರೆ.

ನಾಯಕ ಹಾರ್ದಿಕ್ ಪಾಂಡ್ಯ ಮುಂದಿನ ಐಪಿಎಲ್ ಪಂದ್ಯಕ್ಕೆ ಮುನ್ನ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಭಾನುವಾರ (ಏಪ್ರಿಲ್ 7) ರಂದು ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತವರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
ಪಾಂಡ್ಯ ವಿರುದ್ಧ ಅಸಮಾಧಾನ
ಗುಜರಾತ್ ಟೈಟಾನ್ಸ್ ತಂಡವನ್ನು ಬಿಟ್ಟು ಮುಂಬೈ ಇಂಡಿಯನ್ಸ್ ಸೇರಿಕೊಂಡ ಪಾಂಡ್ಯ ಅವರಿಗೆ ಅಂದುಕೊಂಡ ಸ್ವಾಗತ ಸಿಕ್ಕಿಲ್ಲ. ರೋಹಿತ್ ಶರ್ಮಾ ಅವರ ನಾಯಕತ್ವ ಕಸಿದುಕೊಂಡರು ಎಂದು ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳು ಕೋಪಗೊಂಡೆ, ತಂಡವನ್ನು ಬಿಟ್ಟಿದ್ದಕ್ಕೆ ಗುಜರಾತ್ ಟೈಟನ್ಸ್ ಅಭಿಮಾನಿಗಳು ಕೂಡ ಕೋಪಗೊಂಡಿದ್ದರು.
ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅಭಿಮಾನಿಗಳು ಹಾರ್ದಿಕ್ ಪಾಂಡ್ಯರನ್ನು ಗೇಲಿ ಮಾಡಿದ್ದರು. ನಾಯಕನಾದ ಬಳಿಕ ಮುಂಬೈ ಇಂಡಿಯನ್ಸ್ ತಂಡ ಸತತವಾಗಿ ಮೂರು ಪಂದ್ಯಗಳನ್ನು ಸೋತಿರುವುದು ತಂಡದ ಚಿಂತೆ ಹೆಚ್ಚಿಸಿದೆ.
ಇನ್ನೂ ಮೊದಲ ಗೆಲುವಿನ ಹುಡುಕಾಟದಲ್ಲಿದ್ದು ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯ ಗೆದ್ದು, ಗೆಲುವಿನ ಖಾತೆ ತೆರೆಯುವ ವಿಶ್ವಾಸದಲ್ಲಿದೆ.
ಪಾಂಡ್ಯ ಖುಷಿ ಹೆಚ್ಚಿಸಿದ ಸೂರ್ಯಕುಮಾರ್
ಸಂಕಷ್ಟದ ಸಮಯದಲ್ಲೇ ಮುಂಬೈ ಇಂಡಿಯನ್ಸ್ ತಂಡಕ್ಕೆ ಖುಷಿ ಸುದ್ದಿ ಸಿಕ್ಕಿದೆ. ಪ್ರಮುಖ ಬ್ಯಾಟರ್ ಸೂರ್ಯಕುಮಾರ್ ಯಾದವ್ ಫಿಟ್ ಆಗಿದ್ದು ಈಗಾಗಲೇ ತಂಡವನ್ನು ಸೇರಿಕೊಂಡಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ಸೂರ್ಯ ಕಳೆದ ಮೂರು ಪಂದ್ಯಗಳನ್ನು ಕಳೆದುಕೊಂಡಿದ್ದರು.
ಶುಕ್ರವಾರ ಮುಂಬೈನಲ್ಲಿ ತಂಡವನ್ನು ಸೇರಿಕೊಂಡಿರುವ ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಇದು ತಂಡದ ಬ್ಯಾಟಿಂಗ್ ಬಲವನ್ನು ಮತ್ತಷ್ಟು ಹೆಚ್ಚಿಸಲಿದೆ. ಬೌಲಿಂಗ್‌ನಲ್ಲಿ ಬದಲಾವಣೆ ಮಾಡಲು ಪಾಂಡ್ಯಗೆ ಅವಕಾಶಗಳನ್ನು ಕೊಡುತ್ತದೆ.
ಸೂರ್ಯಕುಮಾರ್ ಆಗಮನ, ಸೋಮನಾಥನ ದರ್ಶನ ಹಾರ್ದಿಕ್ ಪಾಂಡ್ಯ ಅವರ ಸೋಲಿನ ಸರಪಳಿಯನ್ನು ಮುರಿಯಲು ಸಹಕಾರಿಯಾಗುತ್ತದಾ ಎನ್ನುವ ಪ್ರಶ್ನೆಗೆ ಉತ್ತರ ಭಾನುವಾರ ಸಿಗಲಿದೆ.












Click it and Unblock the Notifications