Karun Nair: ಕನ್ನಡಿಗ ಕರುಣ್ ನಾಯರ್‌ಗೆ ಮತ್ತೊಂದು ಅವಕಾಶ ಕೊಟ್ಟ ಕ್ರಿಕೆಟ್!
ಎರಡೂ ವರ್ಷಗಳ ಹಿಂದೆ "ಪ್ರೀತಿಯ ಕ್ರಿಕೆಟ್ ನನಗೆ ಇನ್ನೊಂದು ಅವಕಾಶ ಕೊಡು" ಎಂದು ಕೇಳಿದ್ದ ಕನ್ನಡಿಗ ಕರುಣ್ ನಾಯರ್ ಗೆ ಅವರ ಪ್ರೀತಿಯ ಕ್ರಿಕೆಟ್ ಕೊನೆಗೂ ಮತ್ತೊಂದು ಅವಕಾಶ ಕೊಟ್ಟಿದೆ. ಮಾರ್ಚ್ 28, 2017 ರಂದು ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡಕ್ಕಾಗಿ ಆಡಿದ್ದ ಕರುಣ್ ನಾಯರ್ ಬಳಿಕ ಅಜಿಂಕ್ಯ ರಹಾನೆ ಬಂದಿದ್ದರಿಂದ ಸ್ಥಾನ ಕಳೆದುಕೊಂಡಿದ್ದರು.
ವಿರೇಂದ್ರ ಸೆಹ್ವಾಗ್ ಬಳಿಕ ಭಾರತ ತಂಡಕ್ಕಾಗಿ ತ್ರಿಶತಕ ಗಳಿಸಿದ ಕರುಣ್ ನಾಯರ್ ಅವರನ್ನು ಬಿಸಿಸಿಐ ಕಡೆಗಣಿಸುತ್ತಲೇ ಬಂದಿತ್ತು. ಕರ್ನಾಟಕ ತಂಡಕ್ಕಾಗಿ ಆಡುತ್ತಿದ್ದ ಅವರು ಫಾರ್ಮ್ ಕಳೆದುಕೊಂಡರು. ಕರ್ನಾಟಕ ಕೂಡ ಅವರನ್ನು ರಣಜಿ ತಂಡದಿಂದ ಕೈಬಿಟ್ಟಿತ್ತು. ತಮ್ಮ ಕ್ರಿಕೆಟ್ ಜೀವನವೇ ಮುಗಿದುಹೋಯಿತು ಎನ್ನುವ ಹಂತದಲ್ಲಿದ್ದ ಕರುಣ್ ನಾಯರ್ 2022 ರಲ್ಲಿ ಹತಾಶೆಯಿಂದ ಕ್ರಿಕೆಟ್ ನನಗೆ ಇನ್ನೊಂದು ಅವಕಾಶ ಕೊಡು ಎಂದು ಟ್ವೀಟ್ ಮಾಡಿದ್ದರು.

ಫೀನಿಕ್ಸ್‌ನಂತೆ ಎದ್ದು ಬಂದ ಕರುಣ್
ಕರ್ನಾಟಕ ಕ್ರಿಕೆಟ್ ತಂಡದಲ್ಲಿ ಅವಕಾಶ ಕಳೆದುಕೊಂಡ ಬಳಿಕ 2023ರಲ್ಲಿ ವಿದರ್ಭ ತಂಡವನ್ನು ಸೇರಿಕೊಂಡರು. ಅವಕಾಶ ಸಿಗಲಿಲ್ಲ ಎಂದು ಕೊರಗುತ್ತಾ ಕೂರಲಿಲ್ಲ, ತಮ್ಮ ಆಟವನ್ನು ಸುಧಾರಿಸಿಕೊಂಡರು, ಎಡಬಿಡದೆ ಅಭ್ಯಾಸ ನಡೆಸಿದರು. ಬಳಿಕ ನಡೆದಿದ್ದು ಇತಿಹಾಸ, ದೇಶೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಬರೆದ ಅವರು, ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಕೂಡ ಆಡಿದರು.
ದೇಶೀಯ ಕ್ರಿಕೆಟ್‌ನ ಮೊದಲ ಋತುವಿನಲ್ಲೇ ಅವರು ಫಾರ್ಮ್‌ಗೆ ಮರಳಿದರು. ಕೌಂಟಿ ಕ್ರಿಕೆಟ್‌ನಲ್ಲಿ ಮೂರು ಇನ್ನಿಂಗ್ಸ್‌ಗಳಲ್ಲಿ ಒಂದು ಶತಕ ಸೇರಿದಂತೆ 249 ರನ್ ಗಳಿಸಿದ ನಂತರ, ನಾಯರ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ 7 ಇನ್ನಿಂಗ್ಸ್‌ಗಳಲ್ಲಿ 218 ರನ್, ವಿಜಯ್ ಹಜಾರೆ ಟ್ರೋಫಿಯ 7 ಇನ್ನಿಂಗ್ಸ್‌ಗಳಲ್ಲಿ 230 ರನ್ ಮತ್ತು ರಣಜಿ ಟ್ರೋಫಿಯಲ್ಲಿ 17 ಇನ್ನಿಂಗ್ಸ್‌ಗಳಲ್ಲಿ 690 ರನ್ ಗಳಿಸಿದರು.
2024 ರಲ್ಲಿ ನಾರ್ಥಾಂಪ್ಟನ್‌ಶೈರ್ ಜೊತೆ ಮತ್ತೊಂದು ಕೌಂಟಿ ಪಂದ್ಯಕ್ಕಾಗಿ ಇಂಗ್ಲೆಂಡ್‌ಗೆ ಮರಳಿದರು. ಅವರು 11 ಇನ್ನಿಂಗ್ಸ್‌ಗಳನ್ನು ಆಡಿದರು, 48.70 ಸರಾಸರಿಯಲ್ಲಿ 487 ರನ್ ಗಳಿಸಿದರು, ಇದರಲ್ಲಿ ಒಂದು ದ್ವಿಶತಕ ಮತ್ತು ಮೂರು ಅರ್ಧಶತಕಗಳು ಸೇರಿವೆ. ಇದು ಕರುಣ್ ನಾಯರ್‌ಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿತು.
ಕರುಣ್ ನಾಯರ್ ಅವರ ಆಯ್ಕೆ ಬಗ್ಗೆ ಮಾತನಾಡಿದ ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ "ಕರುಣ್ ನಾಯರ್ ಸಾಕಷ್ಟು ರನ್ ಗಳಿಸಿದ್ದಾರೆ, ಕೌಂಟಿ ಕ್ರಿಕೆಟ್ ಆಡಿದ್ದಾರೆ. ವಿರಾಟ್ ಕೊಹ್ಲಿ ಅವರು ಇಲ್ಲದೆ ಇರುವುದರಿಂದ, ಅನುಭವಿಗಳ ಕೊರತೆಯಿದ್ದು, ಅವರ ಅನುಭವ ಸಹಾಯಕ್ಕೆ ಬರುತ್ತದೆ ಎಂದು ಭಾವಿಸಿದ್ದೇವೆ" ಎಂದಿದ್ದಾರೆ.












Click it and Unblock the Notifications