ಆರ್‌ಸಿಬಿ ಪಡೆಗೆ ಕೈಕೊಟ್ಟ ಬ್ಯಾಟಿಂಗ್, ಬೌಲಿಂಗ್ ವಿಭಾಗವೇ ಆಧಾರ!
ಐಪಿಎಲ್ 2024ರ ಮೊದಲ ಪಂದ್ಯ ಶುರುವಾಗಿದ್ದು, ಆರ್‌ಸಿಬಿ & ಚನ್ನೈ ತಂಡಗಳು ಈಗ ಗೆಲುವಿಗಾಗಿ ಹೋರಾಟ ಆರಂಭ ಮಾಡಿವೆ. ಆದರೆ ಆರಂಭದಲ್ಲಿ ಉತ್ತಮವಾಗಿ ಆಟವಾಡಿ ಮಿಂಚಿದ ಆರ್‌ಸಿಬಿ ತಂಡ, ನಂತರ ಸಾಲು ಸಾಲು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಒದ್ದಾಡಿತ್ತು. ಹಾಗಾದರೆ ಅಂತಿಮವಾಗಿ ಆರ್‌ಸಿಬಿ ತಂಡ ಗಳಿಸಿದ ಸ್ಕೋರ್ ಎಷ್ಟು ರನ್? ಮುಂದೆ ಓದಿ.
ಹೌದು ಐಪಿಎಲ್ 2024ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ & ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈನ ಕ್ರೀಡಾಂಗಣದಲ್ಲಿ ಸೆಣಸಾಟ ಶುರು ಮಾಡಿವೆ. ಟಾಸ್‌ನ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಆಗಿರುವ, ಫಾಫ್ ಡುಪ್ಲೇಸಿಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಆರ್‌ಸಿಬಿ ತಂಡ ಭರ್ಜರಿ ರನ್‌ಗಳ ಮಳೆಯನ್ನೇ ಹರಿಸಲಿದೆ ಎಂಬ ಲೆಕ್ಕಾಚಾರ ಇತ್ತು. ಆರಂಭದ 4 ಓವರ್ ಉತ್ತಮವಾಗಿಯೇ ಇತ್ತು, ಆದ್ರೆ 4.3 ಓವರ್ ಆಗಿದ್ದಾಗ ಮೊದಲ ವಿಕೆಟ್ ಔಟ್ ಆಗಿತ್ತು. ಅಲ್ಲಿಂದ ಆರ್‌ಸಿಬಿ ತಂಡಕ್ಕೆ ಸಾಲು ಸಾಲು ಆಘಾತ ಎದುರಾಗಿತ್ತು.

