IPL 2024: ಮುಂಬೈ ಇಂಡಿಯನ್ಸ್ ಬಿಟ್ಟು ಆರ್ಸಿಬಿ ಸೇರ್ತಾರ ಬುಮ್ರಾ? ಮೌನವೇ ಉತ್ತರ ಎಂದ ವೇಗಿ!
2024ರ ಐಪಿಎಲ್ ಹರಾಜಿಗೆ ಮುನ್ನ ಭಾರಿ ಹೈಡ್ರಾಮ ನಡೆಯುತ್ತಿದೆ. ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ಐಪಿಎಲ್ ಫ್ರಾಂಚೈಸಿಗಳು ಪ್ರಕಟಿಸಿವೆ. ಆದರೂ, ಐಪಿಎಲ್ ಟ್ರೇಡಿಂಗ್‌ಗೆ ಡಿಸೆಂಬರ್ 12ರವರೆಗೆ ಅವಕಾಶ ನೀಡಲಾಗಿದೆ. ಈಗ ಬುಮ್ರಾ ಅವರ ಇನ್‌ಸ್ಟಾಗ್ರಾಂ ಪೋಸ್ಟ್ ಭಾರಿ ವೈರಲ್ ಆಗಿದ್ದು ಚರ್ಚೆ ಹುಟ್ಟುಹಾಕಿದೆ.
ಐಪಿಎಲ್ ಟ್ರೇಡಿಂಗ್ ಮುಖಾಂತರ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ ಮುಂಬೈ ಇಂಡಿಯನ್ಸ್‌ನಿಂದ ಆರ್ಸಿಬಿ ತಂಡ ಸೇರಿದ್ದಾರೆ. ಇದು ಐಪಿಎಲ್ ಇತಿಹಾಸದ ದುಬಾರಿ ಟ್ರೇಡಿಂಗ್ ಎಂದು ಹೇಳಲಾಗಿದೆ. 17.5 ಕೋಟಿ ರೂಪಾಯಿ ನೀಡಿ ಆರ್ಸಿಬಿ ಅವರನ್ನು ಟ್ರೇಡಿಂಗ್ ಮಾಡಿದೆ. 2023ರ ಹರಾಜಿನಲ್ಲಿ ಮುಂಬೈ ಗ್ರೀನ್ ಅವರನ್ನು ಇಷ್ಟೇ ಹಣ ನೀಡಿ ಖರೀದಿ ಮಾಡಿತ್ತು.

ಜಸ್ಪ್ರೀತ್ ಬುಮ್ರಾಗೆ ಅಸಮಾಧಾನ?
ಹಾರ್ದಿಕ್ ಪಾಂಡ್ಯ ವಾಪಸ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ್ದಾರೆ. ಆರಂಭದಿಂದ ಅವರು ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು, ನಂತರ 2022ರಲ್ಲಿ ಗುಜರಾತ್ ಟೈಟನ್ಸ್ ತಂಡಕ್ಕೆ ಸೇರಿದ್ದು, ನಾಯಕರಾಗಿ ಮೊದಲ ಆವೃತ್ತಿಯಲ್ಲೇ ಚಾಂಪಿಯನ್ ಆಗಿದ್ದರು, 2023ರ ಐಪಿಎಲ್‌ನಲ್ಲಿ ಕೂಡ ಗುಜರಾತ್ ಟೈಟನ್ಸ್ ಫೈನಲ್‌ನಲ್ಲಿ ಸೋತು ರನ್ನರ್ ಅಪ್ ಆಗಿತ್ತು. ಯಶಸ್ವಿಯಾಗಿ ಎರಡು ವರ್ಷ ತಂಡವನ್ನು ಮುನ್ನಡೆಸಿದ ಪಾಂಡ್ಯ ಈಗ ಮುಂಬೈಗೆ ಮರಳಿದ್ದಾರೆ.
