U19 World Cup: ವಿಶ್ವಕಪ್ ಫೈನಲ್‌ನಲ್ಲಿ ಭಾರತ-ಆಸ್ಟ್ರೇಲಿಯಾ ಸೆಣೆಸು: ನೇರಪ್ರಸಾರ, ಸಮಯ, ಪಿಚ್ ವರದಿ
ದಕ್ಷಿಣ ಆಫ್ರಿಕಾದ ಬೆನೊನಿಯಲ್ಲಿರುವ ಸಹಾರಾ ಪಾರ್ಕ್ ವಿಲ್ಲೊಮೂರ್ ಕ್ರಿಕೆಟ್ ಸ್ಟೇಡಿಯಂನಲ್ಲಿ 2024 ರ ಅಂಡರ್-19 ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಭಾನುವಾರ, ಫೆಬ್ರವರಿ 11 ರಂದು ಈ ಪಂದ್ಯ ನಡೆಯಲಿದೆ.
ಭಾರತವು ತಮ್ಮ ದಾಖಲೆಯ ಆರನೇ ಅಂಡರ್ 19 ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವ ಗುರಿಯನ್ನು ಹೊಂದಿದೆ. 2000, 2008, 2012, 2018 ಮತ್ತು 2022ರಲ್ಲಿ ಜಯಗಳಿಸುವ ಮೂಲಕ ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ತಂಡ ಎನಿಸಿಕೊಂಡಿದೆ.

ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ಅಜೇಯವಾಗಿ ಫೈನಲ್‌ಗೆ ಬಂದಿವೆ. ಆದಾಗ್ಯೂ, ಸೂಪರ್-6 ಹಂತದಲ್ಲಿ ವೆಸ್ಟ್ ಇಂಡೀಸ್-ಆಸ್ಟ್ರೇಲಿಯಾ ಪಂದ್ಯ ಫಲಿತಾಂಶವಿಲ್ಲದೆ ಕೊನೆಯಾಗಿತ್ತು. ಆದರೆ, ಭಾರತ ಆಡಿರುವ ಎಲ್ಲಾ ಪಂದ್ಯಗಳನ್ನು ಗೆದ್ದಿದೆ.
2024 ರ ಅಂಡರ್ 19 ವಿಶ್ವಕಪ್ ಫೈನಲ್‌ಗೆ ಭಾರತ ಅಮೋಘ ಪ್ರದರ್ಶನ ನೀಡುವ ಮೂಲಕ ಅರ್ಹತೆ ಪಡೆದುಕೊಂಡಿದೆ. ಬಾಂಗ್ಲಾದೇಶದ ವಿರುದ್ಧ 84 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ, ನಂತರ ಐರ್ಲೆಂಡ್ ವಿರುದ್ಧ 201 ರನ್‌ಗಳಿಂದ ಭಾರಿ ಗೆಲುವು ಸಾಧಿಸಿತ್ತು. ಯುಎಸ್‌ಎ ವಿರುದ್ಧ 201 ರನ್‌ಗಳಿಂದ ಗೆದ್ದ ಭಾರತ ಸೂಪರ್ ಸಿಕ್ಸ್‌ನಲ್ಲಿ ನ್ಯೂಜಿಲೆಂಡ್ ಅನ್ನು 214 ರನ್‌ಗಳಿಂದ ಮತ್ತು ನೇಪಾಳವನ್ನು 132 ರನ್‌ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿತು. ದಕ್ಷಿಣ ಆಫ್ರಿಕಾ ವಿರುದ್ಧದ ಅವರ ಸೆಮಿ-ಫೈನಲ್ ಪಂದ್ಯದಲ್ಲಿ ಎರಡು ವಿಕೆಟ್‌ಗಳ ರೋಚಕ ಗೆಲುವ ಸಾಧಿಸುವ ಮೂಲಕ ಸತತ 9ನೇ ಬಾರಿಗೆ ಫೈನಲ್ ಪ್ರವೇಸಿದೆ.
ಅಪಾಯಕಾರಿ ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ಕೂಡ ಆಡಿರುವ ಎಲ್ಲಾ ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಒಂದು ವಿಕೆಟ್‌ನ ರೋಚಕ ಗೆಲುವು ಸಾಧಿಸಿರುವ ಆಸ್ಟ್ರೇಲಿಯಾ ಐದನೇ ಬಾರಿಗೆ ಅಂಡರ್ 19 ಫೈನಲ್ ಪ್ರವೇಶಿಸಿದ್ದು, ನಾಲ್ಕನೇ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ.
ಪಿಚ್ ವರದಿ
ಬೆನೋನಿಯಲ್ಲಿರುವ ಸಹಾರಾ ಪಾರ್ಕ್ ವಿಲೋಮೂರ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಇದೇ ಅಂಗಳದಲ್ಲಿ ಆಸ್ಟ್ರೇಲಿಯಾ - ಪಾಕಿಸ್ತಾನ ಸೆಮಿಫೈನಲ್ ಪಂದ್ಯ ನಡೆದಿತ್ತು. ವೇಗಿಗಳಿಗೆ ಈ ಪಿಚ್ ಸಹಕಾರಿಯಾಗಿದ್ದು, ಬ್ಯಾಟರ್ ರನ್ ಗಳಿಸುವುದು ಸವಾಲಾಗಲಿದೆ.
ಪಂದ್ಯದ ಸಮಯ, ನೇರಪ್ರಸಾರ
ಅಂಡರ್19 ವಿಶ್ವಕಪ್ ಫೈನಲ್ ಭಾನುವಾರ, ಫೆಬ್ರವರಿ 11 ರಂದು ನಡೆಯಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ ಪಂದ್ಯ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮೂಲಕ ಟಿವಿಯಲ್ಲಿ ಪಂದ್ಯದ ನೇರಪ್ರಸಾರ ವೀಕ್ಷಣೆ ಮಾಡಬಹುದು. ಮೊಬೈಲ್‌ನಲ್ಲಿ ಪಂದ್ಯ ನೋಡುವವರು ಹಾಟ್‌ಸ್ಟಾರ್ ನಲ್ಲಿ ನೇರಪ್ರಸಾರವನ್ನು ವೀಕ್ಷಿಸಬಹುದು.












Click it and Unblock the Notifications