IND vs AUS : ಮೂರನೇ ಏಕದಿನ ಪಂದ್ಯದಿಂದ ಶುಭಮನ್ ಗಿಲ್, ಶಾರ್ದೂಲ್ ಹೊರಕ್ಕೆ!
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಭಾರತ ತಂಡ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಇನ್ನೂ ಪಂದ್ಯ ಬಾಕಿ ಇರುವಂತೆ ಸರಣಿಯನ್ನು ಗೆದ್ದುಕೊಂಡಿದೆ. ಎರಡೂ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಶುಭಮನ್ ಗಿಲ್ ಮೂರನೇ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ.
ಶುಭಮನ್ ಗಿಲ್ ಮತ್ತು ಶಾರ್ದೂಲ್ ಠಾಕೂರ್ ಇಬ್ಬರಿಗೂ ಮೂರನೇ ಏಕದಿನ ಪಂದ್ಯದಿಂದ ವಿಶ್ರಾಂತಿ ನೀಡಿದ್ದು, ಇಬ್ಬರೂ ರಾಜ್‌ಕೋಟ್‌ಗೆ ಪ್ರಯಾಣಿಸುತ್ತಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಮುಗಿದ ಬಳಿಕ ಭಾರತ ತಂಡ ಗುವಾಹಟಿಗೆ ಪ್ರಯಾಣಿಸಲಿದ್ದು, ಅಲ್ಲಿ ಇಬ್ಬರೂ ಭಾರತ ತಂಡವನ್ನು ಸೇರಿಕೊಳ್ಳುತ್ತಾರೆ. ಭಾರತ ಗುವಾಹಟಿಯಲ್ಲಿ ಏಕದಿನ ವಿಶ್ವಕಪ್ ಅಭ್ಯಾಸ ಪಂದ್ಯವನ್ನು ಆಡಲಿದೆ.

ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಶುಭಮನ್ ಗಿಲ್ ಭರ್ಜರಿ ಶತಕ ಗಳಿಸಿ ಮಿಂಚಿದರು. 2023ರಲ್ಲಿ ಇದು ಶುಭಮನ್ ಗಿಲ್ ಅವರ ಐದನೇ ಶತಕವಾಗಿದ್ದು, ಈವರೆಗೆ ಒಟ್ಟು ಆರು ಶತಕ ಬಾರಿಸಿ ಮಿಂಚಿದ್ದಾರೆ. ಈ ವರ್ಷ ನ್ಯೂಜಿಲೆಂಡ್ ವಿರುದ್ಧ ಎರಡು ಶತಕ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ತಲಾ ಒಂದು ಶತಕವನ್ನು ಗಳಿಸಿದ್ದಾರೆ.
2023ರಲ್ಲಿ ಒಟ್ಟು 20 ಇನ್ನಿಂಗ್ಸ್‌ಗಳಲ್ಲಿ 72.35 ಸರಾಸರಿಯಲ್ಲಿ ಮತ್ತು 105.03 ಸ್ಟ್ರೈಕ್ ರೇಟ್‌ನಲ್ಲಿ 1230 ರನ್ ಗಳಿಸಿದ್ದು ಈ ವರ್ಷ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಬಿಡುವು ಸಿಗದ ಕಾರಣ ಗಿಲ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಪ್ರಮುಖ ಆಟಗಾರರು ವಾಪಸ್
ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಪಂದ್ಯಗಳಿಂದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿತ್ತು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಜಸ್ಪ್ರಿತ್ ಬುಮ್ರಾ ಎರಡು ಪಂದ್ಯಗಳು ವಿಶ್ರಾಂತಿಯ ನಂತರ ಇಂದು (ಸೋಮವಾರ) ರಾಜ್‌ಕೋಟ್‌ನಲ್ಲಿ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ನಾಲ್ಕು ಆಟಗಾರರು ರಾಜ್‌ಕೋಟ್‌ನಲ್ಲಿ ಮೂರನೇ ಏಕದಿನ ಪಂದ್ಯದಲ್ಲಿ ಆಡುವುದು ಖಚಿತವಾಗಿದೆ.
ಈಗಾಗಲೇ ಭಾರತ ಸರಣಿಯನ್ನು ಗೆದ್ದಿರುವ ಕಾರಣ ಮೂರನೇ ಏಕದಿನ ಪಂದ್ಯದಲ್ಲಿ ಹಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ. ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲೂ ಭಾರತ ತಂಡ ಅದ್ಭುತ ಪ್ರದರ್ಶನ ನೀಡುವ ಮೂಲಕ ಸರಣಿ ಗೆದ್ದಿರುವುದು ತಂಡದ ವಿಶ್ವಾಸವನ್ನು ಹೆಚ್ಚಿಸಿದೆ. ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ ಫಾರ್ಮ್‌ಗೆ ಮರಳಿರುವುದು ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ.
ಕೆಎಲ್ ರಾಹುಲ್ ತಮ್ಮ ನಾಯಕತ್ವ ಸಾಬೀತುಪಡಿಸಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಬೌಲಿಂಗ್ ವಿಭಾಗ ಉತ್ತಮವಾಗಿ ಕೆಲಸ ಮಾಡಿದೆ. ಬುಮ್ರಾ, ಸಿರಾಜ್ ಇಲ್ಲದೆಯೂ ಆಸ್ಟ್ರೇಲಿಯಾದಂತ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿ ಹಾಕಿದೆ. ಅಶ್ವಿನ್ ಕೂಡ ಅದ್ಭುತ ಪ್ರದರ್ಶನ ನೀಡಿದ್ದು ವಿಶ್ವಕಪ್ ತಂಡಕ್ಕೆ ಬರುವ ನಿರೀಕ್ಷೆ ಹೆಚ್ಚಿಸಿದ್ದಾರೆ.
ರಾಜ್‌ಕೋಟ್‌ನಲ್ಲಿ ಕೂಡ ರನ್ ಹೊಳೆ ಹರಿಯುವ ನಿರೀಕ್ಷೆ ಇದೆ. ರೋಹಿತ್, ಕೊಹ್ಲಿ ಅಬ್ಬರಿಸಿದರೆ ಮತ್ತೊಂದು ದೊಡ್ಡ ಮೊತ್ತ ದಾಖಲಾಗುವುದು ನಿಶ್ಚಿತ. ರೋಹಿತ್, ಕೊಹ್ಲಿ, ಪಾಂಡ್ಯ ರನ್ ಮೂರನೇ ಏಕದಿನ ಪಂದ್ಯದಲ್ಲಿ ಹೆಚ್ಚು ರನ್ ಗಳಿಸಿದರೆ, ವಿಶ್ವಕಪ್ ಗೆಲ್ಲುವ ನಿರೀಕ್ಷೆ ಮತ್ತಷ್ಟು ಹೆಚ್ಚಾಗಲಿದೆ.












Click it and Unblock the Notifications