ಸುಷ್ಮಿತಾ ಸೇನ್ ಜೊತೆ ಲಲಿತ್ ಮೋದಿ ಫೋಟೋ ವೈರಲ್!
ಲಂಡನ್, ಜುಲೈ 14: ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಮಾಜಿ ಬಾಸ್ ಲಲಿತ್ ಮೋದಿ ಮತ್ತೆ ಸುದ್ದಿಯಲ್ಲಿದ್ದಾರೆ. ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ ಜೊತೆ ಮಾಜಿ ಭುವನ ಸುಂದರಿ ಸುಷ್ಮಿತಾ ಸೇನ್ ಫೋಟೋ ವೈರಲ್ ಆಗಿದೆ. ಅರೇ! ಏನಿದು ಎಂದು ಹುಬ್ಬೇರಿಸಿ ಕಾಮೆಂಟ್ ಮಾಡಿದವರಿಗೆ ಕೊನೆಗೆ ಲಲಿತ್ ಪ್ರತ್ಯುತ್ತರ ನೀಡಿದ್ದಾರೆ.
ನಾವಿಬ್ಬರು ಮದುವೆಯಾಗಲ್ಲ, ಸದ್ಯ ಡೇಟಿಂಗ್ ಮಾಡುತ್ತಿದ್ದೇವೆ, ಅದು(ಮದುವೆ) ಕೂಡಾ ಒಂದು ದಿನ ಸಂಭವಿಸಲಿದೆ ಎಂದು ಲಲಿತ್ ಮೋದಿ ಟ್ವೀಟ್ ಮಾಡಿದ್ದಾರೆ
ಕುಟುಂಬಗಳ ಜೊತೆ ಮಾಲ್ಡೀವ್ಸ್ ಸಾರ್ಡಿನಿಯಾ ಸುತ್ತುತ್ತಿರುವ ಜಾಗತಿಕ ಪ್ರವಾಸದ ನಂತರ ಲಂಡನ್‌ಗೆ ಹಿಂತಿರುಗಿದ್ದೇನೆ, ನನ್ನ #betterhalf ಸುಶ್ಮಿತಾ ಸೇನ್ ಜೊತೆ ಅಂತಿಮವಾಗಿ ಹೊಸ ಜೀವನಕ್ಕೆ ಹೊಸ ಆರಂಭ, ಚಂದ್ರಲೋಕದಲ್ಲಿ ತೇಲಾಡಿದಂಥ ಅನುಭವ ಎಂಬರ್ಥದಲ್ಲಿ ಮೋದಿ ಟ್ವೀಟ್ ಮಾಡಿದ್ದು, ಈ ಮೂಲಕ ಸುಶ್ಮಿತಾರನ್ನು ಮುಂದೊಂದು ದಿನ ಮದುವೆಯಾಗುತ್ತಿರುವುದಾಗಿ ಘೋಷಿಸಿದ್ದಾರೆ.

ಉದ್ಯಮಿ ಮತ್ತು ಕ್ರಿಕೆಟ್ ಆಡಳಿತಗಾರ ಲಲಿತ್ ಮೋದಿ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅಧಿಕೃತವಾಗಿ ಸಂತಸದ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಈ ವಿಷಯ ತಿಳಿದ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೆಲವರು ಹಳೆ ಟ್ವೀಟ್ಸ್ ಉಲ್ಲೇಖಿಸಿದ್ದಾರೆ.
ನವೆಂಬರ್ 29 ರಂದು ಜನಿಸಿದ ಲಲಿತ್ ಕುಮಾರ್ ಮೋದಿ ಭಾರತೀಯ ಉದ್ಯಮಿ ಮತ್ತು ಕ್ರಿಕೆಟ್ ನಿರ್ವಾಹಕರಾಗಿದ್ದವರು. ಹಣದ ಹೊಳೆ, ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಒದಗಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಹುಟ್ಟು, ಬೆಳವಣಿಗೆಗೆ ಕಾರಣರಾದವರು. ಅದರೆ, ನಂತರ ಐಪಿಎಲ್ ಭ್ರಷ್ಟಾಚಾರದ ಕೂಪದಲ್ಲಿ ಸಿಲುಕಿ ದೇಶ ತೊರೆದರು.2010 ರವರೆಗೆ ಮೂರು ವರ್ಷಗಳ ಕಾಲ ಪಂದ್ಯಾವಳಿಯನ್ನು ನಡೆಸಿದರು.
ಇದಲ್ಲದೆ, ಲಲಿತ್ ಮೋದಿ 2008-10 ರ ಚಾಂಪಿಯನ್ಸ್ ಲೀಗ್‌ನ ಅಧ್ಯಕ್ಷರಾಗಿದ್ದರು. ಅವರು 2005-10ರ ಅವಧಿಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, BCCI ಉಪಾಧ್ಯಕ್ಷರಾಗಿದ್ದರು. ಅವರು ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ (2005-09 ಮತ್ತು 2014-15) ಮತ್ತು ಪಂಜಾಬ್ ಕ್ರಿಕೆಟ್ ಸಂಸ್ಥೆಯ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಲಲಿತ್ ಮೋದಿ ವಿರುದ್ಧ ಮನಿಲಾಂಡ್ರಿಂಗ್ ಪ್ರಕರಣ ದಾಖಲಾಗಿತ್ತು. ಪ್ರಮುಖ ಆರೋಪಿ ಎನಿಸಿಕೊಂಡಿದ್ದ ಲಲಿತ್, ಇಂಗ್ಲೆಂಡಿಗೆ ಹಾರಿ, ಆಶ್ರಯ ಪಡೆದುಕೊಂಡರು. ಲಲಿತ್ ಮೋದಿ ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಭಾರತ ಮಾಡಿಕೊಂಡಿದ್ದ ಮನವಿಯನ್ನು ಇಂಟರ್ ಪೋಲ್ ತಿರಸ್ಕರಿಸಿದೆ.
Recommended Video
1994ರಲ್ಲಿ ಭುವನ ಸುಂದರಿ ಎನಿಸಿಕೊಂಡ ಸುಶ್ಮಿತಾ ಸೇನ್ ನಂತರ ಬಾಲಿವುಡ್ ನಟಿಯಾಗಿ ಜನಪ್ರಿಯತೆ ಗಳಿಸಿದವರು, ಫಿಲಂಫೇರ್ ಸೇರಿದಂತೆ ಅನೇಕ ಪ್ರಶಸ್ತಿ ಗಳಿಸಿದ್ದಾರೆ. ಒಟಿಟಿಯ ಜನಪ್ರಿಯ ಸರಣಿಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇಬ್ಬರು ಮಕ್ಕಳನ್ನು ದತ್ತು ಪಡೆದುಕೊಂಡಿದ್ದಾರೆ.ರೊಹ್ಮನ್ ಶಾಲ್ ಎಂಬಾತನ ಜೊತೆ ಡೇಟಿಂಗ್ ನಲ್ಲಿದ್ದ ಸುಶ್ಮಿತಾ ಸದ್ಯ ಲಲಿತ್ ಮೋದಿ ಜೊತೆ ಕಾಣಿಸಿಕೊಂಡಿದ್ದಾರೆ.












Click it and Unblock the Notifications