
ಮಗಳು ಅಥಿಯಾ ಶೆಟ್ಟಿ ಕ್ರಿಕೆಟರ್ ರಾಹುಲ್ ಮದುವೆ ಬಗ್ಗೆ ಸುನಿಲ್ ಶೆಟ್ಟಿ ಹೇಳಿದ್ದೇನು ಗೊತ್ತಾ?
ಭಾರತ ಕ್ರಿಕೆಟ್ ತಂಡದ ಉಪನಾಯಕ ಕೆ.ಎಲ್. ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಇವರಿಬ್ಬರ ಮದುವೆ ಬಗ್ಗೆ ಹಲವು ತಿಂಗಳುಗಳಿಂದ ವಿವಿಧ ಸುದ್ದಿಗಳು ಕೇಳಿ ಬರುತ್ತಲೇ ಇದೆ, ಆದರೆ ಈಗ ಸ್ಟಾರ್ ಜೋಡಿಗಳ ಮದುವೆ ಬಗ್ಗೆ ಅಥಿಯಾ ಶೆಟ್ಟಿ ತಂದೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಮಾತನಾಡಿದ್ದಾರೆ.
ಮಗಳ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಥಿಯಾ ತಂದೆ ಸುನಿಲ್ ಶೆಟ್ಟಿ, ಇಬ್ಬರ ಮದುವೆಗೆ ಇನ್ನೂ ಸಾಕಷ್ಟು ಸಮಯವಿದೆ ಎಂದು ಹೇಳಿದ್ದಾರೆ. ಸುನಿಲ್ ಶೆಟ್ಟಿ ಪ್ರಕಾರ, ಕೆ.ಎಲ್.ರಾಹುಲ್ ಮುಂದಿನ ದಿನಗಳಲ್ಲಿ ಬಿಡುವಿಲ್ಲದ ಕ್ರಿಕೆಟ್ ವೇಳಾಪಟ್ಟಿಯನ್ನು ಹೊಂದಿದ್ದಾರೆ. ಸದ್ಯ ಅವರಿಗೆ ಮದುವೆಗೆ ಸಮಯವಿಲ್ಲ ಎಂದು ಹೇಳಿದ್ದಾರೆ.
ಜಿಂಬಾಬ್ವೆಯಲ್ಲಿ ದಾಖಲೆ ಬರೆದ ಕರ್ನಾಟಕದ ರಾಹುಲ್
"ಅಥಿಯಾ ಶೆಟ್ಟಿ ಇನ್ನೂ ಚಿಕ್ಕ ಹುಡುಗಿ ಎಂದು ಭಾವಿಸುತ್ತಾಳೆ, ಮದುವೆಗೆ ಇನ್ನೂ ಮಾನಸಿಕವಾಗಿ ಸಿದ್ಧವಾಗಬೇಕು. ರಾಹುಲ್ ಕ್ರಿಕೆಟ್‌ನಿಂದ ವಿರಾಮ ಪಡೆಯಬೇಕು. ಯಾವಾಗ ಮದುವೆಯಾಗಬೇಕು ಎನ್ನುವುದನ್ನು ಮಕ್ಕಳು ನಿರ್ಧರಿಸುತ್ತಾರೆ. ರಾಹುಲ್ ವೇಳಾಪಟ್ಟಿಯಲ್ಲಿ ಕೇವಲ 1-2 ದಿನಗಳ ವಿರಾಮವಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಮದುವೆಯಾಗಲು ಸಾಧ್ಯವಿಲ್ಲ, ಸಾಕಷ್ಟು ಸಮಯ ಇದ್ದಾಗ ಮದುವೆಗೆ ದಿನಾಂಕ ನಿಗದಿ ಮಾಡಲಾಗುತ್ತದೆ" ಎಂದು ಹೇಳಿದ್ದಾರೆ.

ಮಗಳ ಪ್ರೇಮ್ ಕಹಾನಿಗೆ ಅಪ್ಪನ ಒಪ್ಪಿಗೆ
ಅಥಿಯಾ ಶೆಟ್ಟಿ ಮತ್ತು ಕೆ.ಎಲ್ ರಾಹುಲ್ ಕಳೆದ ವರ್ಷ ಅಹಾನ್ ಶೆಟ್ಟಿ ಅವರ ಮೊದಲ ಚಿತ್ರ ತಡಪ್ ಬಿಡುಗಡೆ ಸಮಾರಂಭದಲ್ಲಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಕೆ.ಎಲ್ ರಾಹುಲ್ ಆಡುವ ಕ್ರಿಕೆಟ್ ಪಂದ್ಯಗಳಲ್ಲಿ ಸುನಿಲ್ ಶೆಟ್ಟಿ ಕೂಡ ಕಾಣಿಸಿಕೊಳ್ಳುವ ಮೂಲಕ ಮಗಳ ಪ್ರೇಮ್ ಕಹಾನಿಗೆ ಒಪ್ಪಿಗೆ ನೀಡಿದ್ದರು.
ಆಗಾಗ್ಗೆ, ಇವರಿಬ್ಬರ ಮದುವೆ ವಿಚಾರ ಮುನ್ನಲೆಗೆ ಬರುತ್ತಲೇ ಇರುತ್ತದೆ. ಇದೇ ವರ್ಷ ಇಬ್ಬರು ಮದುವೆಯಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಈ ವರ್ಷ ಇವರಿಬ್ಬರ ಮದುವೆ ಬಹುತೇಕ ಅನುಮಾನ ಎಂದೇ ಹೇಳಲಾಗಿದೆ.

