RCB Virat Kohli: ವಿರಾಟ್ ಕೊಹ್ಲಿಗಾಗಿ, ಅಭಿಮಾನಿಗಳಿಗಾಗಿ; 18 ವರ್ಷಗಳ ಕಾಯುವಿಕೆ ಕೊನೆಯಾಗುತ್ತಾ?
ಐಪಿಎಲ್ 2025ರ ಪಂದ್ಯಾವಳಿ ಅಂತಿಮಘಟ್ಟಕ್ಕೆ ಬಂದು ತಲುಪಿದೆ. ಆರ್ ಸಿಬಿ ಈಗಾಗಲೇ ಫೈನಲ್ ಸ್ಥಾನ ಖಚಿತಪಡಿಸಿಕೊಂಡಿದ್ದು ಉಳಿದ ಮೂರು ತಂಡಗಳು ಫೈನಲ್‌ಗೆ ಬರಲು ಸೆಣೆಸಾಡುತ್ತಿವೆ. ಇಡೀ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಆರ್ ಸಿಬಿ ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಅಭಿಮಾನಿಗಳ 18 ವರ್ಷದ ಕಾಯುವಿಕೆ ಈ ಬಾರಿಯಾದರೂ ಕೊನೆಯಾಗಲಿ ಎಂದು ಹಾರೈಸಿದ್ದಾರೆ.
ವಿರಾಟ್ ಕೊಹ್ಲಿ, ಭಾರತ ತಂಡದ ಶ್ರೇಷ್ಠ ಕ್ರಿಕೆಟಿಗ, ಕೊಹ್ಲಿ ಏನೇ ಮಾಡಿದ್ರೂ ಅದು ದಾಖಲೆ. ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಏಷ್ಯಾ ಕಪ್ ಎಲ್ಲವನ್ನೂ ಅವರು ಗೆದ್ದಿದ್ದಾರೆ. ಆದರೆ 17 ವರ್ಷಗಳಿಂದ ಅವರು ಗೆಲ್ಲಲು ಸಾಧ್ಯವಾಗದ ಒಂದು ಪ್ರಶಸ್ತಿ ಅದು ಐಪಿಎಲ್ ಮಾತ್ರ.

ಮೂರು ಬಾರಿ ಫೈನಲ್ ತಲುಪಿದ್ದರೂ ಎರಡು ಬಾರಿ ಕೂದಲೆಳೆ ಅಂತರದಲ್ಲಿ ತಂಡವು ಪ್ರಶಸ್ತಿ ಗೆಲ್ಲಲು ವಿಫಲವಾಗಿದೆ. 2016ರ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್ ಸಿಬಿ ತಂಡ ಅಮೋಘ ಪ್ರದರ್ಶನ ನೀಡಿತ್ತು. ಫೈನಲ್ ತಲುಪಿದ್ದ ಆರ್ ಸಿಬಿ ಫೈನಲ್‌ನಲ್ಲಿ ಗೆಲುವಿನ ಸನಿಹಕ್ಕೆ ಬಂದು ಕೇವಲ 8 ರನ್‌ಗಳಿಂದ ಸೋಲು ಕಂಡಿತ್ತು. ಅದಾದ 9 ವರ್ಷಗಳ ಬಳಿಕ ಇದೀಗ ಮತ್ತೊಮ್ಮೆ ಫೈನಲ್‌ಗೆ ಪ್ರವೇಶಿಸಿದೆ.
18 ವರ್ಷಗಳ ಸುದೀರ್ಘ ಪಯಣ
ವಿರಾಟ್ ಕೊಹ್ಲಿ 2008ರಲ್ಲಿ ಅಂಡರ್-19 ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದ ಬಳಿಕ ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಸೇರಿದರು. ಸತತ 18 ವರ್ಷಗಳು ಒಂದೇ ತಂಡಕ್ಕಾಗಿ ಆಡಿದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಆರ್ ಸಿಬಿ ಫ್ರಾಂಚೈಸಿ ಬಗ್ಗೆ ಕೊಹ್ಲಿಗೆ ಎಷ್ಟು ಅಭಿಮಾನ ಇದೆಯೋ ಅಷ್ಟೇ ಅಭಿಮಾನಿ ಆರ್ ಸಿಬಿ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಮೇಲಿದೆ.
