Ind vs WI: ಕನ್ನಡಿಗನ ಮಾರಕ ಬೌಲಿಂಗ್; ಭಾರತಕ್ಕೆ ಸಾಧಾರಣ ಗುರಿ ನೀಡಿದ ವೆಸ್ಟ್ ಇಂಡೀಸ್
ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ ಟಿ20 2025ರ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಬ್ಯಾಟಿಂಗ್ ಮಾಡಿದ್ದು 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 148 ರನ್ ಕಲೆಹಾಕಿದೆ.
ದಿಗ್ಗಜರ ಆಟವನ್ನು ನೋಡಲು ಮೈದಾನದಲ್ಲಿ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದು ಸಚಿನ್, ಬ್ರಿಯಾನ್ ಲಾರಾ, ವಿನಯ್ ಕುಮಾರ್, ಯೂಸುಫ್ ಪಠಾಣ್ ಸೇರಿದಂತೆ ಹಲವು ಹಿರಿಯ ಆಟಗಾರರ ಆಟವನ್ನು ಕಣ್ತುಂಬಿಕೊಟ್ಟರು. ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು, ಆದರೆ ಇಂಡಿಯಾ ಮಾಸ್ಟರ್ಸ್ ಶಿಸ್ತಿನ ಬೌಲಿಂಗ್ ದಾಳಿ ಎದುರು ದೊಡ್ಡ ಮೊತ್ತ ಕಲೆಹಾಕಲು ವಿಫಲವಾಯಿತು.

ಡ್ವಾನೆ ಸ್ಮಿತ್ 35 ಎಸೆತಗಳಲ್ಲಿ 45 ರನ್ ಗಳಿಸಿದರೆ, ಲೆಂಡಲ್ ಸಿಮನ್ಸ್ 41 ಎಸೆತಗಳಲ್ಲಿ 57 ರನ್ ಗಳಿಸಿದರು. ಇವರಿಬ್ಬರನ್ನು ಹೊರತುಪಡಿಸಿ ಉಳಿದ ಆಟಗಾರರಿಂದ ದೊಡ್ಡ ಸ್ಕೋರ್ ಬರಲಿಲ್ಲ. ಕನ್ನಡಿಗ ವಿನಯ್ ಕುಮಾರ್ 3 ಓವರ್ ಗಳಲ್ಲಿ 26 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದರು. ಶಹಬಾಜ್ ನದೀಮ್ 4 ಓವರ್ ಗಳಲ್ಲಿ ಕೇವಲ 12 ರನ್ ನೀಡಿ 2 ವಿಕೆಟ್ ಪಡೆದುಕೊಂಡರು. ಪವನ್ ನೇಗಿ ಮತ್ತು ಸ್ಟುವರ್ಟ್ ಬಿನ್ನಿ ತಲಾ ಒಂದು ವಿಕೆಟ್ ಪಡೆದರು.
ದಿಗ್ಗಜರ ಸಮಾಗಮ
ಇಂಡಿಯಾ ಮಾಸ್ಟರ್ಸ್ ಲೀಗ್‌ನ ಆಯುಕ್ತರೂ ಆಗಿರುವ ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಫೈನಲ್ ಪಂದ್ಯಕ್ಕೆ ಮುನ್ನ ಎಲ್ಲಾ ಆಟಗಾರರನ್ನು ಭೇಡಿ ಮಾಡಿದರು. ಪಂದ್ಯ ಆರಂಭಕ್ಕೆ ಮೊದಲು ಆಟಗಾರರು ರಾಷ್ಟ್ರಗೀತೆಗೆ ಧ್ವನಿಯಾದರು. ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ ಅವರಂತಹ ಶ್ರೇಷ್ಠ ಆಟಗಾರರನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಕೂಡ ಖುಷಿಪಟ್ಟರು.
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಇಂಡಿಯಾ ಮಾಸ್ಟರ್ಸ್: ಅಂಬಟಿ ರಾಯುಡು (ವಿಕೆಟ್ ಕೀಪರ್), ಸಚಿನ್ ತೆಂಡೂಲ್ಕರ್ (ನಾಯಕ), ಪವನ್ ನೇಗಿ, ಯುವರಾಜ್ ಸಿಂಗ್, ಸ್ಟುವರ್ಟ್ ಬಿನ್ನಿ, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಗುರುಕೀರತ್ ಸಿಂಗ್ ಮಾನ್, ವಿನಯ್ ಕುಮಾರ್, ಶಹಬಾಜ್ ನದೀಮ್, ಧವಲ್ ಕುಲಕರ್ಣಿ.
ವೆಸ್ಟ್ ಇಂಡೀಸ್ ಮಾಸ್ಟರ್ಸ್: ಡ್ವೇನ್ ಸ್ಮಿತ್, ವಿಲಿಯಂ ಪರ್ಕಿನ್ಸ್, ಲೆಂಡ್ಲ್ ಸಿಮನ್ಸ್, ಬ್ರಿಯಾನ್ ಲಾರಾ(ನಾಯಕ), ಚಾಡ್ವಿಕ್ ವಾಲ್ಟನ್, ದಿನೇಶ್ ರಾಮ್ದಿನ್ (ವಿಕೆಟ್ ಕೀಪರ್), ಆಶ್ಲೇ ನರ್ಸ್, ಟಿನೋ ಬೆಸ್ಟ್, ಜೆರೋಮ್ ಟೇಲರ್, ಸುಲೈಮಾನ್ ಬೆನ್, ರವಿ ರಾಂಪಾಲ್.












Click it and Unblock the Notifications