KL Rahul: ಡೆಲ್ಲಿ ಕ್ಯಾಪಿಟಲ್ಸ್‌ಗೆ ಶಾಪವಾಯ್ತಾ ಕೆಎಲ್ ರಾಹುಲ್ ಕಾಂತಾರ ಸೆಲೆಬ್ರೇಷನ್?
ಐಪಿಎಲ್ 2025ರ ಆವೃತ್ತಿಯಲ್ಲಿ ಮೊದಲ ಆರು ಪಂದ್ಯಗಳಲ್ಲಿ ಐದು ಪಂದ್ಯಗಳನ್ನೂ ಗೆದ್ದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಬಳಿಕ ಗೆಲುವಿನ ದಾರಿ ಕಳೆದುಕೊಂಡಿತು. ಬಳಿಕ ಆಡಿದ 7 ಪಂದ್ಯಗಳಲ್ಲಿ ಒಂದು ಪಂದ್ಯ ಮಳೆಯಿಂದ ರದ್ದಾದರೆ, ಒಂದು ಪಂದ್ಯ ಗೆದ್ದು ಐದು ಪಂದ್ಯಗಳನ್ನು ಸೋತಿದೆ. ಬುಧವಾರ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ.
ಗುಜರಾತ್ ಟೈಟಾನ್ಸ್, ಆರ್ ಸಿಬಿ, ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದು ಮೊದಲ ಎರಡು ಸ್ಥಾನಗಳಿಗೆ ನಾಲ್ಕು ಪಂದ್ಯಗಳು ಹೋರಾಡಲಿವೆ. ಆರಂಭದಲ್ಲಿ ಸತತ ಪಂದ್ಯಗಳನ್ನು ಗೆದ್ದು ಪ್ಲೇಆಫ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ಬಳಿಕ ಸತತ ಸೋಲಿನ ಮೂಲಕ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ.

ಕೆಎಲ್ ರಾಹುಲ್ ಸೆಲೆಬ್ರೇಷನ್ ಶಾಪ!
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್‌ನಿಂದ ಹೊರಬೀಳುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ಕೆಎಲ್ ರಾಹುಲ್ ಕಾಂತಾರ ಆಚರಣೆಗೂ, ಡೆಲ್ಲಿ ಕ್ಯಾಪಿಟಲ್ಸ್ ವೈಫಲ್ಯಕ್ಕೂ ಸಂಬಂಧವಿದೆ ಎಂದು ಚರ್ಚೆ ಮಾಡುತ್ತಿದ್ದಾರೆ. ಇದು ಅವರವರ ನಂಬಿಕೆಗೆ ಬಿಟ್ಟ ವಿಚಾರವಾಗಿದೆ. ತಂಡ ಸ್ಥಿರವಾದ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು, ಪ್ರಮುಖ ಆಟಗಾರರು ಕೈಕೊಟ್ಟಿದ್ದು ಡೆಲ್ಲಿ ಕ್ಯಾಪಿಟಲ್ಸ್‌ನ ಇಂದಿನ ಸ್ಥಿತಿಗೆ ಕಾರಣ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ 53 ಎಸೆತಗಳಲ್ಲಿ 7 ಬೌಂಡರಿ 6 ಅಮೋಘ ಸಿಕ್ಸರ್ ಸಹಿತ ಅಜೇಯ 93 ರನ್ ಗಳಿಸಿದ್ದರು. ತಂಡವನ್ನು ಗೆಲುವಿನ ದಡ ಸೇರಿಸಿದ ಬಳಿಕ ಮೈದಾನದಲ್ಲೇ ಇದು ನನ್ನ ಅಂಗಳ, ನನ್ನ ಊರು ಎಂದು ಬ್ಯಾಟ್‌ನಿಂದ ವೃತ್ತ ಬರೆಯುವ ಮೂಲಕ ಸಂಭ್ರಮಾಚರಣೆ ಮಾಡಿದ್ದರು.
ಬಳಿಕ ಮಾತನಾಡಿದ್ದ ಅವರು, ಕಾಂತಾರ ಸಿನಿಮಾವೇ ನನ್ನ ಸಂಭ್ರಮಾಚರಣೆಗೆ ಕಾರಣ ಎಂದು ಹೇಳಿದ್ದರು. ಬಳಿಕ ಕಾಂತಾರ ಸಿನಿಮಾದ ಅದೇ ರೀತಿಯ ದೃಶ್ಯ ವೈರಲ್ ಕೂಡ ಆಗಿತ್ತು. ಆದರೆ ಈ ಗೆಲುವಿನ ಬಳಿಕ ಡೆಲ್ಲಿಗೆ ಅದೃಷ್ಟ ಕೈಕೊಟ್ಟಿತ್ತು, ಸುಲಭವಾಗಿ ಗೆಲ್ಲಬಹುದಾಗಿದ್ದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿತು. ಅದಾದ ಬಳಿಕ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯ ಟೈ ಆಗಿದ್ದರಿಂದ ಸೂಪರ್ ಓವರ್ ನಲ್ಲಿ ಡೆಲ್ಲಿ ಗೆಲುವು ಕಂಡಿತ್ತು.
ನಂತರದ ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲು ಕಂಡರೆ, ಎಲ್‌ಎಸ್‌ಜಿ ವಿರುದ್ಧ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಕೂಡ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಬಳಿಕ ಆರ್ ಸಿಬಿ, ಕೆಕೆಆರ್, ಗುಜರಾತ್ ಟೈಟಾನ್ಸ್, ಮುಂಬೈ ಇಂಡಿಯನ್ಸ್ ವಿರುದ್ಧ ಸತತವಾಗಿ ಸೋಲು ಕಂಡಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯ ಅರ್ಧಕ್ಕೆ ನಿಲ್ಲದೇ ಇದ್ದಿದ್ದರೆ ಡೆಲ್ಲಿ ಕ್ಯಾಪಿಟಲ್ಸ್ ಆ ಪಂದ್ಯದಲ್ಲೂ ಬಹುತೇಕ ಸೋಲುವ ಹಂತದಲ್ಲಿತ್ತು. ಈಗ ಅಧಿಕೃತವಾಗಿ ಪ್ಲೇಆಫ್‌ನಿಂದ ಹೊರಬಿದ್ದಿದ್ದು ಪಂಜಾಬ್ ಕಿಂಗ್ಸ್ ವಿರುದ್ಧ ಈ ಆವೃತ್ತಿಯ ತಮ್ಮ ಕೊನೆಯ ಪಂದ್ಯವನ್ನು ಆಡಲಿದೆ.












Click it and Unblock the Notifications