IPL 2025: ಕರ್ನಾಟಕದ ಈ ನಾಲ್ಕು ನಗರಗಳಲ್ಲಿ ಬರಲಿದೆ ಐಪಿಎಲ್ ಫ್ಯಾನ್ ಪಾರ್ಕ್; ದಿನಾಂಕ, ಸ್ಥಳ ಮಾಹಿತಿ
ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025ರ 18ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಮಾರ್ಚ್ 22ರಂದು ಶನಿವಾರ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್ ಸಿಬಿ ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧ ಆಡಲಿದೆ. ಅಭಿಮಾನಿಗಳಿಗೆ ಹೆಚ್ಚಿನ ಮನರಂಜನೆ ಕೊಡಲು ಎಲ್ಲಾ ಫ್ರಾಂಚೈಸಿಗಳು ಸಜ್ಜಾಗಿವೆ.
ಐಪಿಎಲ್ 2025ರ ಪಂದ್ಯಗಳು ನಡೆಯುವ ಕ್ರೀಡಾಂಗಣಗಳು ಪ್ರಮುಖ ನಗರಗಳಲ್ಲಿ ಮಾತ್ರ ನಡೆಯಲಿದ್ದು ಎಲ್ಲಾ ಅಭಿಮಾನಿಗಳಿಗೂ ಕ್ರೀಡಾಂಗಣಕ್ಕೆ ಹೋಗಲು ಸಾಧ್ಯವಿಲ್ಲ. ಅದಕ್ಕೆಂದೇ ಬಿಸಿಸಿಐ ಅಭಿಮಾನಿಗಳಿಗೆ ಮನರಂಜನೆ ನೀಡಲು ಫ್ಯಾನ್ ಪಾರ್ಕ್‌ಗಳನ್ನು ಸ್ಥಾಪನೆ ಮಾಡುವ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದೆ.

2015ರಿಂದ ಪ್ರತಿ ವರ್ಷ ಫ್ಯಾನ್ ಪಾರ್ಕ್‌ಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಹಲವು ಮಧ್ಯಮ ನಗರಗಳಲ್ಲಿ ಈ ಫ್ಯಾನ್ ಪಾರ್ಕ್‌ಗಳನ್ನು ಸ್ಥಾಪನೆ ಮಾಡುತ್ತಿದ್ದು, ಪ್ರೇಕ್ಷಕರು ದೊಡ್ಡ ಪರದೆಯಲ್ಲಿ ಐಪಿಎಲ್ ಪಂದ್ಯಗಳನ್ನು ನೋಡಿ ಖುಷಿ ಪಡಬಹುದಾಗಿದೆ.
ಈ ಬಾರಿ 50 ನಗರಗಳಲ್ಲಿ ಫ್ಯಾನ್ ಪಾರ್ಕ್
2025ರ ಟಾಟಾ ಐಪಿಎಲ್ ಪಂದ್ಯಾವಳಿ ವೇಳೆ ಅಭಿಮಾನಿಗಳಿಗಾಗಿ 23 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 50 ನಗರಗಳಿಗಳಲ್ಲಿ ಫ್ಯಾನ್ ಪಾರ್ಕ್‌ಗಳನ್ನು ಸ್ಥಾಪನೆ ಮಾಡುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನಿರ್ಧರಿಸಿದೆ ಎಂದು ಐಪಿಎಲ್ ಮಾಹಿತಿ ಕೊಟ್ಟಿದೆ.
ಮಾರ್ಚ್ 22ರ ಕೋಲ್ಕತ್ತಾದ ಐತಿಹಾಸಿ ಈಡನ್ ಗಾರ್ಡನ್ಸ್‌ನಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವಿನ ಪಂದ್ಯದೊಂದಿಗೆ ಐಪಿಎಲ್ ಆರಂಭವಾಗಲಿದೆ. 2025ರಲ್ಲಿ ಐಪಿಎಲ್ ಫ್ಯಾನ್ ಪಾರ್ಕ್‌ಗಳನ್ನು ಶನಿವಾರ ಮತ್ತು ಭಾನುವಾರ ಆಯೋಜಿಸಲಾಗುವುದು. ಪ್ರತಿ ವಾರಾಂತ್ಯದಲ್ಲಿ ವಿವಿಧ ನಗರಗಳಲ್ಲಿ ಐದು ಫ್ಯಾನ್ ಪಾರ್ಕ್‌ಗಳನ್ನು ಏಕಕಾಲದಲ್ಲಿ ಸ್ಥಾಪಿಸಲಾಗುವುದು.
