ಆರ್‌ಸಿಬಿ-ಆರ್‌ಆರ್ ಪಂದ್ಯ ಮಳೆಯಿಂದ ರದ್ದಾದ್ರೆ ಮುಂದಿನ ನಿಲುವೇನು? ಹವಾಮಾನ ಇಲಾಖೆ ಮುನ್ಸೂಚನೆ ಏನಿದೆ?
RCB Vs RR Match Weather Report: ಗುವಾಹಟಿಯ ಬರ್ಸಾಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು (ಏಪ್ರಿಲ್ 10) ನಡೆಯಲಿರುವ ಐಪಿಎಲ್ 2026ರ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜಸ್ಥಾನ್ ರಾಯಲ್ಸ್ ಅನ್ನು ಎದುರಿಸಲಿದೆ. ಈಗಾಗಲೇ ಇಲ್ಲಿ ನಡೆದ ಕಳೆದ ಎರಡು ಪಂದ್ಯಗಳಿಗೆ ಮಳೆ ಅಡ್ಡಿಯಾಗಿದ್ದು, ಇಂದು ಕೂಡ ವರುಣನ ಭೀತಿ ಎದುರಾಗಿದೆ. ಹಾಗಾದ್ರೆ, ಹವಾಮಾನ ಇಲಾಖೆ ಹೇಳೋದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ಇಂದು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಈ ಪಂದ್ಯವು ಶುಕ್ರವಾರ ಗುವಾಹಟಿಯ ಬರ್ಸಾಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ, ಈ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ.

ಅಗ್ರಸ್ಥಾನ ಉಳಿಸಿಕೊಳ್ಳಲು ಆರ್‌ಆರ್ ಪ್ಲಾನ್
ಈ ಬಾರಿಯ ಐಪಿಎಲ್ ಸೀಸನ್ ಆರಂಭದಿಂದಲೂ ರಾಜಸ್ಥಾನ್ ರಾಯಲ್ಸ್ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದೆ. ರಿಯಾನ್ ಪರಾಗ್ ನಾಯಕತ್ವದ ಈ ತಂಡವು ಸತತ ಮೂರು ಪಂದ್ಯಗಳನ್ನು ಗೆದ್ದು ಅಜೇಯವಾಗಿ ಉಳಿದಿದೆ. ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಹೀನಾಯವಾಗಿ ಸೋಲಿಸುವ ಮೂಲಕ ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿದೆ. ಇನ್ನೂ ಇಂದು ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಗೆದ್ದು ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಕಲ ತಯಾರಿ ನಡೆಸಿದೆ.
ಉತ್ತಮ ಫಾರ್ಮ್‌ನಲ್ಲಿರುವ ಆರ್‌ಸಿಬಿ
ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಡಿದ ಎರಡು ಪಂದ್ಯಗಳನ್ನ ಗೆದ್ದು ಅಜೇಯವಾಗಿದ್ದು, ಅಂಕಪಟ್ಟಿಯಲ್ಲಿ ನಾಲ್ಕು ಅಂಕಗಳೊಂದಿಗೆ ಮೂರನೆ ಸ್ಥಾನ ಅಲಂಕರಿಸಿದೆ. ತಮ್ಮ ಮೊದಲ ಎರಡು ಪಂದ್ಯಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಸಿಎಸ್‌ಕೆ ವಿರುದ್ಧ ಭರ್ಜರಿ ಜಯ ದಾಖಲಿಸಿದೆ. ಆದ್ದರಿಂದ ದೊಡ್ಡ ಮೊತ್ತವನ್ನು ಕಲೆಹಾಕಲು ಆರ್‌ಆರ್ ತಂಡವು ತನ್ನ ಫಾರ್ಮ್‌ನಲ್ಲಿರುವ ಆರಂಭಿಕ ಜೋಡಿಯ ಮೇಲೆ ಹೆಚ್ಚಿನ ಭರವಸೆ ಇಟ್ಟಿದೆ.
