ಈ ಬಾರಿ ವಿಶ್ವಕಪ್‌ನಲ್ಲಿ ಈತನೇ ಅತ್ಯುತ್ತಮ ಬೌಲರ್: ಭಾರತದ ಆಟಗಾರನ ಬಗ್ಗೆ ಪಾಕ್ ಮಾಜಿ ಆಟಗಾರನ ಪ್ರಶಂಸೆ
ಏಕದಿನ ವಿಶ್ವಕಪ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಅದ್ದೂರಿ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.
ಭಾರತ ಕೂಡ ವಿಶ್ವಕಪ್‌ಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಎಲ್ಲಾ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು, ಭಾರತ ಕೂಡ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದೆನಿಸಿಕೊಂಡಿದೆ.

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂತಿಖಾಬ್ ಆಲಂ ಅವರು ಭಾರತದ ಕುಲದೀಪ್ ಯಾದವ್‌ರನ್ನು ಈ ವಿಶ್ವಕಪ್‌ನ ಅತ್ಯುತ್ತಮ ಸ್ಪಿನ್ ಬೌಲರ್ ಎಂದು ಗುರುತಿಸಿದ್ದಾರೆ. ಹೌದು, ಮೊಣಕಾಲಿನ ಗಾಯದ ಬಳಿಕ ಭಾರತ ತಂಡಕ್ಕೆ ಮರಳಿರುವ ಕುಲದೀಪ್ ಯಾದವ್ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಎದುರಾಳಿಗಳಿಗೆ ತಲೆನೋವಾಗಿದ್ದಾರೆ.
ಏಷ್ಯಾಕಪ್‌ನಲ್ಲಿ ಮಾರಕ ಬೌಲಿಂಗ್
2023ರ ಏಕದಿನ ವಿಶ್ವಕಪ್‌ನಲ್ಲಿ ಕುಲದೀಪ್ ಯಾದವ್ ಭಾರತ ತಂಡದ ಪ್ರಮುಖ ಅಸ್ತ್ರವಾಗಲಿದ್ದಾರೆ ಎಂದು ಇಂತಿಖಾಬ್ ಆಲಂ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾ ಕಪ್‌ನಲ್ಲಿ ಟೀಮ್ ಇಂಡಿಯಾದ ಗೆಲುವಿನಲ್ಲಿ ಕುಲದೀಪ್ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಏಷ್ಯಾಕಪ್‌ನಲ್ಲಿ ಒಂಬತ್ತು ವಿಕೆಟ್ ಪಡೆಯುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿ ಕೂಡ ಪಡೆದುಕೊಂಡಿದ್ದಾರೆ. ಅಕ್ಟೋಬರ್ 5ರಿಂದ ಆರಂಭವಾಗುವ ಏಕದಿನ ವಿಶ್ವಕಪ್‌ನಲ್ಲಿ ಕೂಡ ಮಿಂಚಲು ಸಿದ್ಧವಾಗಿದ್ದಾರೆ.
ಮೊಣಕಾಲಿನ ಗಾಯದಿಂದ ಹಿಂತಿರುಗಿದ ನಂತರ, ಕುಲದೀಪ್ ಅವರು ತಮ್ಮ ತೋಳಿನ ವೇಗ ಮತ್ತು ಆಂಗಲ್‌ಗಳಲ್ಲಿ ಕೆಲಸ ಮಾಡಿದ್ದಾರೆ, ಮಧ್ಯಮ ಓವರ್‌ಗಳಲ್ಲಿ ವಿಕೆಟ್‌ಗಳನ್ನು ಪಡೆಯುವ ಮೂಲಕ ಎದುರಾಳಿಗಳನ್ನು ಕಟ್ಟಿಹಾಕುತ್ತಿದ್ದಾರೆ. ಅಹಮದಾಬಾದ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಕುಲದೀಪ್ ಯಾದವ್ ಪ್ರಮುಖ ಅಸ್ತ್ರವಾಗಲಿದ್ದಾರೆ ಎಂದು ಆಲಂ ಹೇಳಿದ್ದಾರೆ.
ಕಪ್ ಗೆಲ್ಲಲು ಭಾರತ ಪ್ರಬಲ ಸ್ಪರ್ಧಿ
"ಭಾರತವು ಏಷ್ಯಾಕಪ್‌ನಲ್ಲಿ ಆಡಿದ ಅದರಲ್ಲೂ ಫೈನಲ್ ಪಂದ್ಯದಲ್ಲಿ ತಂಡದ ಪ್ರದರ್ಶನ ನೋಡಿದರೆ, ಅದು ಎಂತ ಬಲಿಷ್ಠ ತಂಡ ಎನ್ನುವುದು ಕಾಣುತ್ತದೆ. ಸ್ಪಿನ್ ದಾಳಿ ಮಾರಕವಾಗಿದೆ. ಕುಲದೀಪ್ ಏಕದಿನ ವಿಶ್ವಕಪ್‌ನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ, ಎಲ್ಲಾ ಬ್ಯಾಟರ್ ಗಳಿಗೂ ಅವರನ್ನು ಎದುರಿಸುವುದು ದೊಡ್ಡ ಸವಾಲು" ಎಂದು ಆಲಂ ಪಿಟಿಐಗೆ ತಿಳಿಸಿದ್ದಾರೆ.
"ಜಡೇಜಾ ಮತ್ತು ಕುಲದೀಪ್ ಮಾರಕ ಬೌಲಿಂಗ್ ಮಾಡುತ್ತಾರೆ. ಕುಲದೀಪ್ ಮ್ಯಾಚ್ ವಿನ್ನರ್. ಅವರು ನನ್ನ ಅಭಿಪ್ರಾಯದಲ್ಲಿ ಈ ವಿಶ್ವಕಪ್‌ನಲ್ಲಿ ಅತ್ಯುತ್ತಮ ಸ್ಪಿನ್ನರ್. ಈಗ ರವಿಚಂದ್ರನ್ ಅಶ್ವಿನ್ ಕೂಡ ತಂಡಕ್ಕೆ ಮರಳಿ ಬಂದಿದ್ದಾರೆ ಎಂದು ಹೇಳಿದರು.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ, ಗಿಲ್ ಅಂತಹ ಪ್ರಮುಖ ಆಟಗಾರರು ಉತ್ತಮ ಫಾರ್ಮ್‌ನಲ್ಲಿದ್ದು, ಬೌಲಿಂಗ್ ದಾಳಿ ಕೂಡ ಮಾರಕವಾಗಿರುವ ಕಾರಣ ಭಾರತ ಏಕದಿನ ವಿಶ್ವಕಪ್ ಗೆಲ್ಲಲು ಪ್ರಮುಖ ಸ್ಪರ್ಧಿಯಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications