India vs Bangladesh: ಕನ್ನಡಿಗ ಕೆಎಲ್ ರಾಹುಲ್, ಪಂತ್ ಆಡೋದು ಫಿಕ್ಸ್; ಪ್ಲೇಯಿಂಗ್ ಇಲೆವೆನ್ ಬಗ್ಗೆ ಗಂಭೀರ್ ಮಾಹಿತಿ
ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿ ಬಳಿಕ ಭಾರತ ತಂಡ ಮತ್ತೆ ಟೆಸ್ಟ್ ಕ್ರಿಕೆಟ್ ಆಡಲು ಸಜ್ಜಾಗಿದೆ. ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದ್ದು, ಭಾರತ ತಂಡ ಸಿದ್ಧತೆ ಮಾಡಿಕೊಂಡಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ಇದು ಮೊದಲ ಟೆಸ್ಟ್ ಸರಣಿಯಾಗಿದ್ದು, ಸವಾಲುಗಳನ್ನು ಎದುರಿಸಿ, ಸರಣಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಸೆಪ್ಟೆಂಬರ್ 19ರಂದು ಚೆನ್ನೈನಲ್ಲಿ ಮೊದಲ ಪಂದ್ಯ ಆರಂಭವಾಗಲಿದ್ದು, ಭಾರತದ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎನ್ನುವ ಪ್ರಶ್ನೆಗೆ ಗೌತಮ್ ಗಂಭೀರ್ ಉತ್ತರ ಕೊಟ್ಟಿದ್ದಾರೆ.
ಪಂದ್ಯದ ಆರಂಭಕ್ಕೆ ಮುನ್ನಾದಿನ ಮಾಧ್ಯಮಗಳ ಜೊತೆ ಮಾತನಾಡಿರುವ ಮುಖ್ಯ ಕೋಚ್ ಗೌತಮ್ ಗಂಭೀರ್, ಮೊದಲ ಟೆಸ್ಟ್‌ನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ಕಣಕ್ಕಿಳಿಯುತ್ತಾರೆ ಎಂದು ಹೇಳಿದರು.

ಮೊದಲ ಟೆಸ್ಟ್‌ನಲ್ಲಿ ಸರ್ಫರಾಜ್ ಖಾನ್, ಧ್ರುವ್ ಜುರೆಲ್ ತಂಡದ ಭಾಗವಾಗಿರುವುದಿಲ್ಲ ಎಂದು ಖಚಿತಪಡಿಸಿದ್ದಾರೆ. ರಾಹುಲ್ ಮತ್ತು ರಿಷಬ್ ಪಂತ್ ಸೇರಿದಂತೆ ಹಿರಿಯ ಆಟಗಾರರು ಟೆಸ್ಟ್ ತಂಡಕ್ಕೆ ಮರಳುತ್ತಿರುವ ಕಾರಣ ಸರ್ಫರಾಜ್ ಖಾನ್ ಮತ್ತು ಧ್ರುವ ಜುರೆಲ್ ಬೆಂಚ್ ಕಾಯಬೇಕಾಗುತ್ತದೆ ಎಂದು ಹೇಳಿದ್ದಾರೆ.
ಯುವ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದಾರೆ ಎಂದ ಅವರು, ಪ್ಲೇಯಿಂಗ್ ಇಲೆವೆನ್‌ಗೆ ಹೊಂದಿಕೊಳ್ಳುವ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ಭವಿಷ್ಯದಲ್ಲಿ ಅವಕಾಸ ಪಡೆಯುತ್ತಾರೆ, ಸದ್ಯ ಅವರು ತಮ್ಮ ಅವಕಾಶಕ್ಕೆ ಕಾಯಬೇಕು ಎಂದರು.
ತಂಡದಲ್ಲಿ ಯಾರನ್ನೂ ಕೈಬಿಡುವುದು ಎನ್ನುವ ಯೋಜನೆಯಿಲ್ಲ ಬದಲಾಗಿ ಪ್ಲೇಯಿಂಗ್ ಇಲೆವೆನ್‌ಗೆ ಹೊಂದಿಕೊಳ್ಳುವ ಆಟಗಾರರನ್ನು ಆಯ್ಕೆ ಮಾಡುತ್ತೇವೆ. ರಿಷಬ್ ಪಂತ್ ವಾಪಸಾಗಿರುವ ಕಾರಣ ಧ್ರುವ್ ಜುರೆಲ್ ಕಾಯಬೇಕು, ಸರ್ಫರಾಜ್ ಖಾನ್ ಕೂಡ ಒಳ್ಳೆ ಆಟಗಾರ, ಆದರೆ ಅವಕಾಶ ಸಿಗುವವರೆಗೂ ಕಾಯಬೇಕಾಗುತ್ತದೆ ಎಂದರು.
ಸರಣಿ ಗೆಲ್ಲುವ ವಿಶ್ವಾಸ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ, ಬಾಂಗ್ಲಾದೇಶ ವಿರುದ್ಧದ ಸರಣಿಯನ್ನು ಗೆದ್ದು, ಮೊದಲ ಸ್ಥಾನ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಭಾರತಕ್ಕೆ ಆಗಮಿಸುವ ಮುನ್ನ ಪಾಕಿಸ್ತಾನದ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆದ್ದು ಇತಿಹಾಸ ನಿರ್ಮಿಸಿರುವ ಬಾಂಗ್ಲಾದೇಶ, ಭಾರತಕ್ಕೆ ಶಾಕ್ ಕೊಡುವ ಉತ್ಸಾಹದಲ್ಲಿದೆ.
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಸ್ಪಿನ್ ಸ್ನೇಹಿ ಪಿಚ್ ಇರಲಿದೆ ಎನ್ನಲಾಗಿದ್ದು, ಎರಡೂ ತಂಡಗಳಲ್ಲಿ ಉತ್ತಮ ಸ್ಪಿನ್ ಪಡೆ ಇರುವ ಕಾರಣ, ರೋಚಕ ಹಣಾಹಣಿಯನ್ನು ನಿರೀಕ್ಷೆ ಮಾಡಲಾಗಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕಣಕ್ಕಿಳಿಯಲು ಸಜ್ಜಾಗಿದ್ದು, ಇಬ್ಬರು ಆಟಗಾರರ ಪ್ರದರ್ಶನದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಭಾರತದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಆಕಾಶ್ ದೀಪ್ / ಮೊಹಮ್ಮದ್ ಸಿರಾಜ್.












Click it and Unblock the Notifications