SL vs Eng: ಕುಮಾರ್ ಸಂಗಾಕ್ಕರ ಅಮೋಘ ಶತಕ; ಇಂಗ್ಲೆಂಡ್ ವಿರುದ್ಧ ಶ್ರೀಲಂಕಾಗೆ ಭರ್ಜರಿ ಜಯ
ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ ಟಿ20 ಪಂದ್ಯದಲ್ಲಿ ಶ್ರೀಲಂಕಾ ಮಾಸ್ಟರ್ಸ್ ತಂಡವು ಇಂಗ್ಲೆಂಡ್ ಮಾಸ್ಟರ್ಸ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಸೋಮವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡದ ನಾಯಕ ಕುಮಾರ್ ಸಂಗಾಕ್ಕರ ಅಮೋಘ ಶತಕ ಸಿಡಿಸುವ ಮೂಲಕ ಮತ್ತೊಮ್ಮೆ ಹಳೆಯ ವೈಭವದ ದಿನಗಳನ್ನು ಅಭಿಮಾನಿಗಳಿಗೆ ನೆನಪಿಸಿದರು.
ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗರು ಮತ್ತೊಮ್ಮೆ ತಮ್ಮ ದೇಶಕ್ಕಾಗಿ ಕಣಕ್ಕಿಳಿದಿದ್ದು, ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ, ಯುವರಾಜ್ ಸಿಂಗ್, ಕ್ರಿಸ್ ಗೇಲ್, ಶೇನ್ ವ್ಯಾಟ್ಸನ್, ಕುಮಾರ್ ಸಂಗಾಕ್ಕರ ಸೇರಿದಂತೆ ಹಲವು ದಿಗ್ಗಜ ಆಟಗಾರರು ಮತ್ತೊಮ್ಮೆ ಆಡುವುದನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ.

ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮಾಸ್ಟರ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮಾಸ್ಟರ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 146 ರನ್ ಕಲೆಹಾಕಿತು. ಮಸ್ಟರ್ಡ್ 50 ರನ್ ಗಳಿಸಿ ಇಂಗ್ಲೆಂಡ್‌ಗೆ ಆಸರೆಯಾದರೆ ಉಳಿದ ಆಟಗಾರರಿಂದ ದೊಡ್ಡ ಇನ್ನಿಂಗ್ಸ್ ಬರಲಿಲ್ಲ. ಇಸುರು ಉಡಾನ, ದಿಲ್‌ರುವಾನ್ ಪೆರೆರಾ, ಗುಣರತ್ನೆ, ಚತುರಂಗ ಮತ್ತು ಜೀವನ್ ಮೆಂಡಿಸ್ ತಲಾ ಒಂದು ವಿಕೆಟ್ ಪಡೆದರು.
ಕುಮಾರ್ ಸಂಗಾಕ್ಕರ ಶತಕ
147 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಮಾಸ್ಟರ್ಸ್ 12.5 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 150 ರನ್ ಗಳಿಸುವ ಮೂಲಕ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ನಾಯಕ ಕುಮಾರ್ ಸಂಗಾಕ್ಕರ ಕೇವಲ 47 ಎಸೆತಗಳಲ್ಲಿ 19 ಬೌಂಡರಿ 1 ಭರ್ಜರಿ ಸಿಕ್ಸರ್ ಸಹಿತ ಅಜೇಯ 106 ರನ್ ಗಳಿಸುವ ಮೂಲಕ ಶ್ರೀಲಂಕಾಗೆ ಭರ್ಜರಿ ಗೆಲುವು ತಂದುಕೊಟ್ಟರು. ರೊಮೆಶ್ ಕಲುವಿತರಣ 16 ರನ್ ಗಳಿಸಿದರೆ, ಅಸೆಲಾ ಗುಣರತ್ನೆ 12 ಎಸೆತಗಳಲ್ಲಿ ಅಜೇಯ 22 ರನ್ ಗಳಿಸಿದರು.
ಈ ಗೆಲುವಿನ ಮೂಲಕ ಶ್ರೀಲಂಕಾ ಆಡಿರುವ 5 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡು ಸೆಮಿಫೈನಲ್‌ಗೆ ಪ್ರವೇಶಿಸಿದೆ. ಇಂಡಿಯಾ ಮಾಸ್ಟರ್ಸ್ ಕೂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು ಸೆಮಿಫೈನಲ್ ಅವಕಾಶ ಪಡೆದುಕೊಂಡಿದೆ. ಉಳಿದ ಎರಡು ಸ್ಥಾನಕ್ಕಾಗಿ ಆಸ್ಟ್ರೇಲಿಯಾ ಮಾಸ್ಟರ್ಸ್, ವೆಸ್ಟ್ ಇಂಡೀಸ್ ಮಾಸ್ಟರ್ಸ್ ಮತ್ತು ಸೌತ್ ಆಫ್ರಿಕಾ ಮಾಸ್ಟರ್ಸ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.












Click it and Unblock the Notifications