Ind vs Aus: ಜಡೇಜಾ ತೋಳಿಗೆ ಧರಿಸಿದ್ದ ಕಪ್ಪು ಪಟ್ಟಿ ತೆಗೆಸಿದ ಅಂಪೈರ್; ತೀವ್ರ ಆಕ್ರೋಶ
ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಭಾರತಕ್ಕೆ ಅಂಪೈರ್ ಗಳು ಹೊಸ ತಲೆನೋವಾಗಿದ್ದಾರೆ. ಅಂಪೈರ್ ನಡೆದುಕೊಂಡ ರೀತಿ ಬಗ್ಗೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲ ಶುಭಮನ್ ಗಿಲ್ ವಿಚಾರದಲ್ಲಿ ಅಂಪೈರ್ ಗಳು ನಡೆದುಕೊಂಡ ರೀತಿ ಓಕೆ ಅನಿಸಿದರೂ ರವೀಂದ್ರ ಜಡೇಜಾ ಜೊತೆ ನಡೆದುಕೊಂಡ ರೀತಿಗೆ ಮಾತ್ರ ಅಭಿಮಾನಿಗಳು ಕೋಪಗೊಂಡಿದ್ದರು.
ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಹೊಡೆತವನ್ನು ಲಾಂಗ್-ಆಫ್‌ನಲ್ಲಿ ಉತ್ತಮ ಕ್ಯಾಚ್ ಪಡೆದ ಭಾರತ ತಂಡದ ಉಪನಾಯಕ ಶುಭಮನ್ ಗಿಲ್‌ಗೆ ಅಂಪೈರ್‌ಗಳು ಎಚ್ಚರಿಕೆ ನೀಡಿದರು. ವರುಣ್ ಚಕ್ರವರ್ತಿ ಅವರ ಮೊದಲ ಎಸೆತ ಎದುರಿಸಿದ ಹೆಡ್ ಸಿಕ್ಸರ್ ಬಾರಿಸಲು ಹೋಗಿ ಕ್ಯಾಚ್ ಕೊಟ್ಟು ಔಟಾದರು. ಶುಭಮನ್ ಗಿಲ್ ಹಲವು ಮೀಟರ್ ಓಡಿ ಬಂದು ಕ್ಯಾಚ್ ಹಿಡಿದು ಚೆಂಡನ್ನು ಎಸೆದು ಸಂಭ್ರಮಿಸಿದರು.

ಶುಭಮನ್ ಗಿಲ್ ಕ್ಯಾಚ್ ಹಿಡಿದ ತಕ್ಷಣವೇ ಅದನ್ನು ಎಸೆದಿದ್ದು ಅಂಪೈರ್ ಗಳಿಗೆ ಇಷ್ಟವಾಗಲಿಲ್ಲ. ಅಂಪೈರ್ ಆಗಿದ್ದ ರಿಚರ್ಡ್ ಇಲ್ಲಿಂಗ್‌ವರ್ತ್ ಇದನ್ನು ಗಮನಿಸಿದರು. ಮತ್ತು ಗಿಲ್ ಅವರನ್ನು ಕರೆದು ಈ ಬಗ್ಗೆ ಎಚ್ಚರಿಕೆ ಕೊಟ್ಟರು. ಕ್ಯಾಚ್ ಹಿಡಿದ ತಕ್ಷಣ ಚೆಂಡನ್ನು ಎಸೆಯದಂತೆ ಸೂಚನೆ ಕೊಟ್ಟರು.
ಕಪ್ಪು ಪಟ್ಟಿ ತೆಗೆಸಿದ ಅಂಪೈರ್
ಭಾರತದ ದೇಶೀಯ ಕ್ರಿಕೆಟ್‌ನಲ್ಲಿ ಲೆಜೆಂಡರಿ ಕ್ರಿಕೆಟರ್ ಎನಿಸಿಕೊಂಡಿರುವ ಪದ್ಮಾಕರ್ ಶಿವಾಳ್ಕರ್ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದು ಅವರ ಸ್ಮರಣಾರ್ಥ ಮತ್ತು ಗೌರವ ಸಲ್ಲಿಸಲು ಭಾರತ ತಂಡದ ಆಟಗಾರರು ಕಪ್ಪು ಧರಿಸಿ ಆಡುತ್ತಿದ್ದಾರೆ. ಆದರೆ ರವೀಂದ್ರ ಜಡೇಜಾ ಬೌಲಿಂಗ್ ಮಾಡಲು ಬಂದಾಗ ಅಂಪೈರ್ ಜಡೇಜಾಗೆ ತೋಳಿನಲ್ಲಿ ಧರಿಸಿದ್ದ ಕಪ್ಪು ಪಟ್ಟಿಯನ್ನು ತೆಗೆಯುವಂತೆ ಸೂಚನೆ ಕೊಟ್ಟರು. ಅಂಪೈರ್ ಮಾತಿಗೆ ಬೆಲೆ ಕೊಟ್ಟ ಜಡೇಜಾ ಕಪ್ಪು ಪಟ್ಟಿ ತೆಗೆದು ಬೌಲಿಂಗ್ ಮಾಡಿದರು. ಇದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.












Click it and Unblock the Notifications