RCB: ವಿರಾಟ್ ಕೊಹ್ಲಿಯನ್ನು ಹೊಗಳಿ ಈ ಬಾರಿ ಆರ್‌ಸಿಬಿ ಕಪ್ ಗೆಲ್ಲುತ್ತೆ ಎಂದ ಮೋದಿ
ಐಪಿಎಲ್ 2025ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆಡಿದ ಆರು ಪಂದ್ಯಗಳಲ್ಲಿ 4 ಪಂದ್ಯಗಳಲ್ಲಿ ಗೆದ್ದು 8 ಅಂಕಗಳನ್ನು ಕಲೆಹಾಕಿದೆ, ಇನ್ನು ಉಳಿದ 8 ಪಂದ್ಯಗಳಲ್ಲಿ 4-5 ಪಂದ್ಯಗಳನ್ನು ಗೆದ್ದರೂ ಪ್ಲೇಆಫ್ ಸ್ಥಾನ ಬಹುತೇಕ ಖಚಿತವಾಗಿಲಿದೆ. ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗ ಬಲಿಷ್ಠವಾಗಿದ್ದು ಅನೇಕ ಮಾಜಿ ಕ್ರಿಕೆಟಿಗರೂ ಆರ್ ಸಿಬಿ ಪ್ಲೇಆಫ್ ತಲುಪುವ ನೆಚ್ಚಿನ ತಂಡಗಳಲ್ಲಿ ಒಂದು ಎಂದಿದ್ದಾರೆ.
ಐಪಿಎಲ್ ಎನ್ನುವ ಕ್ರಿಕೆಟ್ ಹಬ್ಬದ ರೂವಾರಿಯಾಗಿರುವ ಲಲಿತ್ ಮೋದಿ ಈ ಬಾರಿ ಆರ್ ಸಿಬಿ ಕಪ್ ಗೆಲ್ಲುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯಾವಳಿಯಲ್ಲಿ ಆರ್‌ಸಿಬಿ ಪ್ರಶಸ್ತಿಯನ್ನು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದು ವಿರಾಟ್ ಕೊಹ್ಲಿ ಐಪಿಎಲ್ ಟ್ರೋಫಿಯನ್ನು ಹಿಡಿದಿರುವ ಹೃದಯಸ್ಪರ್ಶಿ ಘಿಬ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.

17 ವರ್ಷಗಳಿಂದ ಒಮ್ಮೆಯೂ ಚಾಂಪಿಯನ್ ಆಗದೇ ಇದ್ದರೂ ಆರ್ ಸಿಬಿ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ಇನ್‌ಸ್ಟಾಗ್ರಾಂನಲ್ಲಿ 5 ಬಾರಿ ಕಪ್ ಗೆದ್ದಿರುವ ಸಿಎಸ್‌ಕೆ ತಂಡವನ್ನು ಹಿಂದಿಕ್ಕಿ ಆರ್ ಸಿಬಿ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ತಂಡ ಎನಿಸಿಕೊಂಡಿದೆ.
ಕೊಹ್ಲಿಯನ್ನು ಹೊಗಳಿದ ಲಲಿತ್ ಮೋದಿ
ಲಲಿತ್ ಮೋದಿ ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡ ಮತ್ತು ಆರ್ ಸಿಬಿ ನೀಡಿದ ಅಪಾರ ಕೊಡುಗೆಯನ್ನು ಶ್ಲಾಘಿಸಿದ್ದಾರೆ. "ಒಂದನೇ ಸೀಸನ್‌ನ ಆರಂಭದಿಂದಲೇ ಆರ್‌ಸಿಬಿ ತಂಡಕ್ಕಾಗಿ ಆಡಲು ಆರಂಭಿಸಿದ ವಿರಾಟ್ ಕೊಹ್ಲಿ, ಯುವ ಆಟಗಾರನಾಗಿದ್ದಾಗ ಭಾರತ ತಂಡವನ್ನು ಮುನ್ನಡೆಸಿ 2008 ರ ಅಂಡರ್-19 ಕ್ರಿಕೆಟ್ ವಿಶ್ವಕಪ್ ಗೆಲ್ಲಲು ಕಾರಣರಾದರು, ಅಲ್ಲಿಂದ ಅವರು ಅದ್ಭುತ ವೃತ್ತಿಜೀವನವನ್ನು ಮುನ್ನಡೆಸಿದರು, ಜಾಗತಿಕವಾಗಿ ಶತಕೋಟಿಗೂ ಹೆಚ್ಚು ಜನರ ಹೃದಯಗಳನ್ನು ಗೆದ್ದಿದ್ದಾರೆ. ತಂಡ ಮತ್ತು ಅವರಿಗೆ ಸೂಕ್ತವಾದ ಗೆಲುವು ಬೇಕಾಗಿದೆ. ನನ್ನ ಆತ್ಮೀಯ ಸ್ನೇಹಿತ ವಿಜಯ್ ಮಲ್ಯ 2008 ರಲ್ಲಿ ಆರ್ ಸಿಬಿ ತಂಡವನ್ನು 112 ಮಿಲಿಯನ್ ಡಾಲರ್‌ಗಳಿಗೆ ಖರೀದಿಸಿದರು. ಅವರಿಗೆ ಶುಭ ಹಾರೈಸುತ್ತೇನೆ" ಎಂದು ಮೋದಿ ಸಂದೇಶ ಹಂಚಿಕೊಂಡಿದ್ದಾರೆ.
ರಜತ್ ಪಾಟಿದಾರ್ ನಾಯಕತ್ವ
2025ರ ಆವೃತ್ತಿಯಲ್ಲಿ ರಜತ್ ಪಾಟಿದಾರ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಅವರ ನಾಯಕತ್ವಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಅವರ ನಾಯಕತ್ವದಲ್ಲಿ ಆರ್ ಸಿಬಿ 17 ವರ್ಷಗಳ ಬಳಿಕ ಚೆನ್ನೈನಲ್ಲಿ ಸಿಎಸ್‌ಕೆ ವಿರುದ್ಧ ಗೆದ್ದರೆ, 10 ವರ್ಷಗಳ ಬಳಿಕ ಮುಂಬೈನಲ್ಲಿ ಮುಂಬೈ ತಂಡವನ್ನು ಸೋಲಿಸಿದೆ. ತವರಿನಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದ್ದು, ಶುಕ್ರವಾರ ನಡೆಯುವ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಈ ಆವೃತ್ತಿಯಲ್ಲಿ ತವರಿನಲ್ಲಿ ಮೊದಲ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ.












Click it and Unblock the Notifications