CSK vs KKR: ಸೋಲಿನಲ್ಲೂ ಕೆಟ್ಟ ದಾಖಲೆ ಬರೆದ ಚೆನ್ನೈ ಸೂಪರ್ ಕಿಂಗ್ಸ್
ಚೆನ್ನೈ ಎಂಎ ಚಿದಂಬಂರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹೀನಾಯ ಸೋಲು ಕಂಡಿದೆ. ಕೋಲ್ಕತಾ ನೈಟ್ ರೈಡರ್ಸ್ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ್ದು ಗೆಲುವಿನ ಹಾದಿಗೆ ಮರಳಿದೆ. ಸಿಎಸ್‌ಕೆ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸತತವಾಗಿ 5 ಪಂದ್ಯಗಳನ್ನು ಸೋತ ದಾಖಲೆ ಮಾಡಿದೆ.
ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 103 ರನ್ ಮಾತ್ರ ಕಲೆಹಾಕಿತು. ಚೆನ್ನೈನಲ್ಲಿ ಸಿಎಸ್‌ಕೆ ಗಳಿಸಿದ ಅತ್ಯಂತ ಕಡಿಮೆ ಮೊತ್ತ ಇದಾಗಿದೆ. ಶಿವಂ ದುಬೆ ಅಜೇಯ 31 ರನ್ ಗಳಿಸಿದರೆ, ವಿಜಯ್ ಶಂಕರ್ 29 ರನ್ ಗಳಿಸಿದರು. ಉಳಿದ ಯಾವ ಬ್ಯಾಟರ್ ಗಳು ಕೂಡ ಜಾಸ್ತಿ ಹೊತ್ತು ನಿಲ್ಲಲಿಲ್ಲ.

ಸುನಿಲ್ ನರೈನ್ ಮಾರಕ ಬೌಲಿಂಗ್ ಮಾಡಿದರು. 4 ಓವರ್ ಗಳಲ್ಲಿ 13 ರನ್ ಮಾತ್ರ ಬಿಟ್ಟುಕೊಟ್ಟು 3 ವಿಕೆಟ್ ಪಡೆದರು. ವರುಣ್ ಚಕ್ರವರ್ತಿ ಮತ್ತು ಹರ್ಷಿತ್ ರಾಣಾ ತಲಾ 2 ವಿಕೆಟ್ ಪಡೆದರು. ವೈಭವ್ ಅರೋರಾ ಮತ್ತು ಮೋಯಿನ್ ಅಲಿ ತಲಾ 1 ವಿಕೆಟ್ ಪಡೆದರು.
ಭರ್ಜರಿ ಗೆಲುವು ಪಡೆದ ಕೆಕೆಆರ್
104 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ಸಿಎಸ್‌ಕೆ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು. ಕ್ವಿಂಟನ್ ಡಿ ಕಾಕ್ 16 ಎಸೆತಗಳಲ್ಲಿ 23 ರನ್ ಗಳಿಸಿದರೆ, ಸುನಿಲ್ ನರೈನ್ 18 ಎಸೆತಗಳಲ್ಲಿ 44 ರನ್ ಗಳಿಸಿದರು. ಅಜಿಂಕ್ಯ ರಹಾನೆ ಅಜೇಯ 20 ರನ್ ಗಳಿಸಿದರೆ, ರಿಂಕು ಸಿಂಗ್ ಅಜೇಯ 15 ರನ್ ಗಳಿಸಿದರು. ಈ ಗೆಲುವಿನ ಮೂಲಕ ರನ್‌ರೇಟ್‌ನಲ್ಲಿ ಭಾರಿ ಸುಧಾರಣೆಯಾಗಿದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ. ಆರ್ ಸಿಬಿ ಇದೀಗ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.
ಸಿಎಸ್‌ಕೆ ಐಪಿಎಲ್ ಇತಿಹಾಸದಲ್ಲೇ ಇದು ಹೀನಾಯ ಸೋಲಾಗಿದೆ. ಕೆಕೆಆರ್ ಇನ್ನೂ 59 ಬಾಲ್‌ಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಿ ದಾಖಲೆ ಬರೆದಿದೆ. ಸಿಎಸ್‌ಕೆ ಮೊದಲ ಬಾರಿಗೆ ಸತತ ಐದು ಸೋಲುಗಳನ್ನು ಕಂಡಿದೆ. ತವರಿನಲ್ಲಿ ಇದೇ ಮೊದಲ ಬಾರಿಗೆ ಹ್ಯಾಟ್ರಿಕ್ ಪಂದ್ಯಗಳನ್ನು ಸೋತ ಕೆಟ್ಟ ದಾಖಲೆ ಮಾಡಿದೆ.
ಎಂಎಸ್ ಧೋನಿ ನಾಯಕನಾಗಿ ವಾಪಸಾತಿ ಮಾಡಿದರೂ ತಂಡವನ್ನು ಗೆಲುವಿನ ಕಡೆಗೆ ಮುನ್ನಡೆಸಲು ಆಗಲಿಲ್ಲ. ತಂಡದ ಆಟಗಾರರು ಆಡಿದ ರೀತಿಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಲು ಗೆಲುವು ಮುಖ್ಯವಲ್ಲ, ಆದರೆ ಇವರು ಗೆಲ್ಲಬೇಕು ಎನ್ನುವ ಉದ್ದೇಶವೇ ಇಲ್ಲದಂತೆ ಆಡುತ್ತಿದ್ದಾರೆ ಎಂದಿದ್ದಾರೆ.












Click it and Unblock the Notifications