IML T20 Ind vs WI: ಐಎಂಎಲ್ ಟಿ20 ಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ಸೋಲಿಸಿ ಚಾಂಪಿಯನ್ ಆದ ಭಾರತ
ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ ಟಿ20 2025ರ ಫೈನಲ್ ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ್ದು ಪ್ರಶಸ್ತಿ ಗೆದ್ದುಕೊಂಡಿದೆ. ಸಚಿನ್ ನಾಯಕತ್ವದ ಇಂಡಿಯಾ ಮಾಸ್ಟರ್ಸ್ ಫೈನಲ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ವೆಸ್ಟ್ ಇಂಡೀಸ್ ಮಾಸ್ಟರ್ಸ್ ವಿರುದ್ಧ ಸುಲಭ ಗೆಲುವು ಸಾಧಿಸಿತು.
ರಾಯ್‌ಪುರದ ಶಹೀದ್ ವೀರ್ ನಾರಾಯಾಣ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಸ್ ಇಂಡೀಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಇಂಡಿಯಾ ಮಾಸ್ಟರ್ಸ್ ಶಿಸ್ತಿನ ಬೌಲಿಂಗ್ ದಾಳಿಗೆ ಸಿಲುಕಿದ ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 148 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು.

ಡ್ವೇನ್ ಸ್ಮಿತ್ 45 ರನ್ ಗಳಿಸಿದರೆ, ಲೆಂಡಲ್ ಸಿಮನ್ಸ್ 57 ರನ್ ಗಳಿಸುವ ಮೂಲಕ ವೆಸ್ಟ್ ಇಂಡೀಸ್ ಸಾಧಾರಣ ಮೊತ್ತ ಕಲೆಹಾಕಲು ನೆರವಾದರು. ಭಾರತದ ಪರವಾಗಿ ವಿನಯ್ ಕುಮಾರ್ 3 ವಿಕೆಟ್ ಪಡೆದು ಮಿಂಚಿದರೆ, ಶಹಬಾಜ್ ನದೀಮ್ 2 ವಿಕೆಟ್ ಪಡೆದರು. ಪವನ್ ನೇಗಿ ಮತ್ತು ಸ್ಟುವರ್ಟ್ ಬಿನ್ನಿ ತಲಾ ಒಂದು ವಿಕೆಟ್ ಪಡೆದರು.
ಅಂಬಾಟಿ ರಾಯುಡು ಅರ್ಧಶತಕ
ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಇಂಡಿಯಾ ಮಾಸ್ಟರ್ಸ್ 17.1 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 149 ರನ್ ಗಳಿಸುವ ಮೂಲಕ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಅಂಬಾಟಿ ರಾಯುಡು 50 ಎಸೆತಗಳಲ್ಲಿ 9 ಬೌಂಡರಿ 3 ಸಿಕ್ಸರ್ ಸಹಿತ 74 ರನ್ ಗಳಿಸಿದರು. ನಾಯಕ ಸಚಿನ್ ತೆಂಡೂಲ್ಕರ್ 18 ಎಸೆತಗಳಲ್ಲಿ 25 ರನ್ ಗಳಿಸಿದರು.
ಗುರುಕೀರತ್ ಸಿಂಗ್ ಮನ್ 14 ರನ್, ಯುವರಾಜ್ ಸಿಂಗ್ ಅಜೇಯ 13 ರನ್ ಗಳಿಸಿದರು, ಸ್ಟುವರ್ಟ್ ಬಿನ್ನಿ 9 ಎಸೆತಗಳಲ್ಲಿ 2 ಸಿಕ್ಸರ್ ಸಹಿತ ಅಜೇಯ 16 ರನ್ ಗಳಿಸುವ ಮೂಲಕ ಸುಲಭ ಗೆಲುವು ತಂದುಕೊಟ್ಟರು.
ಫೈನಲ್ ಪಂದ್ಯ ವೀಕ್ಷಿಸಲು ಇಡೀ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಸಚಿನ್ ತೆಂಡೂಲ್ಕರ್ ಅವರ ಸೊಗಸಾದ ಬ್ಯಾಟಿಂಗ್‌ಗೆ ಅಭಿಮಾನಿಗಳು ಮನಸೋತರು. ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕೂಡ ಈ ಪಂದ್ಯವನ್ನು ಕಣ್ತುಂಬಿಕೊಂಡರು.
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಇಂಡಿಯಾ ಮಾಸ್ಟರ್ಸ್: ಅಂಬಟಿ ರಾಯುಡು (ವಿಕೆಟ್ ಕೀಪರ್), ಸಚಿನ್ ತೆಂಡೂಲ್ಕರ್ (ನಾಯಕ), ಪವನ್ ನೇಗಿ, ಯುವರಾಜ್ ಸಿಂಗ್, ಸ್ಟುವರ್ಟ್ ಬಿನ್ನಿ, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಗುರುಕೀರತ್ ಸಿಂಗ್ ಮಾನ್, ವಿನಯ್ ಕುಮಾರ್, ಶಹಬಾಜ್ ನದೀಮ್, ಧವಲ್ ಕುಲಕರ್ಣಿ.
ವೆಸ್ಟ್ ಇಂಡೀಸ್ ಮಾಸ್ಟರ್ಸ್: ಡ್ವೇನ್ ಸ್ಮಿತ್, ವಿಲಿಯಂ ಪರ್ಕಿನ್ಸ್, ಲೆಂಡ್ಲ್ ಸಿಮನ್ಸ್, ಬ್ರಿಯಾನ್ ಲಾರಾ(ನಾಯಕ), ಚಾಡ್ವಿಕ್ ವಾಲ್ಟನ್, ದಿನೇಶ್ ರಾಮ್ದಿನ್ (ವಿಕೆಟ್ ಕೀಪರ್), ಆಶ್ಲೇ ನರ್ಸ್, ಟಿನೋ ಬೆಸ್ಟ್, ಜೆರೋಮ್ ಟೇಲರ್, ಸುಲೈಮಾನ್ ಬೆನ್, ರವಿ ರಾಂಪಾಲ್.












Click it and Unblock the Notifications