Vijay Hazare Trophy: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 402 ರನ್ ಕಲೆಹಾಕಿದ ಕರ್ನಾಟಕ
ವಿಜಯ್ ಹಜಾರೆ ಟ್ರೋಫಿಯ ಮೊದಲ ಪಂದ್ಯದಲ್ಲೇ ಕರ್ನಾಟಕ ಅಬ್ಬರಿಸಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಬಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ಜಮ್ಮು ಮತ್ತು ಕಾಶ್ಮೀರದ ವಿರುದ್ಧ 222 ರನ್‌ಗಳ ಬೃಹತ್ ಗೆಲುವು ಸಾಧಿಸಿದೆ.
ವಿಜಯ್ ಹಜಾರೆ ಟ್ರೋಫಿಯ ಸಿ ಗುಂಪಿನ ಮೊದಲ ಸುತ್ತಿನ ಮೊದಲ ಪಂದ್ಯದಲ್ಲಿ ಕರ್ನಾಟಕ ರನ್ ಹೊಳೆ ಹರಿಸಿತು. ಟಾಸ್ ಗೆದ್ದ ಕರ್ನಾಟಕ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕರಾದ ರವಿಕುಮಾರ್ ಸಮರ್ಥ್ ಮತ್ತು ನಾಯಕ ಮಯಾಂಕ್ ಅಗರ್ವಾಲ್ ಭರ್ಜರಿ ಶತಕ ಗಳಿಸುವ ಮೂಲಕ ಅತ್ಯುತ್ತಮ ಆರಂಭ ಒದಗಿಸಿದರು.

ಮೊದಲ ವಿಕೆಟ್‌ಗೆ ಈ ಜೋಡಿ 267 ರನ್‌ಗಳನ್ನು ಕಲೆಹಾಕಿತು. ರವಿಕುಮಾರ್ ಸಮರ್ಥ್ 120 ಎಸೆತಗಳಲ್ಲಿ 11 ಬೌಂಡರಿ 2 ಭರ್ಜರಿ ಸಿಕ್ಸರ್ ಸಹಿತ 123 ರನ್ ಗಳಿಸಿದರು. ಮಯಾಂಕ್ ಅಗರ್ವಾಲ್ 133 ಎಸೆತಗಳಲ್ಲಿ 11 ಬೌಂಡರಿ 8 ಸಿಕ್ಸರ್ ಸಹಿತ 157 ರನ್ ಗಳಿಸಿ ಮಿಂಚಿದರು.
ನಂತರ ಬಂದ ದೇವದತ್ ಪಡಿಕ್ಕಲ್ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೇವಲ 35 ಎಸೆತಗಳಲ್ಲಿ 4 ಬೌಂಡರಿ 5 ಸಿಕ್ಸರ್ ಸಹಿತ ಅಜೇಯ 71 ರನ್ ಗಳಿಸಿ ಮಿಂಚಿದರು. ಮನೀಶ್ ಪಾಂಡೆ 14 ಎಸೆತಗಳಲ್ಲಿ ಅಜೇಯ 23 ರನ್ ಗಳಿಸಿದರು. ಅಂತಿಮವಾಗಿ ಕರ್ನಾಟಕ 50 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 402 ರನ್ ಗಳಿಸಿತು.
ಕರ್ನಾಟಕ ದಾಳಿಗೆ ತತ್ತರಿಸಿದ ಜಮ್ಮು ಮತ್ತು ಕಾಶ್ಮೀರ
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಜಮ್ಮು ಮತ್ತು ಕಾಶ್ಮೀರ ತಂಡ ಕರ್ನಾಟಕದ ಬಿಗಿ ಬೌಲಿಂಗ್ ದಾಳಿಗೆ ತತ್ತರಿಸಿತು. 30.4 ಓವರ್ ಗಳಲ್ಲಿ 180 ರನ್‌ಗಳಿಗೆ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಆಲೌಟ್ ಮಾಡುವ ಮೂಲಕ 222 ರನ್‌ಗಳ ಗೆಲುವು ಸಾಧಿಸಿತು. ಜಮ್ಮು ಕಾಶ್ಮೀರದ ಯುಧ್ವೀರ್ ಸಿಂಗ್ ಚರಕ್ 39 ಎಸೆತಗಳಲ್ಲಿ 69 ರನ್ ಗಳಿಸುವ ಮೂಲಕ ಹೋರಾಟ ನೀಡಿದರು, ತಂಡದ ಸೋಲನ್ನು ತಪ್ಪಿಸಲು ಆಗಲಿಲ್ಲ.
ವಿಜಯ್ ಕುಮಾರ್ ವೈಶಾಖ್ 4 ವಿಕೆಟ್ ಪಡೆಯುವ ಮೂಲಕ ಮಿಂಚಿದರು. ಕೃಷ್ಣಪ್ಪ ಗೌತಮ್ 2 ವಿಕೆಟ್ ಪಡೆದರೆ, ಜಗದೀಶ್ ಸುಚಿತ್, ವಾಸುಕಿ ಕೌಶಿಕ್ ಮತ್ತು ವಿಧ್ವತ್ ಕಾವೇರಪ್ಪ ತಲಾ ಒಂದು ವಿಕೆಟ್ ಪಡೆದರು.
ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಕರ್ನಾಟಕ ಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಮುಂದಿನ ಪಂದ್ಯ ನವೆಂಬರ್ 25ರಂದು ನಡೆಯಲಿದ್ದು ಉತ್ತರಾಖಂಡ ತಂಡವನ್ನು ಎದುರಿಸಲಿದೆ. ಈ ಪಂದ್ಯ ಕೂಡ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.












Click it and Unblock the Notifications