ಫಿಫಾ ವಿಶ್ವಕಪ್ 2022: ಮೆಸ್ಸಿ ಮ್ಯಾಜಿಕ್ ಬಗ್ಗೆ ಮೋದಿ ಟ್ಟೀಟ್
ನವದೆಹಲಿ, ಡಿಸೆಂಬರ್ 19: ಫಿಫಾ ವಿಶ್ವಕಪ್ 2022ರಲ್ಲಿ ಅರ್ಜೆಂಟೀನಾ ರೋಚಕ ಗೆಲುವಿನ ಬಗ್ಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿ ಅಭಿನಂದನೆ ತಿಳಿಸಿದ್ದಾರೆ.
ಭಾನುವಾರ ಅರ್ಜೆಂಟೀನಾ ವಿಶ್ವಕಪ್ ಗೆದ್ದಿದ್ದಕ್ಕಾಗಿ ಅಭಿನಂದಿಸಿದ ಪ್ರಧಾನಿ ಮೋದಿ, ಫೈನಲ್ ಪಂದ್ಯವು ಅತ್ಯಂತ ರೋಮಾಂಚಕ ಫುಟ್ಬಾಲ್ ಪಂದ್ಯಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. ಅರ್ಜೆಂಟೀನಾ ಮತ್ತು ಮೆಸ್ಸಿಯ ಲಕ್ಷಾಂತರ ಭಾರತೀಯ ಅಭಿಮಾನಿಗಳು ಭವ್ಯವಾದ ಗೆಲುವಿನಲ್ಲಿ ಸಂತೋಷಪಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದು ಅತ್ಯಂತ ರೋಮಾಂಚಕ ಫುಟ್ಬಾಲ್ ಪಂದ್ಯಗಳಲ್ಲಿ ಒಂದಾಗಿ ನೆನಪಿನಲ್ಲಿ ಉಳಿಯುತ್ತದೆ! FIFA ವಿಶ್ವಕಪ್ ಚಾಂಪಿಯನ್ ಆದ ಅರ್ಜೆಂಟೀನಾಗೆ ಅಭಿನಂದನೆಗಳು! ಅವರು ಪಂದ್ಯಾವಳಿಯ ಮೂಲಕ ಅದ್ಭುತವಾಗಿ ಆಡಿದ್ದಾರೆ. ಅರ್ಜೆಂಟೀನಾ ಮತ್ತು ಮೆಸ್ಸಿಯ ಲಕ್ಷಾಂತರ ಭಾರತೀಯ ಅಭಿಮಾನಿಗಳು ಭವ್ಯವಾದ ವಿಜಯದಲ್ಲಿ ಸಂತೋಷಪಡುತ್ತಾರೆ! ಫೈನಲ್‌ನಲ್ಲಿ ಫ್ರಾನ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳಿಂದ ಸೋಲಿಸಿ ಅರ್ಜೆಂಟೀನಾ ವಿಶ್ವಕಪ್ ಗೆದ್ದುಕೊಂಡಿತು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಟ್ವೀಟ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ಪೆನಾಲ್ಟಿ ಶೂಟೌಟ್‌ನಲ್ಲಿ ಮೆಸ್ಸಿ ಮ್ಯಾಜಿಕ್:
ಫಿಫಾ ವಿಶ್ವಕಪ್ ಇತಿಹಾಸದಲ್ಲಿ ರಣರೋಚಕ ಫೈನಲ್ ಪಂದ್ಯದಲ್ಲಿ ಕೊನೆಗೂ ಅರ್ಜೆಂಟೀನಾ ಜಯ ಗಳಿಸುವಲ್ಲಿ ಯಶಸ್ವಿಯಾಗಿದೆ. ಕತಾರ್ ನ ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಎರಡೂ ತಂಡಗಳ ಪಂದ್ಯದ 90 ನಿಮಿಷದ ಅಂತ್ಯಕ್ಕೆ 2-2 ಗೋಲುಗಳಲ್ಲಿ ಸಮಬಲ ಸಾಧಿಸಿದ್ದವು. ನಂತರ ಹೆಚ್ಚುವರಿ 30 ನಿಮಿಷಗಳ ಅವಧಿಯಲ್ಲಿ ಉಭಯ ತಂಡಗಳು ತಲಾ ಒಂದು ಗೋಲು ಗಳಿಸುವ ಮೂಲಕ ಮತ್ತೆ 3-3 ರಲ್ಲಿ ಸಮಬಲದಲ್ಲಿ ಮುಕ್ತಾಯವಾಯಿತು.

ಹೆಚ್ಚುವರಿ ಸಮಯದಲ್ಲಿ ಕೂಡ ಡ್ರಾನಲ್ಲಿ ಅಂತ್ಯಗೊಂಡ ಕಾರಣ, ಪೆನಾಲ್ಟಿ ಶೂಟೌಟ್ ಮೂಲಕ ವಿಜೇತರನ್ನು ನಿರ್ಣಯಿಸಬೇಕಾಯಿತು. ಫ್ರಾನ್ಸ್‌ನ ಎಂಬಾಪೆ ಮೊದಲ ಪೆನಾಲ್ಟಿ ಶೂಟೌಟ್‌ನಲ್ಲಿ ಯಶಸ್ವಿಯಾಗಿ ಗೋಲು ಗಳಿಸಿದರು. ನಂತರ ಮೆಸ್ಸಿ ಗೋಲು ಗಳಿಸುವ ಮೂಲಕ ಸಮಬಲಗೊಳಿಸಿದರು. ಆದರೆ ನಂತರದ ಎರಡು ಅವಕಾಶಗಳನ್ನು ಫ್ರಾನ್ಸ್ ಕೈಚೆಲ್ಲಿದರೆ, ಅರ್ಜೆಂಟೀನಾ ಸತತವಾಗಿ ನಾಲ್ಕು ಅವಕಾಶಗಳಲ್ಲಿ ಗೋಲು ಗಳಿಸುವ ಮೂಲಕ ಜಯ ಗಳಿಸಿತು.












Click it and Unblock the Notifications