ಗ್ಲೆನ್ ಮ್ಯಾಕ್ಸ್‌ವೆಲ್ ಹೀನಾಯ ಔಟ್!
ಫಾಫ್ ಡುಪ್ಲೇಸಿಸ್ 35 ರನ್‌ಗೆ ಔಟ್ ಆದ ಬಳಿಕ ಇಬ್ಬರು ಆಟಗಾರರು ಸೊನ್ನೆ ಸುತ್ತಿದರು. ರಜತ್ ಪಾಟಿದಾರ್ & ಗ್ಲೆನ್ ಮ್ಯಾಕ್ಸ್‌ವೆಲ್ ಹೀನಾಯವಾಗಿ ಔಟ್ ಆಗಿ ಪೆವಿಲಿಯನ್ ಸೇರಿ, ಆರ್‌ಸಿಬಿ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದರು. ಆ ನಂತರ ಬಂದ ಕ್ಯಾಮೆರೂನ್ ಗ್ರೀನ್ ಅವರು ವಿರಾಟ್ ಕೊಹ್ಲಿ ಜೊತೆಗೆ ಸೇರಿ ಆರ್‌ಸಿಬಿ ತಂಡಕ್ಕೆ ಒಂದಷ್ಟು ಆತ್ಮಸ್ತೈರ್ಯ ತುಂಬುವ ಆಟವನ್ನ ಆಡಿದರು. ಆದ್ರೆ 11.2 ಓವರ್ ಆಗಿದ್ದಾಗ ವಿರಾಟ್ ಕೊಹ್ಲಿ ಮುಸ್ತಫಿಜುರ್ ರೆಹಮಾನ್ ಅವರ ಬೌಲಿಂಗ್‌ಗೆ ಶರಣಾಗಿ 21 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ನಂತರವೆ ಕೇವಲ 1 ರನ್ ಅಂತರದಲ್ಲಿ ಕ್ಯಾಮೆರೂನ್ ಗ್ರೀನ್ ಕೂಡ ಔಟಾಗಿ ಹೊರನಡೆದರು.
ಚೇತರಿಕೆ ನೀಡಿದ ರಾವತ್ & ಕಾರ್ತಿಕ್!
78 ರನ್ ಆಗಿದ್ದಾಗ 5 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು ಆರ್‌ಸಿಬಿ ಟೀಂ. ಹೀಗಿದ್ದಾಗಲೇ ಅನುಜ್ ರಾವತ್ ಮತ್ತು ದಿನೇಶ್ ಕಾರ್ತಿಕ್ 6ನೇ ವಿಕೆಟ್‌ಗೆ ಒಂದಾಗಿ ಸಖತ್ ಆಟ ಪ್ರದರ್ಶನ ಮಾಡಿದರು. ಈ ಇಬ್ಬರೂ ಆಟಗಾರರು ಸೇರಿ ಭರ್ಜರಿ 95 ರನ್ ಜೊತೆಯಾಟ ನೀಡಿದರು. ಕೇವಲ 52 ಬಾಲ್ ಆಡಿದ ಅನುಜ್ ರಾವತ್ ಮತ್ತು ದಿನೇಶ್ ಕಾರ್ತಿಕ್ ಸಖತ್ ರನ್ ಕದ್ದರು. ಈ ಮೂಲಕ ಆರ್‌ಸಿಬಿ ತಂಡವು 173 ರನ್ ಗಳಿಸಲು ನೆರವಾದರು. ಹೀಗೆ, ಆರ್‌ಸಿಬಿ ತಂಡ ಎದ್ದೂ ಬಿದ್ದು ಇಷ್ಟು ರನ್ ಗಳಿಸಿದರೂ ಗೆಲ್ಲುವುದು ಮಾತ್ರ ಸುಲಭ ಏನಲ್ಲ. ಹೀಗಾಗಿ ಆರ್‌ಸಿಬಿ ಬೌಲಿಂಗ್ ಪಡೆ ಕೂಡ ಈಗ ಕಷ್ಟಪಡಬೇಕಿದೆ.

200ಕ್ಕೂ ಹೆಚ್ಚು ರನ್ ಬೇಕಿತ್ತಾ?
ಚೆನ್ನೈ ಸೂಪರ್ ಕಿಂಗ್ಸ್ ತಂಡ ಬೌಲಿಂಗ್ ಮಾತ್ರವಲ್ಲ, ಬ್ಯಾಟಿಂಗ್ ವಿಭಾಗದಲ್ಲೂ ಸಖತ್ ಗಟ್ಟಿಯಾಗಿದೆ. ಹೀಗಾಗಿ ಆರ್‌ಸಿಬಿ ತಂಡ ಇದೀಗ ಚೆನ್ನೈ ತಂಡದ ವಿರುದ್ಧ ಗೆಲುವು ಸಾಧಿಸಿ ಮೊದಲ ಪಂದ್ಯದಲ್ಲೇ ವಿಜಯ ಪತಾಕೆ ಹಾರಿಸಲು ಕನಿಷ್ಠ ಅಂದ್ರೂ 200ಕ್ಕೂ ಹೆಚ್ಚು ರನ್ ಬೇಕಿತ್ತು. ಇಲ್ಲವಾದರೆ ಚೆನ್ನೈ ತಂಡ ಸುಲಭವಾಗಿ ಆರ್‌ಸಿಬಿ ಕೊಡುವ ಗುರಿಯನ್ನು ಬೆನ್ನತ್ತಿ, ಗೆಲುವು ಸಾಧಿಸುತ್ತದೆ ಎಂಬ ಮಾತು ಓಡಾಡಿವೆ. ಹೀಗಿದ್ದಾಗಲೇ ಆರ್‌ಸಿಬಿ ತಂಡ 200ಕ್ಕೂ ಹೆಚ್ಚು ರನ್ ಬಿಡಿ 200 ರನ್ ಗಡಿಯನ್ನು ಕೂಡ ತಲುಪಲು ಆಗಿಲ್ಲ. ಹೀಗಾಗಿ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ ಈ ಪಂದ್ಯ.












Click it and Unblock the Notifications