Asia Cup 2023: ಪಾಕಿಸ್ತಾನ ವಿರುದ್ಧದ ಪಂದ್ಯದಿಂದ ಹೊರಗುಳಿಯಲಿರುವ ಭಾರತದ ಪ್ರಮುಖ ಆಟಗಾರ !
2023ರ ಏಷ್ಯಾಕಪ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಆಗಸ್ಟ್ 30ರಂದು ಪಂದ್ಯಾವಳಿಗೆ ಚಾಲನೆ ಸಿಗಲಿದ್ದು, ಮೊದಲನೇ ಪಂದ್ಯದಲ್ಲಿ ಪಾಕಿಸ್ತಾನ - ನೇಪಾಳ ಮುಖಾಮುಖಿಯಾಗಲಿವೆ. ಬಿಸಿಸಿಐ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಿದ್ದು ಪ್ರಮುಖ ಆಟಗಾರರು ತಂಡಕ್ಕೆ ಮರಳಿದ್ದಾರೆ.
ಸೆಪ್ಟಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ಭಾರತ-ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯ ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿದ್ದು, ಭಾರತ ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ. ಪಾಕಿಸ್ತಾನ ಕೂಡ ಬಲಿಷ್ಠ ತಂಡವನ್ನು ಹೊಂದಿದ್ದು, ರೋಚಕ ಹಣಾಹಣಿಯನ್ನು ನಿರೀಕ್ಷೆ ಮಾಡಲಾಗಿದೆ.

ಪಂದ್ಯದ ದಿನಾಂಕ ಇನ್ನೂ ದೂರವಿದ್ದರೂ, ಪಾಕ್ ವಿರುದ್ಧದ ಪಂದ್ಯಕ್ಕೆ ಭಾರತದ ಆಡುವ ಬಳಗ ಹೇಗಿರಬೇಕು ಎನ್ನುವ ಲೆಕ್ಕಾಚಾರ ಶುರುವಾಗಿದೆ. ಪಾಕಿಸ್ತಾನ ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿದ್ದು ಅದನ್ನು ಸಮರ್ಥವಾಗಿ ಎದುರಿಸಲು ಅನುಭವಿ ಬ್ಯಾಟರ್ ಗಳು ಕಣಕ್ಕಿಳಿಯಬೇಕು, ಒತ್ತಡದಲ್ಲಿ ಕೂಡ ಉತ್ತಮ ಪ್ರದರ್ಶನ ನೀಡುವಂತಿರಬೇಕು ಎನ್ನುವ ಲೆಕ್ಕಾಚಾರ ಮಾಡುತ್ತಿದ್ದಾರೆ ಅಭಿಮಾನಿಗಳು.
ಪ್ರಮುಖ ಆಟಗಾರ ಹೊರಕ್ಕೆ
2023ರ ಐಪಿಎಲ್ ಪಂದ್ಯದ ವೇಳೆ ಗಾಯಗೊಂಡಿದ್ದ ಕೆಎಲ್ ರಾಹುಲ್ ಏಷ್ಯಾಕಪ್‌ಗಾಗಿ ತಂಡಕ್ಕೆ ಮರಳಿದ್ದಾರೆ. ತಂಡದಲ್ಲಿ ಇದ್ದರೂ ಅವರು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಹೊರಗುಳಿಯುವುದು ಖಚಿತವಾಗಿದೆ. ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ಖಚಿತಪಡಿಸಿದ್ದಾರೆ.
ನಾಲ್ಕು ತಿಂಗಳ ಕಾಲ ರಾಹುಲ್ ಆಟದಿಂದ ಹೊರಗುಳಿದಿದ್ದರು ಆದರೆ ಭಾರತ ಕ್ರಿಕೆಟ್ ತಂಡಕ್ಕೆ ಮರಳಲು ಅನುಮತಿ ಪಡೆದಿದ್ದಾರೆ. 30 ವರ್ಷದ ಆಟಗಾರ ಏಷ್ಯಾಕಪ್‌ನ 2 ಅಥವಾ 3ನೇ ಪಂದ್ಯಕ್ಕೆ ಮರಳುವ ನಿರೀಕ್ಷೆಯಿದೆ. ಮುನ್ನೆಚ್ಚರಿಕೆಯಾಗಿ, ಸಂಜು ಸ್ಯಾಮ್ಸನ್ ಅವರನ್ನು ಮೀಸಲು ಆಟಗಾರನನ್ನಾಗಿ ಆಯ್ಕೆ ಮಾಡಲಾಗಿದೆ.
ಶ್ರೇಯಸ್ ಅಯ್ಯರ್ ಸಂಪೂರ್ಣ ಫಿಟ್ ಎಂದು ಘೋಷಿಸಲಾಗಿದೆ. ಇದು ದೊಡ್ಡ ಸುದ್ದಿಯಾಗಿದೆ. ಕೆಎಲ್ ರಾಹುಲ್ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಏಷ್ಯಾ ಕಪ್‌ನ ಎರಡನೇ ಅಥವಾ ಮೂರನೇ ಪಂದ್ಯದ ವೇಳೆಗೆ ಅವರು ಫಿಟ್ ಆಗುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ. ಇವರಿಬ್ಬರು ನಮಗೆ ಅತ್ಯಂತ ಪ್ರಮುಖ ಆಟಗಾರರು ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ.
ತೊಡೆಸಂದು ಗಾಯದಿಂದ ಬಳಲುತ್ತಿದ್ದ ರಾಹುಲ್ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಐಪಿಎಲ್ 2023 ರ ಐಪಿಎಲ್‌ನ ಹಲವು ಪಂದ್ಯಗಳನ್ನು ಕಳೆದುಕೊಂಡರು. ಅಂದಿನಿಂದ ಅವರು ಬೆಂಗಳೂರಿನ ಎನ್‌ಸಿಎಯಲ್ಲಿ ಪುನರ್ವಸತಿ ಪಡೆದರು. ಅಭ್ಯಾಸ ಪಂದ್ಯದಲ್ಲಿ ಆಡಿರುವ ಅವರು ಆದಷ್ಟು ಬೇಗನೆ ಮೈದಾನಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.
ಏಷ್ಯಾಕಪ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ. ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).












Click it and Unblock the Notifications