ಜಂಜಾತೀಯ ಖೇಲ್ ಮಹೋತ್ಸವ; ಕೊಪ್ಪಳದ ಕ್ರೀಡಾಪಟುಗಳ ಸಾಧನೆ
ಕೊಪ್ಪಳ, ಜೂನ್ 16: ಒಡಿಶಾ ರಾಜ್ಯದ ಭುವನೇಶ್ವರ ಕ್ರೀಡಾಂಗಣದಲ್ಲಿ ಜೂನ್ 9 ರಿಂದ 12ರ ತನಕ 'ಜಂಜಾತೀಯ ಖೇಲ್ ಮಹೋತ್ಸವ-2023' ನಡೆಯಿತು. 26 ರಾಜ್ಯಗಳಿಂದ ಸುಮಾರು 5 ಸಾವಿರ ಕ್ರೀಡಾಪಟುಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಈ ಮಹೋತ್ಸವದಲ್ಲಿ ಮಹಿಳಾ ಹಾಗೂ ಪುರುಷರ ವಿಭಾಗದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕೊಪ್ಪಳ ಜಿಲ್ಲೆಯ ಕ್ರೀಡಾಪಟುಗಳು ಉತ್ತಮ ಸಾಧನೆ ತೋರಿದ್ದಾರೆ. ಪುರುಷರ ಮತ್ತು ಮಹಿಳೆಯರ ವಾಲಿಬಾಲ್ ಪಂದ್ಯಗಳಲ್ಲಿ ಪ್ರಥಮ ಸ್ಥಾನಗಳಿಸುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.

ಮಹಿಳೆಯರ ವಿಭಾಗದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳಾದ ಕೊಪ್ಪಳ ಜಿಲ್ಲೆಯ ತಿಗರಿ ಗ್ರಾಮದ ಅಂಜಲಿ ರಾಮಣ್ಣ ಕರಡಿ, ಹಿರೆಸಿಂದೋಗಿಯ ಇಂದುಮತಿ ಯಂಕಪ್ಪ ತಳವಾರ ಹಾಗೂ ಲಿಂಗನಬಂಡಿಯ ಶಿಲ್ಪಾ ದೇವಪ್ಪ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದರು.
ಪುರುಷರ ವಾಲಿಬಾಲ್ ಪಂದ್ಯದಲ್ಲಿ ಕರ್ನಾಟಕ ರಾಜ್ಯ ತಂಡ ಪ್ರತಿನಿಧಿಸಿದ ಕೊಪ್ಪಳ ಜಿಲ್ಲೆಯ ಹೊಸಜೂರಟಗಿ ಗ್ರಾಮದ ಶಿವಕುಮಾರ, ಹುಲಗಿಯ ಮಂಜುನಾಥ ಮತ್ತು ಅಶೋಕ ಅವರು ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಕೊಪ್ಪಳ ಜಿಲ್ಲೆ ಮತ್ತು ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ವಸತಿ ಶಾಲೆಯ ವಿದ್ಯಾರ್ಥಿಗಳು; ಈ ಕ್ರೀಡಾಪಟುಗಳು ವಸತಿ ಶಾಲೆಯ ವಿದ್ಯಾರ್ಥಿಗಳು ಎನ್ನುವುದು ವಿಶೇಷ. ಕೊಪ್ಪಳ ಜಿಲ್ಲಾ ಕ್ರೀಡಾ ವಸತಿ ಶಾಲೆಯಲ್ಲಿ ಇವರಿಗೆ ನುರಿತ ತರಬೇತುದಾರರಿಂದ ತರಬೇತಿ ಸಿಕ್ಕಿದ್ದು ಅದನ್ನು ಸಾಬೀತು ಮಾಡಿರುವುದು ಅಭಿನಂದನಾರ್ಹ ಸಂಗತಿಯಾಗಿದೆ.
ಕ್ರೀಡಾಪಟುಗಳ ಸಾಧನೆಗೆ ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ. ಗ್ರೇಸಿ ಹಾಗೂ ಕಚೇರಿಯ ಅಧೀಕ್ಷಕರಾದ ಹೆಚ್. ನಾಗರಾಜ ಅಭಿನಂದನೆ ಸಲ್ಲಿಸಿದ್ದಾರೆ. ಬಯಲು ಸೀಮೆಯ ಕೊಪ್ಪಳ ಜಿಲ್ಲೆಯು ಶೈಕ್ಷಣಿಕವಾಗಿ ದಿನೇದಿನೆ ಅಭಿವೃದ್ದಿ ಕಾಣುತ್ತಿದೆ. ಅಧ್ಯಯನದ ಜೊತೆಗೆ ಕೆಲವು ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಹ ಉತ್ತಮ ಸಾಧನೆ ತೋರಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಇಡೀ ಕೊಪ್ಪಳ ಜಿಲ್ಲೆಯ ಜನರು ಹೆಮ್ಮೆ ಪಡುವಂತಾಗಿದೆ ಎಂದು ಹೇಳಿದ್ದಾರೆ.
ಇಲಾಖೆಯಲ್ಲಿ ಎಲ್ಲ ತರಬೇತುದಾರರ ಬಗ್ಗೆ ಗೌರವ ಭಾವನೆ ಇದೆ. ಕ್ರೀಡಾ ಇಲಾಖೆಯ ಅಧಿಕಾರಿಗಳು, ಅಧೀಕ್ಷಕರು ಸೇರಿದಂತೆ ಕಮಲ್ ಸಿಂಗ್ ಬಿಶ್ಟ್, ತುಕಾರಾಮ ರಂಜಪಲ್ಲಿ, ಹನುಮೇಶ ಪೂಜಾರ ಇನ್ನಿತರರ ನೀಡುವ ಸಹಕಾರ ಸ್ಮರಣೀಯವಾಗಿದೆ. ಸಹ ತರಬೇತುದಾರರಾದ ಎ. ಎನ್. ಯತಿರಾಜು ಅವರ ಪ್ರೇರಣೆ ಹಾಗೂ ಇನ್ನೂ ಅನೇಕರ ಉತ್ತಮ ಸಲಹೆಗಳಿಂದಾಗಿ ವಿದ್ಯಾರ್ಥಿಗಳಿಗೆ ಉತ್ತಮವಾಗಿ ತರಬೇತಿ ಕೊಡಲು ಸಾಧ್ಯವಾಗುತ್ತಿದೆ.
ಕೊಪ್ಪಳ ಜಿಲ್ಲೆಯಲ್ಲಿ ಇಂತಹ ಕ್ರೀಡಾಸಕ್ತ ವಿದ್ಯಾರ್ಥಿಗಳ ಸಂಖ್ಯೆ ದೊಡ್ಡದಿದ್ದು ಅವರನ್ನು ಗುರುತಿಸಿ ತರಬೇತಿ ನೀಡುತ್ತೇವೆ ಎಂದು ವಾಲಿಬಾಲ್ ತರಬೇತುದಾರರಾದ ಸುರೇಶ ಯಾದವ ಹೇಳಿದ್ದಾರೆ.












Click it and Unblock the Notifications