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಬ್ಯಾಟಿಂಗ್
ವೈಭವ್ ಸೂರ್ಯವಂಶಿ ಸಿಎಸ್‌ಕೆ ವಿರುದ್ಧದ ಈ ಋತುವಿನ ಆರಂಭಿಕ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅವರ ಒಂದೇ ಓವರ್‌ನಲ್ಲಿ ಎರಡು ಸಿಕ್ಸರ್‌ಗಳನ್ನು ಸಿಡಿಸಿ ಅದ್ಭುತ ಪ್ರದರ್ಶನ ನೀಡಿದ್ದರು. ಇತ್ತ ಯಶಸ್ವಿ ಜೈಸ್ವಾಲ್ ಸತತ ಎರಡು ಅರ್ಧಶತಕಗಳನ್ನು ಬಾರಿಸಿ ಇಂದು ಕೂಡ ರನ್ ಹೊಳೆ ಹರಿಸುವ ಆತ್ಮವಿಶ್ವಾಸದಲ್ಲಿದ್ದಾರೆ. ಇವರ ಜೊತೆಗೆ ತಂಡದಲ್ಲಿ ಈ ಸೀಸನ್‌ನ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ರವಿ ಬಿಷ್ಣೋಯ್ ಕೂಡ ಇದ್ದಾರೆ. ಈ ಲೆಗ್ ಸ್ಪಿನ್ನರ್ ಈವರೆಗೆ ಒಟ್ಟು ಏಳು ವಿಕೆಟ್‌ಗಳನ್ನು ಪಡೆದಿದ್ದು, ಆಡಿದ ಮೂರೂ ಪಂದ್ಯಗಳಲ್ಲಿ ಕನಿಷ್ಠ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆರ್‌ಸಿಬಿ ಬ್ಯಾಟಿಂಗ್, ಬೌಲಿಂಗ್ ವಿಭಾಗ
ಆರ್‌ಸಿಬಿ ತಂಡದ ಬ್ಯಾಟಿಂಗ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದು, ಆಡಿದ ಎರಡು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಟಿಮ್ ಡೇವಿಡ್, ನಾಯಕ ಪಾಟಿದಾರ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇನ್ನೂ ಬೌಲಿಂಗ್ ವಿಚಾರಕ್ಕೆ ಬಂದರೆ, ವೇಗಿ ಜೋಶ್ ಹ್ಯಾಜಲ್‌ವುಡ್ ಅವರ ಅನುಪಸ್ಥಿತಿಯಲ್ಲಿ ಜೇಕಬ್ ಡಫಿ ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿ ಗಮನ ಸೆಳೆದಿದ್ದಾರೆ.
ಹ್ಯಾಜಲ್‌ವುಡ್ ಸ್ಥಾನ ತುಂಬಿದ ಜೇಕಬ್ ಡಫಿ
ಮಾರಕ ಬೌಲರ್ ಹ್ಯಾಜಲ್‌ವುಡ್ ಹೊರಗುಳಿದಿದ್ದರೂ, ಅವರ ಜಾಗಕ್ಕೆ ಬಂದ ಡಫಿ ಈಗಾಗಲೇ ಐದು ವಿಕೆಟ್ ಕಬಳಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ನ್ಯೂಜಿಲೆಂಡ್ ವೇಗಿಗೆ ಭುವನೇಶ್ವರ್ ಕುಮಾರ್, ರೊಮಾರಿಯೋ ಶೆಫರ್ಡ್ ಉತ್ತಮ ಸಾಥ್ ನೀಡುತ್ತಿದ್ದಾರೆ. ಸ್ಪಿನ್ ವಿಭಾಗದಲ್ಲಿ ಕೃನಾಲ್ ಪಾಂಡ್ಯ, ಸುಯಾಶ್ ಶರ್ಮಾ ಅವರು ಉತ್ತಮ ಮೋಡಿ ಮಾಡಿ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಹೀಗೆ ಆರ್‌ಸಿಬಿ ಬೌಲರ್‌ಗಳು ತಮ್ಮ ಬ್ಯಾಟರ್‌ಗಳ ಶ್ರಮಕ್ಕೆ ತಕ್ಕ ಬೆಂಬಲ ನೀಡುತ್ತಿದ್ದಾರೆ.
ಹವಾಮಾನ ಇಲಾಖೆ ಹೇಳೋದೇನು?
ಗುವಾಹಟಿಯಲ್ಲಿ ನಡೆದ ಕಳೆದ ಪಂದ್ಯವನ್ನು ಮಳೆಯಿಂದಾಗಿ ತಡವಾಗಿ ಓವರ್ ಕಡಿಮೆ ಮಾಡಿ ಆಡಿಸಲಾಗಿತ್ತು. ಇನ್ನೂ ಇಂದು (ಏಪ್ರಿಲ್ 10) ಕೂಡ ಇಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ. ಹೀಗಾಗಿ ಈ ಪಂದ್ಯಕ್ಕೂ ಮಳೆಯ ಅಡ್ಡಿ ಭೀತಿ ಎದುರಾಗಿದೆ.
ಒಂದು ವೇಳೆ ಭಾರೀ ಮಳೆ ಮುಂದುವರೆದರೆ, ಓವರ್‌ಗಳ ಸಂಖ್ಯೆ ಕಡಿಮೆಯಾಗುವ ಅಥವಾ ಪಂದ್ಯ ವಿಳಂಬವಾಗುವ ಸಾಧ್ಯತೆ ಇದೆ. ಪಿಚ್ ಬ್ಯಾಟಿಂಗ್‌ಗೆ ಪೂರಕ ಆಗಿರುವುದರಿಂದ, ಪಂದ್ಯ ನಡೆದರೆ ರನ್‌ಗಳ ಮಳೆ ಸುರಿಯುವುದು ಖಚಿತ. ಮಳೆ ಬಂದು ಪಂದ್ಯ ರದ್ದಾದರೆ ನಿಯಮದಂತೆ ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗುತ್ತದೆ. ಮತ್ತೊಂದೆಡೆ ಅಭಿಮಾನಿಗಳು ಮಳೆರಾಯನ ಅಡ್ಡಿಯಾಗದೇ ಪೂರ್ಣ ಪ್ರಮಾಣದ ಪಂದ್ಯ ನಡೆಯಬೇಕು ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.












Click it and Unblock the Notifications