Virat Kohli: ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕತ್ವ ನಿರಾಕರಿಸಲು ಅಸಲಿ ಕಾರಣ ಬಹಿರಂಗ!
ಐಪಿಎಲ್ 2025ರ ಆರಂಭಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮಾರ್ಚ್ 22ರಂದು ಶನಿವಾರ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧ ಆರ್ ಸಿಬಿ ಆಡಲಿದ್ದು ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಆರ್ ಸಿಬಿ ಈಗಾಗಲೇ ಅಭ್ಯಾಸ ಆರಂಭಿಸಿದ್ದು ಮೊದಲ ಪಂದ್ಯಕ್ಕಾಗಿ ಸಜ್ಜಾಗುತ್ತಿದ್ದಾರೆ. ತಂಡದ ನಾಯಕನಾಗಿ ರಜತ್ ಪಟಿದಾರ್ ನೇಮಕವಾಗಿದ್ದು ಅವರ ಮೇಲೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಫಾಫ್ ಡುಪ್ಲೆಸಿಸ್ ಅವರನ್ನು ಕೈಬಿಟ್ಟ ಬಳಿಕ ಈ ಬಾರಿ ವಿರಾಟ್ ಕೊಹ್ಲಿ ಮತ್ತೆ ನಾಯಕತ್ವ ವಹಿಸಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಆದರೆ ತಂಡದ ಭರವಸೆಯ ಬ್ಯಾಟರ್ ರಜತ್ ಪಟಿದಾರ್ ಅವರಿಗೆ ನಾಯಕತ್ವ ವಹಿಸಿದ್ದು, ಇದಕ್ಕೆ ವಿರಾಟ್ ಕೊಹ್ಲಿ ಕೂಡ ಬೆಂಬಲ ಕೊಟ್ಟಿದ್ದಾರೆ.

ಕೊಹ್ಲಿ ನಾಯಕತ್ವ ಬೇಡ ಎಂದಿದ್ಯಾಕೆ?
ರಜತ್ ಪಟಿದಾರ್ ನಾಯಕತ್ವಕ್ಕೆ ಆರ್ ಸಿಬಿ ಅಭಿಮಾನಿಗಳು ಖುಷಿಯಾಗಿದ್ದರೂ ವಿರಾಟ್ ಕೊಹ್ಲಿ ಯಾಕೆ ನಾಯಕತ್ವ ವಹಿಸಿಕೊಂಡಿಲ್ಲ ಎನ್ನುವ ಪ್ರಶ್ನೆ ಕಾಡುತ್ತಿದೆ. ಇದೀಗ ತಂಡದ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ವಿರಾಟ್ ಕೊಹ್ಲಿ ನಾಯಕತ್ವ ಯಾಕೆ ಒಪ್ಪಿಕೊಂಡಿಲ್ಲ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಕ್ರಿಕ್‌ಕ್ಟಾಸಿ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿರುವ ಅವರು, ವಿರಾಟ್ ಕೊಹ್ಲಿ ಬದಲಾಗಿ ರಜತ್ ಪಟಿದಾರ್ ಅವರಿಗೆ ನಾಯಕತ್ವ ನೀಡಿದ್ದು ಯಾಕೆ ಎನ್ನುವ ವಿಚಾರ ಬಹಿರಂಗಪಡಿಸಿದ್ದಾರೆ. "ರಜತ್ ಪಟಿದಾರ್ ನಾಯಕ ಎಂದು ಘೋಷಣೆ ಮಾಡಿದ ಬಳಿಕವೇ ನನಗೂ ಮಾಹಿತಿ ತಿಳಿಯಿತು. ಆದರೆ ಆಟಗಾರರ ಜೊತೆ ಇದ್ದಾಗ ಈ ವಿಷಯಗಳನ್ನು ಅರ್ಥ ಮಾಡಿಕೊಳ್ಳಬಹುದು. ವಿರಾಟ್ ಕೊಹ್ಲಿ ನಾಯಕತ್ವ ವಹಿಸಿಕೊಳ್ಳಲು ಒಪ್ಪಿಗೆ ನೀಡಲಿಲ್ಲ" ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಯುವ ಆಟಗಾರರಿಗೆ ಬೆಂಬಲ ಕೊಡಲು ನಿರ್ಧರಿಸಿದ್ದರು. ವಿರಾಟ್ ಕೊಹ್ಲಿ ಜೊತೆ ಚರ್ಚಿಸಿಯೇ ರಜತ್ ಪಟಿದಾರ್ ಅವರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿದೆ. ನಾಯಕತ್ವ ವಹಿಸಿಕೊಳ್ಳದೇ ಇದ್ದರೂ ಕೊಹ್ಲಿ ತಂಡಕ್ಕೆ ಬೇಕಾದ ಸಲಹೆ ಸೂಚನೆಗಳನ್ನು ಕೊಡಲಿದ್ದಾರೆ ಎಂದರು.
11 ಕೋಟಿ ರೂಪಾಯಿಗೆ ಜಿತೇಶ್ ಶರ್ಮಾ ಆರ್ ಸಿಬಿಗೆ
2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಜಿತೇಶ್ ಶರ್ಮಾ ಅವರನ್ನು ಆರ್ ಸಿಬಿ 11 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತು. ಬಿಡ್ಡಿಂಗ್‌ನಲ್ಲಿ ಪಂಜಾಬ್ ಕಿಂಗ್ಸ್ ಅವರನ್ನು 7 ಕೋಟಿ ರೂಪಾಯಿಗೆ ರೈಟ್ ಟು ಮ್ಯಾಚ್ ಕಾರ್ಡ್ ಬಳಸಿದರೂ, ಆರ್ ಸಿಬಿ ಜಿತೇಶ್‌ಗೆ 11 ಕೋಟಿ ರೂಪಾಯಿ ಬಿಡ್ ಮಾಡಿದ್ದರಿಂದ ಪಂಜಾಬ್ ಹಿಂದೆ ಸರಿಯಿತು. ಆರ್ ಸಿಬಿ ತಂಡದ ಫಿನಿಷರ್ ಆಗಿರುವ ದಿನೇಶ್ ಕಾರ್ತಿಕ್ ನಿವೃತ್ತಿ ಹೊಂದಿದ್ದು, ಅವರ ಜಾಗಕ್ಕೆ ಜಿತೇಶ್ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ.
ರಜತ್ ಪಟಿದಾರ್ ನಾಯಕತ್ವದ ಬಗ್ಗೆ ಮಾತನಾಡಿದ ಜಿತೇಶ್ ಶರ್ಮಾ, ರಜತ್ ಪಟಿದಾರ್ ನಾಯಕತ್ವ ಸ್ಥಾನಕ್ಕೆ ಅರ್ಹತೆ ಪಡೆದಿದ್ದಾರೆ. ಹಲವು ವರ್ಷಗಳಿಂದ ಆರ್ ಸಿಬಿಗಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ರಜತ್ ಜೊತೆ ನಾನು ಸಾಕಷ್ಟು ಕ್ರಿಕೆಟ್ ಆಡಿದ್ದೇನೆ, ನಾಯಕತ್ವದಲ್ಲಿ ನಾನು ಅವರಿಗೆ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications