Hardik Pandya: ಗುಜರಾತ್ ವಿರುದ್ಧ ಸೋಲು; ರೋಹಿತ್ ಶರ್ಮಾಗೆ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟ ಹಾರ್ದಿಕ್ ಪಾಂಡ್ಯ
ಐಪಿಎಲ್ 2024ರ ಆವೃತ್ತಿಯಲ್ಲಿ ಹೀನಾಯ ಪ್ರದರ್ಶನ ನೀಡುವ ಮೂಲಕ 10ನೇ ಸ್ಥಾನಕ್ಕೆ ಕುಸಿದಿದ್ದ ಮುಂಬೈ ಇಂಡಿಯನ್ಸ್ 2025ರ ಆವೃತ್ತಿಯಲ್ಲಿ ಕೂಡ ನೀರಸ ಪ್ರದರ್ಶನ ಮುಂದುವರೆಸಿದೆ. ಕಳೆದ ಆವೃತ್ತಿಯಲ್ಲಿ ಆಡಿದ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಮಾತ್ರ ಗೆದ್ದು 10 ಪಂದ್ಯಗಳಲ್ಲಿ ಸೋಲು ಕಂಡಿತ್ತು. ಈ ಆವೃತ್ತಿಯಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲೂ ಸೋಲು ಕಂಡಿದೆ.
ಶನಿವಾರ ಅಹಮದಾಬಾದ್‌ನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 36 ರನ್‌ಗಳಿಂದ ಸೋಲು ಕಂಡಿದೆ. ಅಹಮದಾಬಾದ್‌ನಲ್ಲಿ ಆಡಿರುವ ಎಲ್ಲಾ ಪಂದ್ಯಗಳಲ್ಲೂ ಗುಜರಾತ್ ಟೈಟಾನ್ಸ್ ವಿರುದ್ದ ಸೋತಿದ್ದು ತಂಡದ ಕೆಟ್ಟ ಪ್ರದರ್ಶನ ಮುಂದುವರೆದಿದೆ.

ನಿಷೇಧದಿಂದಾಗಿ ಮೊದಲ ಪಂದ್ಯದಲ್ಲಿ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ವಿರುದ್ಧ ವಾಪಸಾದರು. ನಾಯಕನಾಗಿ ಮಾಡಿದ ತಪ್ಪು ನಿರ್ಧಾರಗಳು ಸೋಲಿಗೆ ಪ್ರಮುಖ ಕಾರಣವಾದರು. ಬ್ಯಾಟಿಂಗ್ ನಲ್ಲಿ ಎಡವಿದ್ದು ಕೂಡ ತಂಡ ಸೋಲಲು ಮತ್ತೊಂದು ಕಾರಣವಾಯಿತು.
ಸಿಎಸ್‌ಕೆ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದ ವಿಘ್ನೇಶ್ ಪುತ್ತೂರ್, ಆಲ್‌ರೌಂಡರ್ ವಿಲ್ ಜ್ಯಾಕ್ಸ್‌ರನ್ನು ಕೈಬಿಟ್ಟಿದ್ದು ಅಚ್ಚರಿಗೆ ಕಾರಣವಾಯಿತು. ಪರಿಸ್ಥಿತಿಯ ಲಾಭ ಪಡೆದ ಗುಜರಾತ್ ಟೈಟಾನ್ಸ್ ಮುಂಬೈ ಇಂಡಿಯನ್ಸ್ ಮೇಲೆ ಒತ್ತಡ ಹೇರುವ ಮೂಲಕ ಗೆಲುವು ಸಾಧಿಸಿತು.
ರೋಹಿತ್‌ಗೆ ಹಾರ್ದಿಕ್ ವಾರ್ನಿಂಗ್
ಪಂದ್ಯದ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, "ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ನಾವು 15-20 ರನ್‌ಗಳ ಕೊರತೆಯನ್ನು ಹೊಂದಿದ್ದೇವೆ ಎನಿಸುತ್ತದೆ. ಮೈದಾನದಲ್ಲಿ ವೃತ್ತಿಪರ ಕ್ರಿಕೆಟಿಗರಂತೆ ಆಡಲಿಲ್ಲ, ಸಾಕಷ್ಟು ತಪ್ಪುಗಳನ್ನು ಮಾಡಿದೆವು, ಅದರಿಂದ 20-25 ರನ್ ಹೆಚ್ಚು ಬಿಟ್ಟುಕೊಟ್ಟೆವು. ಟಿ20 ಪಂದ್ಯದಲ್ಲಿ ಇದು ತುಂಬಾ ದೊಡ್ಡದು. ಗುಜರಾತ್ ಟೈಟಾನ್ಸ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಅಪಾಯಕಾರಿ ಹೊಡೆತಕ್ಕೆ ಮುಂದಾಗದೆ ರನ್ ಗಳಿಸಿದರು. ನಾವೆಲ್ಲರೂ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ." ಎಂದರು.
ಇದು ಇನ್ನೂ ಆರಂಭಿಕ ಹಂತ, ಬ್ಯಾಟರ್ ಗಳು ಉತ್ತಮ ಪ್ರದರ್ಶನ ನೀಡಬೇಕು. ಶೀಘ್ರದಲ್ಲೇ ಅದನ್ನು ಮಾಡುವ ವಿಶ್ವಾಸವಿದೆ. ಈ ವಿಕೆಟ್‌ನಲ್ಲಿ ನಿಧಾನಗತಿಯ ಎಸೆತಗಳನ್ನು ಹೊಡೆಯುವುದು ಕಷ್ಟವಾಗಿತ್ತು. ಕೆಲವರು ಬೌನ್ಸರ್ ಹಾಕಿದ್ದರು, ಅದು ಕೂಡ ಬ್ಯಾಟರ್ ಗಳಿಗೆ ಕಷ್ಟವಾಗುತ್ತದೆ ಎಂದರು.
ರೋಹಿತ್ ಶರ್ಮಾ ಬ್ಯಾಟಿಂಗ್‌ನಲ್ಲಿ ವಿಫಲವಾಗಿದ್ದಕ್ಕೆ ಹಾರ್ದಿಕ್ ಪಾಂಡ್ಯ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೋಹಿತ್ ಶರ್ಮಾ ಮೊದಲ ಪಂದ್ಯದಲ್ಲೂ ರನ್ ಗಳಿಸದೇ ಔಟಾದಗಿದ್ದರು, ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ 8 ರನ್‌ಗಳಿಗೆ ಔಟ್ ಆದರು.












Click it and Unblock the Notifications