ಐರ್ಲೆಂಡ್ ಪ್ರವಾಸ: ಹಾರ್ದಿಕ್ ಪಾಂಡ್ಯ ಭಾರತ ತಂಡಕ್ಕೆ ನಾಯಕ
ಮುಂಬೈ, ಜೂನ್ 15: 2022 ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬರುವ ಐರ್ಲೆಂಡ್ ಪ್ರವಾಸದಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಬುಧವಾರ ಪ್ರವಾಸಕ್ಕೆ ಬಿಸಿಸಿಐ ತಂಡವನ್ನು ಘೋಷಿಸಿದ್ದು, ಇದರಲ್ಲಿ ಪಾಂಡ್ಯಗೆ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.
ಜೂನ್ 26 ಮತ್ತು 28ರಂದು ಐರ್ಲೆಂಡ್ ವಿರುದ್ಧ ಭಾರತ ತಂಡ 2 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ರೋಹಿತ್ ಶರ್ಮಾ ಇಂಗ್ಲೆಂಡ್ ಪ್ರವಾಸಕ್ಕಾಗಿ ತೆರಳಲಿದ್ದಾರೆ. ಉಪನಾಯಕ ಕೆಎಲ್ ರಾಹುಲ್ ನಾಯಕನಾಗಿ ಆಯ್ಕೆಯಾಗಬೇಕಿತ್ತು. ಆದರೆ ಈಗಾಗಲೇ ಅವರು ಗಾಯದ ಕಾರಣ ಭಾರತ ತಂಡದಿಂದ ಹೊರಗುಳಿದಿದ್ದಾರೆ. ಇನ್ನು ರಿಷಭ್ ಪಂತ್ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯವನ್ನಾಡಲು ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿದ್ದಾರೆ. ಹಾಗಾಗಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ಒಲಿದುಬಂದಿದೆ.
ರಾಹುಲ್ ತ್ರಿಪಾಠಿಗೆ ಮೊದಲ ಅವಕಾಶ; 15ನೇ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ರಾಹುಲ್ ತ್ರಿಪಾಠಿ ಇದೇ ಮೊದಲ ಬಾರಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ದಕ್ಷಿಣ ಅಫ್ರಿಕಾ ವಿರುದ್ಧದ ಸರಣಿಯಲ್ಲಿ ಅವಕಾಶ ಕಳೆದುಕೊಂಡಿದ್ದ ಸಂಜು ಸಾಮ್ಸನ್ ಮತ್ತು ಗಾಯದಿಂದ ಹೊರಬಿದ್ದಿದ್ದ ಸೂರ್ಯಕುಮಾರ್ ಯಾದವ್ ಕಮ್‌ಬ್ಯಾಕ್ ಮಾಡಿದ್ದಾರೆ.

ಐರ್ಲೆಂಡ್ ಪ್ರವಾಸಕ್ಕೆ ಭಾರತ ತಂಡ; ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪನಾಯಕ), ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಯುಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್

ದಕ್ಷಿಣ ಆಫ್ರಿಕಾ ವಿರುದ್ಧ 1-2ರಲ್ಲಿ ಹಿನ್ನಡೆ; ಪ್ರಸ್ತುತ ದಿಗ್ಗಜರ ಅನುಪಸ್ಥಿತಿಯಲ್ಲಿ ತವರಿನಲ್ಲಿ ನಡೆಯುತ್ತಿರುವ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-2ರಲ್ಲಿ ಹಿನ್ನಡೆ ಅನುಭವಿಸಿದೆ. ಮೊದಲ ಪಂದ್ಯದಲ್ಲಿ 212 ರನ್‌ಗಳಿಸಿದರೂ ಕಳಪೆ ಬೌಲಿಂಗ್ ಪ್ರದರ್ಶನದಿಂದ ಸೋಲು ಕಂಡರೆ, ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವೈಫಲ್ಯದಿಂದ ಸೋಲು ಕಂಡಿತ್ತು. ಆದರೆ ಮೂರನೇ ಪಂದ್ಯದಲ್ಲಿ ಅತ್ಯುತ್ತಮ ಕಮ್‌ಬ್ಯಾಕ್ ಮಾಡಿ, 48 ರನ್‌ಗಳ ಜಯ ಸಾಧಿಸಿ ಕಮ್‌ಬ್ಯಾಕ್ ಮಾಡಿದೆ. ಮುಂದಿನ ಶುಕ್ರವಾರ ಮತ್ತು ಭಾನುವಾರ ಉಳಿದ ಎರಡು ಪಂದ್ಯ ನಡೆಯಲಿವೆ. ಭಾರತ 4ನೇ ಪಂದ್ಯ ಗೆದ್ದರೆ ಭಾನುವಾರದ ಪಂದ್ಯ ಬಲು ರೋಚಕವಾಗಿರಲಿದೆ. ಅಲ್ಲದೆ ಪಂತ್ ಪಡೆಗೆ ಸರಣಿ ಗೆಲ್ಲುವ ಅವಕಾಶ ಕೂಡ ಇರಲಿದೆ.












Click it and Unblock the Notifications