GT Vs SRH: ತವರಿನಲ್ಲಿ ಗೆಲುವಿನ ಹಾದಿಗೆ ಮರಳಿದ ಗುಜರಾತ್ ಜೈಂಟ್ಸ್
ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹೀನಾಯ ಸೋಲು ಕಂಡಿದ್ದ ಗುಜರಾತ್ ಟೈಟಾನ್ಸ್ ತವರಿನಲ್ಲಿ ಮತ್ತೆ ಗೆಲುವಿನ ಹಾದಿಗೆ ಮರಳಿದೆ. ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಕಳೆದ ಪಂದ್ಯದಲ್ಲಿ ವಿಶ್ವದಾಖಖಲೆಯ ಮೊತ್ತ ಕಲೆಹಾಕಿದ್ದು ಹೈದರಾಬಾದ್ ತಂಡದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಗುಜರಾತ್ ಟೈಟಾನ್ಸ್ ಬೌಲರ್ ಗಳು ಕಟ್ಟಿಹಾಕಿದರು.

ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ 17 ಎಸೆತಗಳಲ್ಲಿ 16 ರನ್ ಗಳಿಸಿ ಔಟಾದರು. ಟ್ರಾವಿಸ್ ಹೆಡ್ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅಭಿಷೇಕ್ ಶರ್ಮಾ 29 ರನ್ ಮತ್ತು ಅಬ್ದುಲ್ ಸಮದ್ 29 ರನ್ ಗಳಿಸಿದ್ದೇ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಗಳಿಸಿ ಗರಿಷ್ಠ ರನ್ ಆಗಿದೆ.
ಅಂತಿಮವಾಗಿ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 162 ರನ್‌ಗಳನ್ನು ಕಲೆಹಾಕಿತು. ಮೋಹಿತ್ ಶರ್ಮಾ 4 ಓವರ್ ಗಳಲ್ಲಿ 25 ರನ್ ನೀಡಿ ಮೂರು ವಿಕೆಟ್ ಪಡೆದರು. ರಶೀದ್ ಖಾನ್, ನೂರ್ ಅಹ್ಮದ್, ಉಮೇಶ್ ಯಾದವ್, ಒಮರ್ಝಾಯ್ ತಲಾ ಒಂದು ವಿಕೆಟ್ ಪಡೆದರು.
ಗುಜರಾತ್‌ಗೆ ಸುಲಭ ಗೆಲುವು
ಸವಾಲಿನ ಗುರಿಯನ್ನು ಬೆನ್ನತ್ತಿದ್ದ ಗುಜರಾತ್ ಟೈಟಾನ್ಸ್ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ ಗಿಲ್ ಮತ್ತು ಸಾಹಾ ಜೋಡಿ 4.1 ಓವರ್ ಗಳಲ್ಲಿ 36 ರನ್ ಕಲೆಹಾಕಿದರು. ಸಾಹಾ 13 ಎಸೆತಗಳಲ್ಲಿ 25 ರನ್ ಗಳಿಸಿದರು.
ಶುಭಮನ್ ಗಿಲ್ 36 ರನ್ ಗಳಿಸಿದರು. ಸಾಯಿ ಸುದರ್ಶನ್ 36 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 45 ರನ್ ಗಳಿಸಿದರು. ಬಳಿಕ ಜೊತೆಯಾದ ಡೇವಿಡ್ ಮಿಲ್ಲರ್ ಮತ್ತು ವಿಜಯ್ ಶಂಕರ್ ತಂಡವನ್ನು ಗೆಲುವಿನ ದಡ ಸೇರಿಸಿದರು.
ಡೇವಿಡ್ ಮಿಲ್ಲರ್ 27 ಎಸೆತಗಳಲ್ಲಿ 4 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 44 ರನ್ ಗಳಿಸಿದರು. ವಿಜಯ್ ಶಂಕರ್ 11 ಎಸೆತಗಳಲ್ಲಿ ಅಜೇಯ 14 ರನ್ ಗಳಿಸಿದರು. ಆಡಿರುವ ಮೂರು ಪಂದ್ಯಗಳಲ್ಲಿ 2 ಪಂದ್ಯ ಗೆದ್ದಿರುವ ಗುಜರಾತ್ ಟೈಟಾನ್ಸ್ ಅಂಕಪಟ್ಟಿಯಲ್ಲಿ ಕೂಡ ಏರಿಕೆ ಕಂಡಿದೆ. 4 ಅಂಕಗಳೊಂದಿಗೆ ಸದ್ಯ 4 ನೇ ಸ್ಥಾನದಲ್ಲಿದೆ.












Click it and Unblock the Notifications