KKR vs LSG: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮೊದಲ ಬಾರಿ ಗೆದ್ದ ಕೆಕೆಆರ್
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್‌ಜಿ) ವಿರುದ್ಧ ಮೊದಲ ಗೆಲುವು ದಾಖಲಿಸಿದೆ. ಕೋಲ್ಕತ್ತಾದ ಈಡನ್ ಗಾರ್ಡರ್ನ್ಸ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದ ಕೆಕೆಆರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 161 ರನ್ ಗಳಿಸಿತು.

ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಕ್ವಿಂಟನ್ ಡಿ ಕಾಕ್ 8 ಎಸೆತಗಳಲ್ಲಿ ಕೇವಲ 10 ರನ್ ಗಳಿಸಿ ಔಟಾದರು. ದೀಪಕ್ ಹೂಡಾ ಕೂಡ 8 ರನ್ ಗಳಿಸಿ ಔಟಾದರು. ನಾಯಕ ಕೆಎಲ್ ರಾಹುಲ್ 27 ಎಸೆತಗಳಲ್ಲಿ 39 ರನ್ ಗಳಿಸಿದರೂ, ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾದರು.
ಆಯುಷ್ ಬದೋನಿ 29 ರನ್, ನಿಕೋಲಸ್ ಪೂರನ್ 45 ರನ್ ಗಳಿಸುವ ಮೂಲಕ ಎಲ್‌ಎಸ್‌ಜಿ ತಂಡ 161 ರನ್ ಗಳಿಸಲು ನೆರವಾದರು. ಮಿಚೆಲ್ ಸ್ಟಾರ್ಕ್ 4 ಓವರ್ ಗಳಲ್ಲಿ 28 ರನ್ ನೀಡಿ 3 ವಿಕೆಟ್ ಪಡೆದುಕೊಂಡರು. ವೈಭವ್ ಅರೋರಾ, ಹರ್ಷಿತ್ ರಾಣಾ, ಸುನಿಲ್ ನರೇನ್, ಚಕ್ರವರ್ತಿ ಮತ್ತು ಆಂಡ್ರೆ ರಸೆಲ್ ತಲಾ ಒಂದು ವಿಕೆಟ್ ಪಡೆದರು.
ಫಿಲ್ ಸಾಲ್ಟ್ ಅಬ್ಬರಕ್ಕೆ ಶರಣಾದ ಎಲ್‌ಎಸ್‌ಜಿ
ಈ ಸವಾಲಿನ ಗುರಿಯನ್ನು ಬೆನ್ನತ್ತಿದ ಕೆಕೆಆರ್ ಆರಂಭದಲ್ಲೇ ಸುನಿಲ್ ನರೇನ್ ಅವರ ವಿಕೆಟ್ ಕಳೆದುಕೊಂಡಿತು. ನರೇನ್ 6 ರನ್ ಗಳಿಸಿ ಔಟಾದರೆ, ಆಂಗ್ಕ್ರಿಶ್ ರಘುವಂಶಿ 7 ರನ್ ಗಳಿಸಿ ಔಟಾದರು. ಬಳಿಕ ಬಂದ ಶ್ರೇಯಸ್ ಅಯ್ಯರ್ 38 ಎಸೆತಗಳಲ್ಲಿ ಅಜೇಯ 38 ರನ್ ಗಳಿಸುವ ಮೂಲಕ ಫಿಲ್ ಸಾಲ್ಟ್ ಅವರಿಗೆ ಸಾಥ್ ಕೊಟ್ಟರು.
ಫಿಲ್ ಸಾಲ್ಟ್ 47 ಎಸೆತಗಳಲ್ಲಿ 14 ಬೌಂಡರಿ 3 ಭರ್ಜರಿ ಸಿಕ್ಸರ್ ನೆರವಿನಿಂದ ಅಜೇಯ 89 ರನ್ ಗಳಿಸಿದರು. ಕೆಕೆಆರ್ 15.4 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಇದು ಐಪಿಎಲ್ ಇತಿಹಾಸದಲ್ಲಿ ಕೆಕೆಆರ್ ಮೊದಲ ಬಾರಿಗೆ ಎಲ್‌ಎಸ್‌ಜಿ ವಿರುದ್ಧ ಗೆಲುವಾಗಿದೆ. ಕೆಕೆಆರ್ ಇದುವರೆಗೂ ಆಡಿರುವ 5 ಪಂದ್ಯಗಳಲ್ಲಿ 4 ರಲ್ಲಿ ಗೆದ್ದು 8 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ.












Click it and Unblock the Notifications