ಈಶಾನ್ಯ ಭಾಗದಲ್ಲಿ ಅಸ್ಸಾಂನ ಟಿನ್ಸುಕಿಯಾನಿಂದ ದಕ್ಷಿಣದ ಕೇರಳ ರಾಜ್ಯದ ಕೊಚ್ಚಿವರೆಗೆ ಮತ್ತು ಉತ್ತರದ ಪಂಜಾಬ್‌ನ ಅಮೃತಸರದಿಂದ ಪಶ್ಚಿಮದ ಗೋವಾದವರೆಗೆ, ಫ್ಯಾನ್ ಪಾರ್ಕ್‌ಗಳು ಭಾರತದ ಉದ್ದಗಲವನ್ನು ಆವರಿಸುತ್ತವೆ.
ಆಂಧ್ರಪ್ರದೇಶದ ಕಾಕಿನಾಡ, ನಾಗಾಲ್ಯಾಂಡ್‌ನ ದಿಮಾಪುರ, ಪುದುಚೆರಿ ಕಾರೈಕಲ್, ಮನ್ಬುಮ್, ಪಶ್ಚಿಮ ಬಂಗಾಳದ ಪುರಲಿಯಾ, ರೋಹ್ಟಕ್ ಮತ್ತು ಟಿನ್ಸುಕಿಯಾದಲ್ಲಿ ಇದೇ ಮೊದಲ ಬಾರಿಗೆ ಫ್ಯಾನ್ ಪಾರ್ಕ್ ಸ್ಥಾಪನೆ ಮಾಡಲಾಗುತ್ತಿದೆ.
ಫ್ಯಾನ್ ಪಾರ್ಕ್‌ನಲ್ಲಿ ಏನಿರುತ್ತೆ, ಪ್ರವೇಶ ದರ ಎಷ್ಟು?
ಐಪಿಎಲ್ 2025 ಫ್ಯಾನ್ ಪಾರ್ಕ್‌ಗಳಿಗೆ ಹೋಗಲು ಯಾವುದೇ ಟಿಕೆಟ್ ಇರುವುದಿಲ್ಲ ಉಚಿತವಾಗಿ ಆನಂದಿಸಬಹುದು. ಫ್ಯಾನ್ ಪಾರ್ಕ್‌ನಲ್ಲಿ ದೊಡ್ಡ ಪರದೆ ಮೇಲೆ ಐಪಿಎಲ್ ಪಂದ್ಯಗಳ ನೇರಪ್ರಸಾರ, ಸಂಗೀತ, ಮನರಂಜನೆ, ಫುಡ್ ಕೋರ್ಟ್‌ಗಳು, ಮಕ್ಕಳ ಆಟದ ವಲಯ ಮತ್ತು ವರ್ಚುವಲ್ ಬ್ಯಾಟಿಂಗ್ ವಲಯ, ನೆಟ್‌ಗಳ ಮೂಲಕ ಬೌಲಿಂಗ್, ಫೇಸ್-ಪೇಂಟಿಂಗ್, ಪ್ರತಿಕೃತಿ ಡಗೌಟ್‌ಗಳು, ಚಿಯರ್-ಒ-ಮೀಟರ್ ಮತ್ತು ಉದ್ಯಾನವನಗಳಲ್ಲಿ 360° ಫೋಟೋ ಬೂತ್‌ಗಳು ಸೇರಿದಂತೆ ಅತ್ಯಾಕರ್ಷಕ ಚಟುವಟಿಕೆಗಳನ್ನು ಅಭಿಮಾನಿಗಳು ಆನಂದಿಸಬಹುದು.
ಪ್ರವೇಶ ಸಮಯ ಏನು?