ಕೊಹ್ಲಿ ಆರ್ ಸಿಬಿ ತಂಡದ ಶಕ್ತಿ, ಅವರು ಮೈದಾನದಲ್ಲಿದ್ದರೆ ಸಾಕು ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಪಕ್ಕಾ. 2016ರ ಒಂದೇ ಆವೃತ್ತಿಯಲ್ಲಿ 4 ಶತಕ ಸೇರಿ 973 ರನ್ ಗಳಿಸಿದ್ದು ಈವರೆಗೂ ದಾಖಲೆಯಾಗೇ ಉಳಿದಿದೆ.
ಆರ್ ಸಿಬಿ ತಂಡಕ್ಕಾಗಿ ಈವರೆಗೆ 9000 ರನ್ ಗಳಿಸಿದ್ದಾರೆ. ಒಂದೇ ಫ್ರಾಂಚೈಸಿಗಾಗಿ ಇಷ್ಟು ರನ್ ಗಳಿಸಿದ ಜಗತ್ತಿನ ಏಕೈಕ ಬ್ಯಾಟರ್ ಎನ್ನುವ ದಾಖಲೆ ಕೊಹ್ಲಿಯದ್ದಾಗಿದೆ. 2013 ರಿಂದ 2021ರವರೆಗೆ ಆರ್ ಸಿಬಿ ತಂಡದ ನಾಯಕತ್ವ ವಹಿಸಿಕೊಂಡಿದ್ದ ಅವರು, ಬಳಿಕ ನಾಯಕತ್ವ ಬಿಟ್ಟುಕೊಟ್ಟರು, ತಂಡದಲ್ಲಿ ಹಿರಿಯ ಆಟಗಾರನಾಗಿ ನಾಯಕನಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ರಜತ್ ಪಟಿದಾರ್ ನಾಯಕತ್ವದಲ್ಲಿ ಆರ್ ಸಿಬಿ ಉತ್ತಮ ಪ್ರದರ್ಶನ ನೀಡುತ್ತಿದ್ದು ವಿರಾಟ್ ಕೊಹ್ಲಿ ಎಂದಿನಂತೆ ಭರ್ಜರಿ ಫಾರ್ಮ್‌ನಲ್ಲಿದ್ದಾರೆ.
36 ವರ್ಷಗಳಾದರೂ ಗೆಲುವನ್ನು ಮಗುವಿನಂತೆ ಸಂಭ್ರಮಿಸುವ, ಮೈದಾನದಲ್ಲಿ ಚಿರತೆಯನ್ನು ಓಡಾಡುವ ವಿರಾಟ್ ಕೊಹ್ಲಿ ಅನೇಕ ಯುವ ಆಟಗಾರರಿಗೆ ಸ್ಪೂರ್ತಿ. ಎಲ್ಲವನ್ನೂ ಸಾಧಿಸಿದ್ದರೂ ಐಪಿಎಲ್ ಕಪ್ ಕೊರತೆಯಿದ್ದು ಈ ವರ್ಷ ಆ ಬರ ಕೊನೆಯಾಗಲಿ, ಕೊಹ್ಲಿ ಕಪ್ ಎತ್ತಿಹಿಡಿಯುವದನ್ನು ನೋಡಲು ಕಾಯುತ್ತಿರುವ ಕೋಟ್ಯಂತರ ಅಭಿಮಾನಿಗಳು ಈ ಬಾರಿ ತಮ್ಮ ಆಸೆ ಈಡೇರಲಿ ಎಂದು ತುದಿಗಾಲಲ್ಲಿ ಕಾಯುತ್ತಿದ್ದಾರೆ.












Click it and Unblock the Notifications