Karun Nair: ಕರ್ನಾಟಕ ತೊರೆದ ಕರುಣ್ ನಾಯರ್: ಈ ರಾಜ್ಯ ತಂಡಕ್ಕೆ ಸೇರ್ಪಡೆ
ಕರ್ನಾಟಕ ಕ್ರಿಕೆಟ್ ತಂಡದ ಪ್ರಮುಖ ಆಟಗಾರ, ಅತ್ಯುತ್ತಮ ಬ್ಯಾಟರ್ ಕರುಣ್ ನಾಯರ್ ಈಗ ರಾಜ್ಯ ತಂಡವನ್ನು ತೊರೆದಿದ್ದಾರೆ. ಈ ಮೊದಲೇ ಅವರು ಕರ್ನಾಟಕ ತಂಡವನ್ನು ತೊರೆಯುತ್ತಾರೆ ಎನ್ನುವ ಸುದ್ದಿ ಇತ್ತಾದರೂ, ಇಂದು ಈ ವಿಚಾರವನ್ನು ಅವರೇ ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ.
ತಕ್ಷಣದಿಂದ ಅವರು ರಾಜ್ಯ ಕ್ರಿಕೆಟ್ ತಂಡವನ್ನು ತೊರೆಯುತ್ತಿದ್ದು, 2023-24 ರ ಸಾಲಿನ ದೇಶೀಯ ಕ್ರಿಕೆಟ್‌ನಲ್ಲಿ ವಿದರ್ಭ ತಂಡಕ್ಕಾಗಿ ಆಡಲಿದ್ದಾರೆ. ಭಾನುವಾರ ಈ ಕುರಿತು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಕರ್ನಾಟಕ ತಂಡದಲ್ಲಿ ದಶಕಗಳ ಆಟ
2013ರಲ್ಲಿ ಕರುಣ್ ನಾಯರ್ ಕರ್ನಾಟಕ ತಂಡವನ್ನು ಸೇರಿಕೊಳ್ಳುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈವರೆಗೆ ರಾಜ್ಯ ತಂಡಕ್ಕಾಗಿ 11 ಶತಕ ಮತ್ತು 16 ಶತಕಗಳನ್ನು ಗಳಿಸಿದ್ದಾರೆ. ಪ್ರಥಮ ದರ್ಜೆ ಪಂದ್ಯಗಳಲ್ಲಿ 87 ಇನ್ನಿಂಗ್ಸ್‌ಗಳನ್ನು ಆಡಿರುವ ಅವರು 3779 ರನ್ ಗಳಿಸಿದ್ದಾರೆ.
ಕರ್ನಾಟಕ ತಂಡ ತನ್ನ ಕೊನೆಯ ಎರಡು ರಣಜಿ ಟ್ರೋಫಿ ಗೆದ್ದ ತಂಡದಲ್ಲಿ ಕರುಣ್ ನಾಯರ್ ಪ್ರಮುಖ ಪಾತ್ರ ವಹಿಸಿದ್ದರು. 2014-15 ರ ಫೈನಲ್‌ನಲ್ಲಿ ತಮಿಳುನಾಡು ತಂಡದ ವಿರುದ್ಧ ದಾಖಲೆಯ 328 ರನ್ ಗಳಿಸಿ ರಾಜ್ಯದ ಗೆಲುವಿಗೆ ಕಾರಣವಾಗಿದ್ದರು.
ಇನ್ನು ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾದ ಅವರು 2016ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ವಿರೇಂದ್ರ ಸೆಹ್ವಾಗ್ ನಂತರ ತಮ್ಮ ವೃತ್ತಿಜೀವನದ ಮೂರನೇ ಪಂದ್ಯದಲ್ಲಿ ತ್ರಿಶತಕ ಸಿಡಿಸಿದ ಎರಡನೇ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಅಜೇಯ 303 ರನ್ ಗಳಿಸಿದರು. ಕರುಣ್ ನಾಯರ್ ಅವರು ಭಾರತದ 2017 ರ ಬಾರ್ಡರ್-ಗವಾಸ್ಕರ್ ಟ್ರೋಫಿ ತಂಡದ ಭಾಗವಾಗಿದ್ದರು. ಧರ್ಮಶಾಲಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅವರು ಕೊನೆಯ ಟೆಸ್ಟ್ ಪಂದ್ಯವ್ನನು ಆಡಿದರು. 2022 ರಲ್ಲಿ ಕೊನೆಯದಾಗಿ ಕರ್ನಾಟಕಕ್ಕಾಗಿ ಪ್ರಥಮದರ್ಜೆ ಪಂದ್ಯದಲ್ಲಿ ಕಾಣಿಸಿಕೊಂಡರು ಮತ್ತು 2021 ರಿಂದ ದೇಶೀಯ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಆಡಿಲ್ಲ.
ಎಲ್ಲರಿಗೂ ಧನ್ಯವಾದ ತಿಳಿಸಿದ ನಾಯರ್
ಇನ್‌ಸ್ಟಾಗ್ರಾಮ್ ಮೂಲಕ ವಿದರ್ಭ ಕ್ರಿಕೆಟ್ ಅಸೋಸಿಯೇಷನ್‌ಗೆ (ವಿಸಿಎ) ಸೇರುವ ನಿರ್ಧಾರವನ್ನು ನಾಯರ್ ತಿಳಿಸಿದ್ದಾರೆ. ಈ ಬಗ್ಗೆ ಸುದೀರ್ಘ ಟಿಪ್ಪಣಿ ಬರೆದಿದ್ದು, ರಾಜ್ಯ ಕ್ರಿಕೆಟಿಗರಿಗೆ, ಕೆಎಸ್‌ಸಿಎ ಗೆ ಧನ್ಯವಾದ ಅರ್ಪಿಸಿದ್ದಾರೆ.
"ಕಳೆದ ಎರಡು ದಶಕಗಳಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ನೊಂದಿಗೆ ನಾನು ಮಾಡಿದ ಅದ್ಭುತ ಪ್ರಯಾಣಕ್ಕಾಗಿ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ನನ್ನ ಕ್ರಿಕೆಟ್ ವೃತ್ತಿಜೀವನದ ಆರಂಭದಿಂದಲೂ, ಕೆಎಸ್‌ಸಿಎ ಮಾರ್ಗದರ್ಶಿ ಬೆಳಕಾಗಿದ್ದು, ಅಚಲವಾದ ಬೆಂಬಲವನ್ನು ನೀಡುತ್ತಿದೆ, ಅದು ನನ್ನನ್ನು ಆಟಗಾರನನ್ನಾಗಿ ರೂಪಿಸಲು ಸಹಾಯ ಮಾಡಿತು.
ನನ್ನ ತರಬೇತುದಾರರು, ನಾಯಕರು ಮತ್ತು ಸಹ ಆಟಗಾರರಿಗೆ ವಿಶೇಷ ಧನ್ಯವಾದಗಳು, ನಾನು ನಿಮ್ಮ ಜೊತೆಯಲ್ಲಿ ಆಡುವ ಅವಕಾಶ ಪಡೆದಿದ್ದೇನೆ. ನಿಮ್ಮ ನಾಯಕತ್ವ, ಮಾರ್ಗದರ್ಶನ, ಬೆಂಬಲ ಮತ್ತು ನನ್ನ ಮೇಲಿನ ನಂಬಿಕೆ ಕ್ರಿಕೆಟಿಗನಾಗಿ ನನ್ನ ಬೆಳವಣಿಗೆಗೆ ಸಹಕಾರಿಯಾಗಿದೆ.
ನಾನು ವಿದರ್ಭ ಕ್ರಿಕೆಟ್ ಅಸೋಸಿಯೇಷನ್‌ನೊಂದಿಗೆ ಹೊಸ ಅಧ್ಯಾಯವನ್ನು ಪ್ರಾರಂಭಿಸಲಿದ್ದೇನೆ. ಕೆಎಸ್‌ಸಿಎ ಜೊತೆಗಿನ ಸಮಯದಲ್ಲಿ ನಾನು ಗಳಿಸಿದ ಪಾಲಿಸಬೇಕಾದ ನೆನಪುಗಳು, ಸ್ನೇಹ ಮತ್ತು ಕೌಶಲ್ಯಗಳನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ. ನನ್ನ ಕ್ರಿಕೆಟ್ ಪಯಣದ ಅವಿಭಾಜ್ಯ ಅಂಗವಾಗಿದ್ದಕ್ಕಾಗಿ ಧನ್ಯವಾದಗಳು. ಈಗ ಮುಂದಿನ ರೋಚಕ ಸಾಹಸಕ್ಕೆ!" ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.












Click it and Unblock the Notifications