ಇನ್ನು ಕೆಲವು ಮೂಲಗಳ ಪ್ರಕಾರ, ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಲಿದ್ದಾರೆ. ಸಚಿನ್ ತೆಂಡೂಲ್ಕರ್ ಬಳಿಕ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದರು, ಈಗ ರೋಹಿತ್ ಬಳಿಕ ಪಾಂಡ್ಯ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಇದೇ ವಿಚಾರ ಈಗ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಸಿಟ್ಟಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ. ಅವರು ಇನ್‌ಸ್ಟಾಗ್ರಾಂನಲ್ಲಿ "ಮೌನವು ಕೆಲವೊಮ್ಮೆ ಉತ್ತಮ ಉತ್ತರವಾಗಿದೆ" ಎಂದು ಸ್ಟೋರಿ ಹಾಕುವ ಮೂಲಕ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದಾರೆ.
ಕೆಲವು ಮೂಲಗಳ ಪ್ರಕಾರ, ರೋಹಿತ್ ಶರ್ಮಾ ಬಳಿಕ ಬುಮ್ರಾ ಅವರಿಗೆ ನಾಯಕತ್ವ ನೀಡುವುದಾಗಿ ಫ್ರಾಂಚೈಸಿ ಹೇಳಿತ್ತು ಎನ್ನಲಾಗಿದೆ. ಆದರೆ ಈಗ ಪಾಂಡ್ಯ ತಂಡಕ್ಕೆ ಸೇರ್ಪಡೆಯಾಗುವ ಮೂಲಕ ಬುಮ್ರಾ ನಾಯಕನಾಗುವ ಅವಕಾಶ ಕೈತಪ್ಪಿದೆ, ಇದರಿಂದ ಬುಮ್ರಾ ಬೇಸರಗೊಂಡಿದ್ದಾರೆ, ಅದಕ್ಕೆ ಈ ರೀತಿ ಪೋಸ್ಟ್ ಹಾಕಿದ್ದಾರೆ ಎಂದು ಹೇಳಲಾಗಿದೆ.
ಇನ್ನು ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೋಲಿನ ಬಗ್ಗೆ ಈ ರೀತಿ ಪೋಸ್ಟ್ ಹಾಕಿದ್ದಾರೆ ಎನ್ನುವ ವಾದಗಳು ಕೂಡ ಇವೆ. ಪೋಸ್ಟ್‌ನೊಂದಿಗೆ ಬುಮ್ರಾ ಏನು ಹೇಳಲು ಬಯಸುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಆರ್ಸಿಬಿ ಸೇರ್ತಾರ ಬುಮ್ರಾ?
ಇನ್ನೂ ಕೆಲವು ವರದಿಗಳ ಪ್ರಕಾರ, ಬುಮ್ರಾ ಮುಂಬೈ ಇಂಡಿಯನ್ಸ್ ತೊರೆಯಲಿದ್ದಾರೆ ಎನ್ನಲಾಗುತ್ತಿದೆ. ಗುಜರಾತ್ ಟೈಟನ್ಸ್ ಬುಮ್ರಾ ಅವರನ್ನು ಟ್ರೇಡ್ ಮೂಲಕ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ಹೊಂದಿದೆ ಎನ್ನಲಾಗಿದೆ. ಇನ್ನೂ ಕೆಲವು ಅಭಿಮಾನಿಗಳು ಆರ್ಸಿಬಿ ಟ್ರೇಡ್ ಮೂಲಕ ಬುಮ್ರಾರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಒಟ್ಟಾರೆ ಈ ಬಾರಿ ಐಪಿಎಲ್ ಹರಾಜಿಗೆ ಮುನ್ನವೇ ಸಾಕಷ್ಟು ಹೈಡ್ರಾಮ ನಡೆಯುತ್ತಿದ್ದು, ಡಿಸೆಂಬರ್ 12ರವರೆಗೂ ತಂಡದಲ್ಲಿ ಬದಲಾವಣೆಗೆ ಅವಕಾಶ ನೀಡಲಾಗಿದೆ. ಮತ್ತಷ್ಟು ಆಟಗಾರರು ತಂಡಗಳನ್ನು ಬದಲಾವಣೆ ಮಾಡಿದರೂ ಅಚ್ಚರಿ ಪಡುವಂತಿಲ್ಲ.












Click it and Unblock the Notifications