RCB: ಆರ್‌ಸಿಬಿ ಅಭಿಮಾನಿಗಳನ್ನು ಕೊಂಡಾಡಿದ ಕೃನಾಲ್ ಪಾಂಡ್ಯ
2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್ ಸಿಬಿ ಕೃನಾಲ್ ಪಾಂಡ್ಯರನ್ನು 5.75 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತು. ಆಲ್‌ರೌಂಡರ್ ಆಗಿರುವ ಕೃನಾಲ್ ಪಾಂಡ್ಯ ಆರ್ ಸಿಬಿ ಫ್ರಾಂಚೈಸಿಯ ಉತ್ತಮ ಆಯ್ಕೆ ಎಂದೇ ಕ್ರಿಕೆಟ್ ಪಂಡಿತರು, ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವರ ಪ್ರದರ್ಶನ ತಂಡದ ಗೆಲುವಿಗೆ ಸಹಕಾರಿಯಾಗಲಿದೆ ಎನ್ನಲಾಗಿದೆ.
ಆರ್ ಸಿಬಿ ಈಗಾಗಲೇ ತರಬೇತಿ ಶಿಬಿರ ಆರಂಭಿಸಿದ್ದು ಕೃನಾಲ್ ಪಾಂಡ್ಯ ಕೂಡ ಹಾಜರಾಗಿದ್ದರು. ಬೆಂಗಳೂರಿನಲ್ಲೇ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ವಾರ್ಟರ್ ಫೈನಲ್, ಸೆಮಿಫೈನಲ್ ಪಂದ್ಯಗಳು ನಡೆದಿದ್ದು, ಬರೋಡಾ ತಂಡದ ನಾಯಕರಾಗಿದ್ದು ಕೃನಾಲ್ ಪಾಂಡ್ಯ ಆರ್ ಸಿಬಿ ಕ್ಯಾಂಪ್‌ನಲ್ಲಿ ಕಾಣಿಸಿಕೊಂಡರು.

ಈ ಸಂದರ್ಭದಲ್ಲಿ ಆರ್ ಸಿಬಿ ಸೇರಿದ ಬಗ್ಗೆ ತಮ್ಮ ಅಭಿಪ್ರಾಯ, ಅಭಿಮಾನಿಗಳ ಬಗ್ಗೆ ಕೂಡ ಮಾತನಾಡಿದ್ದಾರೆ. ಅದರಲ್ಲೂ ಆರ್ ಸಿಬಿ ಅಭಿಮಾನಿಗಳನ್ನು ಕೊಂಡಾಡಿದ್ದು, ಅವರಿಂದಲೇ ನನಗೆ ಆರ್ ಸಿಬಿ ಸೇರಿದ್ದು ಮೊದಲು ಗೊತ್ತಾಯಿತು ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ.
ಕೃನಾಲ್ ಪಾಂಡ್ಯ ಹೇಳಿದ್ದೇನು?
ಆರ್ ಸಿಬಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾತನಾಡಿರುವ ಕೃನಾಲ್ ಪಾಂಡ್ಯ, ಹರಾಜಿನ ಬಳಿಕ ನಾನು ಇಂದೋರ್‌ನಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ ಆಡುತ್ತಿದ್ದೆ. ನಾನು ಬೌಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಕ್ರೀಡಾಂಗಣದ ಒಂದು ಬದಿಯಲ್ಲಿ ಕೂತಿದ್ದ ಪ್ರೇಕ್ಷಕರು ಆರ್‌ಸಿಬಿ..ಆರ್‌ಸಿಬಿ ಎಂದು ಕೂಗುತ್ತಿದ್ದರು. ತಂಡಕ್ಕಿರುವ ಬೆಂಬಲ ಹೇಗಿದೆ ಎನ್ನುವುದಕ್ಕೆ ಅದೊಂದು ಉದಾಹರಣೆ ಎಂದಿದ್ದಾರೆ.
"ಆರ್ ಸಿಬಿ ಅಭಿಮಾನಿಗಳು ನೀಡುವ ಬೆಂಬಲ ಕ್ರೇಜಿಯಾಗಿರುತ್ತದೆ. ಆರ್ ಸಿಬಿ ಅಭಿಮಾನಿಗಳು ಎಷ್ಟಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಆರ್ ಸಿಬಿ ತವರಿನಲ್ಲಿ ಮಾತ್ರವಲ್ಲ ಹೊರಗಡೆ ಆಡುವಾಗ ಕೂಡ ಮೈದಾನದಲ್ಲಿ ಹೆಚ್ಚಿನ ಬೆಂಬಲ ಸಿಗುತ್ತದೆ. ಕೆಲವೇ ಫ್ರಾಂಚೈಸಿಗಳಿಗೆ ಮಾತ್ರ ಈ ರೀತಿ ಅಭಿಮಾನ ಸಿಗುತ್ತದೆ. ಆರ್ ಸಿಬಿ ಅಭಿಮಾನಿಗಳಂತೂ ಹೆಚ್ಚಿನ ನಿಷ್ಠಾವಂತರಾಗಿದ್ದಾರೆ" ಎಂದು ಹೇಳಿದ್ದಾರೆ.
ಆರ್ ಸಿಬಿ ಅಭಿಮಾನಿಗಳೇ, ನಾನು ಒಂದು ಮಾತು ಹೇಳಲು ಬಯಸುತ್ತೇನೆ, ಈ ತಂಡದ ಬೆನ್ನೆಲುಬು ನೀವೇ. ಅದೇ ತುಂಬಾ ವಿಶೇಷ ಮತ್ತು ಮ್ಯಾಜಿಕ್ ಸೃಷ್ಟಿಸುತ್ತದೆ. ಈ ವರ್ಷವೂ ನಿಮ್ಮ ಬೆಂಬಲ ಹೀಗೇ ಇರಲಿ, ನಾವು ನಿಮಗೆ ತುಂಬಾ ಸಂತೋಷ ನೀಡುತ್ತೇವೆ, ನನಗೆ ಟ್ರೋಫಿಗಳನ್ನು ಗೆಲ್ಲುವುದು ಇಷ್ಟ, ಆರ್ ಸಿಬಿಗಾಗಿ ಆಡುವುದು ನನಗೆ ಖುಷಿಯ ಸಂಗತಿ ಎಂದು ಹೇಳಿದ್ದಾರೆ.












Click it and Unblock the Notifications