ಪಂದ್ಯಗಳ ಸಮಯವನ್ನು ಆಧರಿಸಿ ಫ್ಯಾನ್ ಪಾರ್ಕ್ ಪ್ರವೇಶದ ಸಮಯ ಬದಲಾವಣೆಯಾಗಿದೆ. ಎರಡು ಪಂದ್ಯಗಳು ಇರುವ ದಿನ ಮಧ್ಯಾಹ್ನ 1.30ಕ್ಕೆ ಫ್ಯಾನ್ ಪಾರ್ಕ್‌ಗೆ ಪ್ರವೇಶ ಆರಂಭವಾಗಲಿದ್ದು, ಸಂಜೆ ಪಂದ್ಯ ಮಾತ್ರ ಇದ್ದಾಗ ಸಂಜೆ 4 ಗಂಟೆಯಿಂದ ಫ್ಯಾನ್‌ಪಾರ್ಕ್‌ಗೆ ಪ್ರವೇಶ ಇರುತ್ತದೆ.
ಕರ್ನಾಟಕದ ನಾಲ್ಕು ನಗರಗಳಲ್ಲಿ ಫ್ಯಾನ್ ಪಾರ್ಕ್
ಕರ್ನಾಟಕದಲ್ಲಿ ಈ ಬಾರಿ ನಾಲ್ಕು ನಗರಗಳಲ್ಲಿ ಫ್ಯಾನ್ ಪಾರ್ಕ್ ಸ್ಥಾಪನೆಯಾಗಲಿದೆ. ಏಪ್ರಿಲ್ 12 ಮತ್ತು 13ರಂದು ಮೈಸೂರು ನಗರದಲ್ಲಿ ಫ್ಯಾನ್ ಪಾರ್ಕ್ ಸ್ಥಾಪನೆ ಮಾಡಲಿದ್ದು, ಮೈಸೂರಿನ ಅಭಿಮಾನಿಗಳು ಐಪಿಎಲ್ ಪಂದ್ಯಗಳನ್ನು ಆನಂದಿಸಬಹುದು. ಏಪ್ರಿಲ್ 26 ಮತ್ತು 27 ರಂದು ತುಮಕೂರು ನಗರದಲ್ಲಿ ಫ್ಯಾನ್ ಪಾರ್ಕ್ ಸ್ಥಾಪನೆ ಮಾಡಲಾಗುತ್ತದೆ. ಮೇ 3 ಮತ್ತು 4 ರಂದು ಬೆಳಗಾವಿ ನಗರದಲ್ಲಿ ಫ್ಯಾನ್ ಪಾರ್ಕ್ ಸ್ಥಾಪನೆಯಾಗಲಿದ್ದು, ಮೇ 17 ಮತ್ತು 18 ರಂದು ಮಂಗಳೂರು ನಗರದಲ್ಲಿ ಫ್ಯಾನ್ ಪಾರ್ಕ್ ಸ್ಥಾಪನೆಯಾಗಲಿದೆ.
ಫ್ಯಾನ್ ಪಾರ್ಕ್ ವೇಳಾಪಟ್ಟಿ
ಮಾರ್ಚ್ 22 ಮತ್ತು 23
ರೋಹ್ಟಕ್ (ಹರಿಯಾಣ), ಬಿಕಾನೇರ್ (ರಾಜಸ್ಥಾನ), ಗ್ಯಾಂಗ್ಟಾಕ್ (ಸಿಕ್ಕಿಂ), ಕೊಚ್ಚಿ (ಕೇರಳ), ಕೊಯಮತ್ತೂರು (ತಮಿಳುನಾಡು).
ಮಾರ್ಚ್ 29 ಮತ್ತು 30
ಗ್ವಾಲಿಯರ್ (ಮಧ್ಯಪ್ರದೇಶ), ಜೋಧ್‌ಪುರ (ರಾಜಸ್ಥಾನ), ಟಿನ್ಸುಕಿಯಾ (ಅಸ್ಸಾಂ), ಪಾಲಕ್ಕಾಡ್ (ಕೇರಳ), ತಿರುನಲ್ವೇಲಿ (ತಮಿಳುನಾಡು).
ಏಪ್ರಿಲ್ 5 ಮತ್ತು 6
ಮಥುರಾ (ಉತ್ತರ ಪ್ರದೇಶ), ರಾಜ್‌ಕೋಟ್ (ಗುಜರಾತ್), ದಿಮಾಪುರ (ನಾಗಾಲ್ಯಾಂಡ್), ನಿಜಾಮಾಬಾದ್ (ತೆಲಂಗಾಣ), ಮಧುರೈ (ತಮಿಳುನಾಡು).