ರಾಹುಲ್‌ಗೆ ಬಿಡುವಿರದ ವೇಳಾಪಟ್ಟಿ
ತೊಡೆಸಂದು ಗಾಯದಿಂದ ಚೇತರಿಸಿಕೊಂಡಿರುವ ಕೆ.ಎಲ್. ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆ. ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ನಾಯಕತ್ವ ವಹಿಸಿದ್ದರು. ಆಗಸ್ಟ್ 27ರಿಂದ ಆರಂಭವಾಗಲಿರುವ, ಏಷ್ಯಾಕಪ್‌ಗಾಗಿ ತಯಾರಿ ನಡೆಸುತ್ತಿದ್ದಾರೆ.
ಏಷ್ಯಾಕಪ್ ಮುಗಿದ ನಂತರ, ಭಾರತ ತಂಡ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ ತಯಾರಿ ನಡೆಸಲಿದೆ. ಬಿಡುವಿರದ ವೇಳಾಪಟ್ಟಿಯಲ್ಲಿ ಭಾರತ ಕ್ರಿಕೆಟ್ ಆಡುವುದರಿಂದ, ರಾಹುಲ್ ಮದುವೆಗೆ ಸಮಯ ಸಿಗುವುದು ಕಷ್ಟ ಎನ್ನಲಾಗಿದೆ.

ಐಷಾರಾಮಿ ಅಪಾರ್ಟ್‌ಮೆಂಟ್ ಗೃಹಪ್ರವೇಶ
ಮುಂಬೈನ ಕಾರ್ಟರ್ ರಸ್ತೆಯಲ್ಲಿ ಸಮುದ್ರಾಭಿಮುಖವಾದ ಮನೆಯನ್ನು ಬಾಡಿಗೆಗೆ ಪಡೆದಿದ್ದಾರೆ. ಐಷಾರಾಮಿ ಬಾಂದ್ರಾ ಪ್ರದೇಶದಲ್ಲಿ 4 ಬೆಡ್‌ರೂಂ ಅಪಾರ್ಟ್‌ಮೆಂಟ್ ಬಾಡಿಗೆ ಪಡೆದಿದ್ದು, ಇಬ್ಬರ ಅಭಿರುಚಿಗೆ ತಕ್ಕಂತೆ ಒಳಾಂಗಣ ವಿನ್ಯಾಸ ಮಾಡಿಸಲಾಗಿದೆ.
ಅಥಿಯಾ ಪೋಷಕರಾರ ಸುನಿಲ್ ಶೆಟ್ಟಿ ಮತ್ತು ಮನ ಶಟ್ಟಿ ಕಳೆದ ತಿಂಗಳು ಆತ್ಮೀಯರ ಸಮ್ಮುಖದಲ್ಲಿ ನೂತನ ಅಪಾರ್ಟ್‌ಮೆಂಟ್‌ನ ಗೃಹಪ್ರವೇಶ ಕಾರ್ಯಕ್ರಮ ಮುಗಿಸಿದ್ದಾರೆ. ಈ ವೇಳೆ ಕೆ.ಎಲ್. ರಾಹುಲ್ ಜಿಂಬಾಬ್ವೆ ಪ್ರವಾಸಕ್ಕೆ ತೆರಳಿದ್ದರು.

ಮೂರು ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ಜೋಡಿ
ಕಳೆದ ಮೂರು ವರ್ಷಗಳಿಂದ ರಾಹುಲ್ ಮತ್ತು ಅಥಿಯಾ ಶೆಟ್ಟಿ ಪ್ರೀತಿಸುತ್ತಿದ್ದಾರೆ. ಅಥಿಯಾ ತಂದೆ ಸುನಿಲ್ ಶೆಟ್ಟಿ ಮೂಲತಃ ಮಂಗಳೂರಿನವರು, ಇನ್ನು ಕೆ.ಎಲ್.ರಾಹುಲ್ ಕೂಡ ಮಂಗಳೂರಿನವರು ಎನ್ನುವುದು ವಿಶೇಷ.
ಮಗಳ ಪ್ರೇಮಕ್ಕೆ ಸುನಿಲ್ ಶೆಟ್ಟಿ ಒಪ್ಪಿಗೆ ನೀಡಿದ್ದು, ಮದುವೆಯನ್ನು ನಿರ್ಧರಿಸುವ ಜವಾಬ್ದಾರಿಯನ್ನು ಅವರಿಗೆ ಬಿಟ್ಟಿದ್ದಾರೆ. ಇಬ್ಬರು ಯಾವಾಗ ಮದುವೆಯಾಗುತ್ತಾರೋ ಅದು ಅವರ ನಿರ್ಧಾರ ಅವರಿಗೆ ನನ್ನ ಆಶಿರ್ವಾದ ಯಾವಾಗಲೂ ಇರುತ್ತದೆ ಎಂದು ಸುನಿಲ್ ಶೆಟ್ಟಿ ಹೇಳಿದ್ದಾರೆ.