ಏಪ್ರಿಲ್ 12 ಮತ್ತು 13
ಮೈಸೂರು (ಕರ್ನಾಟಕ), ಮೀರತ್ (ಉತ್ತರ ಪ್ರದೇಶ), ನಾಡಿಯಾಡ್ (ಗುಜರಾತ್), ಅಗರ್ತಲಾ (ತ್ರಿಪುರಾ), ನಾಗ್ಪುರ (ಮಹಾರಾಷ್ಟ್ರ).
ಏಪ್ರಿಲ್ 19 ಮತ್ತು 20
ಬಥಿಂಡಾ (ಪಂಜಾಬ್), ಸೂರತ್ (ಗುಜರಾತ್), ತೇಜ್‌ಪುರ (ಅಸ್ಸಾಂ), ಸೋಲಾಪುರ (ಮಹಾರಾಷ್ಟ್ರ), ಕಾರೈಕಲ್ (ಪುದುಚೆರಿ).
ಏಪ್ರಿಲ್ 26 ಮತ್ತು 27
ತುಮಕೂರು (ಕರ್ನಾಟಕ), ಅಮೃತಸರ (ಪಂಜಾಬ್), ಭೋಪಾಲ್ (ಮಧ್ಯಪ್ರದೇಶ), ರಾಯ್‌ಗಂಜ್ (ಪಶ್ಚಿಮ ಬಂಗಾಳ), ಕೊಲ್ಹಾಪುರ (ಮಹಾರಾಷ್ಟ್ರ).
ಮೇ 3 ಮತ್ತು 4
ಬೆಳಗಾವಿ (ಕರ್ನಾಟಕ), ಹಮೀರ್‌ಪುರ (ಹಿಮಾಚಲ ಪ್ರದೇಶ), ಕೋಟಾ (ರಾಜಸ್ಥಾನ), ಮುಜಫರ್ ಪುರ್ ( ಬಿಹಾರ), ತಿರುಚಿನಾಪಲ್ಲಿ (ತಮಿಳುನಾಡು).
ಮೇ 10 ಮತ್ತು 11
ಉನಾ (ಹಿಮಾಚಲ ಪ್ರದೇಶ), ಜಬಲ್‌ಪುರ (ಮಧ್ಯಪ್ರದೇಶ), ಧನ್‌ಬಾದ್ (ಜಾರ್ಖಂಡ್), ರತ್ನಗಿರಿ (ಮಹಾರಾಷ್ಟ್ರ), ವಿಜಯವಾಡ (ಆಂಧ್ರಪ್ರದೇಶ).
ಮೇ 17 ಮತ್ತು 18
ಮಂಗಳೂರು (ಕರ್ನಾಟಕ), ಆಗ್ರಾ (ಉತ್ತರ ಪ್ರದೇಶ), ಭಿಲೈ (ಛತ್ತೀಸ್‌ಗಢ), ಮಂಭುಮ್ ಅಥವಾ ಪುರುಲಿಯಾ (ಪಶ್ಚಿಮ ಬಂಗಾಳ), ವಾರಂಗಲ್ (ತೆಲಂಗಾಣ).
ಮೇ 23 ಮತ್ತು 25
ಗಾಜಿಪುರ (ಉತ್ತರ ಪ್ರದೇಶ), ರೂರ್ಕೆಲಾ (ಒರಿಸ್ಸಾ), ಜೆಮ್‌ಶೆಡ್‌ಪುರ (ಜಾರ್ಖಂಡ್), ಗೋವಾ, ಕಾಕಿನಾಡ (ಆಂಧ್ರಪ್ರದೇಶ).
ಎಲ್ಲಾ ರಾಜ್ಯಗಳಲ್ಲಿ ಜಿಲ್ಲಾ ಕೇಂದ್ರಗಳಲ್ಲೇ ಫ್ಯಾನ್ ಪಾರ್ಕ್‌ಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಐಪಿಎಲ್ ಮೆಗಾ ಹರಾಜಿನಲ್ಲಿ ಎಲ್ಲಾ ತಂಡಗಳು ಸಾಕಷ್ಟು ಬದಲಾವಣೆಯಾಗಿದ್ದು ಈ ಬಾರಿ ರೋಚಕ ಹಣಾಹಣಿಯನ್ನು ಅಭಿಮಾನಿಗಳು ನಿರೀಕ್ಷೆ ಮಾಡಿದ್ದಾರೆ.












Click it and Unblock the Notifications